ಬ್ರುಸೆಲ್ಸ್ (ಬೆಲ್ಜಿಯಂ): ಭಾರತದ ಸ್ಟೀಪಲ್ ಚೇಸರ್ ಅವಿನಾಶ್ ಸಾಬ್ಳೆ(Avinash Sable) ಡೈಮಂಡ್ ಲೀಗ್ ಫೈನಲ್ಸ್(Diamond League final)ನಲ್ಲಿಯೂ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಶುಕ್ರವಾರ ತಡರಾತ್ರಿ ನಡೆದ 3000 ಮೀ. ಸ್ಟೀಪಲ್‌ಚೇಸ್ ಫೈನಲ್ ಪಂದ್ಯದಲ್ಲಿ ಸಾಬ್ಳೆ 8 ನಿಮಿಷ ಮತ್ತು 17.09 ಸೆಕೆಂಡುಗಳಲ್ಲಿ ಗುರಿ ತಲುಪಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇಂದು ನಡೆಯುವ ಜಾವೆಲಿನ್ ಫೈನಲ್ ಸ್ಪರ್ಧೆಯಲ್ಲಿ ಅವಳಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಕಣಕ್ಕಿಳಿಯಲಿದ್ದಾರೆ.
ಹುಟ್ಟುಹಬ್ಬದ ದಿನವೇ ಫೈನಲ್‌ನಲ್ಲಿ ಕಣಕ್ಕಿಳಿದಿದ್ದ ಸಾಬ್ಳೆ ಸ್ಮರಣೀಯ ಪ್ರದರ್ಶನ ತೋರುವಲ್ಲಿ ವಿಫಲರಾದರು. 9ನೇ ಸ್ಥಾನಿಯಾಗಿ ಓಟ ಮುಗಿಸಿದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನುಭವಿಸಿರುವ ನಿರಾಶೆಯನ್ನು ಮರೆಸಲು ಈ ಕೂಟ ಸಾಬ್ಳೆಗೆ ಉತ್ತಮ ಅವಕಾಶವಾಗಿತ್ತು. ಆದರೆ ಇಲ್ಲಿಯೂ ವಿಫಲರಾದರು. ಸಾಬ್ಳೆ ಅವರ ಚೊಚ್ಚಲ ಡೈಮಂಡ್ ಲೀಗ್ ಫೈನಲ್ ಇದಾಗಿತ್ತು. ಪ್ಯಾರಿಸ್‌ನಲ್ಲಿ ಸಾಬ್ಳೆ 11ನೇ ಸ್ಥಾನ ಗಳಿಸಿದ್ದರು. ಇದೇ ವರ್ಷ ಪೋಲೆಂಡ್‌ನಲ್ಲಿ ನಡೆದ ಸಿಲೇಸಿಯಾ ಡೈಮಂಡ್ ಲೀಗ್‌ನಲ್ಲಿ ಅವಿನಾಶ್ 14ನೇ ಸ್ಥಾನಿಯಾಗಿದ್ದರು.
ಕೀನ್ಯಾದ ಅಮೋಸ್ ಸೆರೆಮ್ 8:06.90 ಸಮಯದೊಂದಿಗೆ ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದರು, ಆದರೆ ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಮೊರೊಕ್ಕೊದ ಸೌಫಿಯಾನ್ ಎಲ್ ಬಕ್ಕಲಿ (8:08.60) ಎರಡನೇ ಸ್ಥಾನಿಯಾಗಿ ಬೆಳ್ಳಿ ಗೆದ್ದರು. ಟ್ಯುನೀಶಿಯಾದ ಮೊಹಮದ್ ಅಮೀನ್ ಜಿನೌಯಿ 8:09.68 ಸಮಯದೊಂದಿಗೆ ಕಂಚು ಗೆದ್ದರು.
ಇದನ್ನೂ ಓದಿ Champions Trophy 2025: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಐಸಿಸಿ
ನೀರಜ್ ಮೇಲೆ ಭಾರೀ ನಿರೀಕ್ಷೆ
ಕಳೆದ ಲಾಸೆನ್ ಹಾಗೂ ದೋಹಾ ಡೈಮಂಡ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನೀರಜ್, ದ್ವಿತೀಯ ಸ್ಥಾನಿಯಾಗಿದ್ದರು. ಲಾಸೆನ್‌ನಲ್ಲಿ 89.49 ಮೀ. ಹಾಗೂ ದೋಹಾದಲ್ಲಿ 88.36 ಮೀ. ದೂರದ ಸಾಧನೆ ಇವರದಾಗಿತ್ತು. ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಈ ಭಾರೀ ನಿರೀಕ್ಷೆ ಮೂಡಿಸಿದ್ದಾರೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗಾಯದ ಮಧ್ಯೆಯೂ ಅವರು ಬೆಳ್ಳಿ ಪದಕ ಗೆದ್ದಿದ್ದರು. ಪ್ಯಾರಿಸ್ ಗೇಮ್ಸ್ ಕಂಚಿನ ಪದಕ ವಿಜೇತ ಆಂಡರ್ಸನ್ ಪೀಟರ್ಸ್, ಜೂಲಿಯನ್ ವೆಬ್ಬರ್, ಜಾಕುಬ್ ವಡ್ಲೆಜ್, ಆಂಡ್ರಿಯನ್ ಮರ್ಡೇರ್ ನೀರಜ್‌ಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ. ಫೈನಲ್ ಮುಕ್ತಾಯದ ಬಳಿಕ ನೀರಜ್ ಮತ್ತೆ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.