ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಏಳು ವಿಕೆಟ್ ಗಳಿಂದ ಸೋಲಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 189 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ 18.4 ಓವರ್ ಗಳಲ್ಲಿ 190 ರನ್ ಗಳಿಸಿ ಪಂದ್ಯ ಗೆದ್ದಿತು.
ಪೃಥ್ವಿ ಶಾ 38 ಎಸೆತಗಳಲ್ಲಿ 9 ಬೌಂಡರಿ, ಮೂರು ಸಿಕ್ಸರ್ ಗಳೊಂದಿಗೆ 72 ರನ್ ಬಾರಿಸಿದರೆ, ಶಿಖರ್ ಧವನ್ 54 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಶಿಖರ್ ಗಳೊಂದಿಗೆ 85 ರನ್ ಕಲೆ ಹಾಕಿದರು. ಈ ಜೊತೆಯಾಟ ಮುರಿಯುವಲ್ಲಿ ಆಲ್ರೌಂಡರ್ ಡ್ವೇನ್ ಬ್ರಾವೋ ಯಶಸ್ವಿಯಾದರು.
ನಂತರ ಬಂದ ಸ್ಟೊಯಿನಿಸ್ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ರಿಷಭ್ ಪಂತ್, ಎರಡು ಬೌಂಡರಿ ನೆರವಿನಿಂದ 15 ರನ್ ಗಳಿಸಿ ಔಟಾಗದೆ ಉಳಿದರು. ಚೆನ್ನೈ ಪರ ಶಾರ್ದೂಲ್ ಎರಡು ವಿಕೆಟ್ ಪಡೆದರು. ಅರ್ಧಶತಕ ವೀರ ಗಬ್ಬರ್ ಖ್ಯಾತಿಯ ಶಿಖರ್ ಧವನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಡೆಲ್ಲಿ ಪರ ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬ್ಯಾಟಿಂಗ್ ಮಾಡಿದ ನೂತನ ನಾಯಕ ರಿಷಬ್ ಪಂತ್ ಅವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.