ಮುಂಬಯಿ: ನೂತನ ಬಿಸಿಸಿಐ (BCCI) ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ (Devjit Saikia) ಅವರು ನೇಮಕಗೊಂಡಿದ್ದಾರೆ. ಇಂದು(ಭಾನುವಾರ) ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯ (ಎಸ್‌ಜಿಎಂ)ಯಲ್ಲಿ ಸೈಕಿಯಾ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು. ಖಜಾಂಚಿಯಾಗಿ ಪ್ರಭತೇಜ್ ಸಿಂಗ್ ಭಾಟಿಯಾ(Prabhtej Singh Bhatia) ಆಯ್ಕೆಯಾದರು.
ಡಿಸೆಂಬರ್ 1 ರಂದು ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಂಡ ನಂತರ ಬಿಸಿಸಿಐ ಕಾರ್ಯದರ್ಶಿ ಹುದ್ದೆ ಖಾಲಿಯಾಗಿತ್ತು. ಸೈಕಿಯಾ ಅವರನ್ನು ಹಂಗಾಮಿ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಇದೀಗ ಪೂರ್ಣ ಅಧಿಕಾರದೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.
56 ವರ್ಷದ ಸೈಕಿಯಾ, ಪ್ರಥಮ ದರ್ಜೆಯಲ್ಲಿ ಅಸ್ಸಾಂ ಪರ 4 ಪಂದ್ಯ ಆಡಿದ್ದಾರೆ. 53 ರನ್ ಮತ್ತು 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕ್ರಿಕೆಟ್ ಬಳಿಕ ಸೈಕಿಯಾ 28 ನೇ ವಯಸ್ಸಿನಲ್ಲಿ ವಕೀಲರಾದರು ಮತ್ತು ಗುವಾಹಟಿ ಹೈಕೋರ್ಟ್‌ನಲ್ಲಿ ಕೆಲ ಕಾಲ ಅಭ್ಯಾಸ ನಡೆಸಿದ್ದರು.
ಇದನ್ನೂ ಓದಿ Virat Kohli: ಕೊಹ್ಲಿಗೆ ಆಶೀರ್ವಚನ ನೀಡಿದ ಪ್ರೇಮಾನಂದ ಮಹಾರಾಜ್; ಅಬ್ಬರಿಸೋದು ಖಚಿತ ಎಂದ ಫ್ಯಾನ್ಸ್
ಕಳೆದ ವರ್ಷದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI Profit) ಆದಾಯದಲ್ಲಿ ಭಾರೀ ಹೆಚ್ಚಳವಾಗಿತ್ತು. 4200 ಕೋಟಿ ರೂ. ಗಳು ಹೆಚ್ಚುವರಿಯಾಗಿ ಬಂದಿತ್ತು. ಒಟ್ಟಾರೆ 2024ರಲ್ಲಿ ಬಿಸಿಸಿಐಗೆ 20,686 ಕೋಟಿ ರೂ. ಗಳ ಆದಾಯ ಬಂದಿತ್ತು. ಇದರಲ್ಲಿ ವಿಶೇಷವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿ ಹಾಗೂ ದ್ವಿಪಕ್ಷೀಯ ಸರಣಿಗಳ ಮಾಧ್ಯಮ ಪ್ರಸಾರದ ಹಕ್ಕುಗಳಿಂದ ಬಿಸಿಸಿಐಗೆ ಹೆಚ್ಚಿನ ಆದಾಯ ಸಂದಾಯವಾಗಿದೆ.
ಭಾರತವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮಾರುಕಟ್ಟೆಯಾಗಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗಳಿಸುವ ಆದಾಯದಲ್ಲಿ ಬಿಸಿಸಿಐ ಸಿಂಹಪಾಲು ಪಡೆಯುತ್ತದೆ. 2022ರ ಜೂನ್‌ನಲ್ಲಿ ಐದು ವರ್ಷಗಳ ಅವಧಿಗೆ ಐಪಿಎಲ್ ಮಾಧ್ಯಮ ಹಕ್ಕುಗಳನ್ನು 48,390 ಕೋಟಿ ರೂ. ಗಳಿಗೆ ಮಾರಾಟ ಮಾಡಲಾಗಿತ್ತು.
ಬಿಸಿಸಿಐ 2023-24ರ ಆರ್ಥಿಕ ಸಾಲಿನಲ್ಲಿ 7,476 ಕೋಟಿ ಗಳಿಸುವ ನಿರೀಕ್ಷೆಯಿದೆ ಆದರೆ ವಾಸ್ತವಿಕ ಆದಾಯವು 8,995 ಕೋಟಿ ರೂ. ಸಾಮಾನ್ಯ ನಿಧಿ ಕೂಡ 6,365 ಕೋಟಿಯಿಂದ 7,988 ಕೋಟಿಗೆ ಏರಿಕೆಯಾಗಿದೆ. 2024-25ರ ಆರ್ಥಿಕ ಸಾಲಿನಲ್ಲಿ ಬಿಸಿಸಿಐ 10,054 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ ಮತ್ತು ಒಟ್ಟು ಬಜೆಟ್ ವೆಚ್ಚವನ್ನು 2,348 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಬಿಸಿಸಿಐನ 38 ರಾಜ್ಯಗಳ ಕ್ರಿಕೆಟ್ ಮಂಡಳಿಗಳನ್ನು ಹೊಂದಿದ್ದು, ಇವುಗಳು ವಾರ್ಷಿಕ ಅನುದಾನವನ್ನು ಅವಲಂಬಿಸಿವೆ. ಬಿಸಿಸಿಐನ ದಾಖಲೆಗಳ ಪ್ರಕಾರ ರಾಜ್ಯದ ಪ್ರತಿಯೊಂದು ಕ್ರಿಕೆಟ್ ಮಂಡಳಿಯು ವಾರ್ಷಿಕವಾಗಿ ಸುಮಾರು 499 ಕೋಟಿ ರೂ. ಗಳನ್ನು ಪಡೆಯಲಿವೆ.