ಬ್ರುಸೆಲ್ಸ್ (ಬೆಲ್ಜಿಯಂ): ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಮತ್ತು ಸ್ಟೀಪಲ್‌ಚೇಸರ್ ಅವಿನಾಶ್ ಸಾಬ್ಲೆ(Avinash Sable) ಪದಕ ನಿರೀಕ್ಷೆಯೊಂದಿಗೆ ಡೈಮಂಡ್ ಲೀಗ್ ಫೈನಲ್‌ನಲ್ಲಿ(Diamond League final) ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಶುಕ್ರವಾರ ಮತ್ತು ಶನಿವಾರ ಬೆಲ್ಜಿಯಂನ ಬ್ರುಸೆಲ್ಸ್‌ನಲ್ಲಿ ಫೈನಲ್ ನಡೆಯಲಿದೆ.
ನೀರಜ್ ಚೋಪ್ರಾ 4ನೇ ಸ್ಥಾನದೊಂದಿಗೆ ಜಾವೆಲಿನ್ ಫೈನಲ್ ಅರ್ಹತೆ ಸಂಪಾದಿಸಿದ್ದಾರೆ. ಫೈನಲ್‌ನಲ್ಲಿ ಒಟ್ಟು 8 ಮಂದಿ ಪದಕಕ್ಕಾಗಿ ಸೆಣಸಾಡಲಿದ್ದಾರೆ. ಕಳೆದ ಲಾಸೆನ್ ಹಾಗೂ ದೋಹಾ ಡೈಮಂಡ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನೀರಜ್, ದ್ವಿತೀಯ ಸ್ಥಾನಿಯಾಗಿದ್ದರು. ಲಾಸೆನ್‌ನಲ್ಲಿ 89.49 ಮೀ. ಹಾಗೂ ದೋಹಾದಲ್ಲಿ 88.36 ಮೀ. ದೂರ ಜಾವೆಲಿನ್ ಎಸೆದಿದ್ದರು. ನೀರಜ್ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್‌ನಲ್ಲಿ ಬೆಳ್ಳಿ ಗೆದ್ದಿದ್ದರು.
ಪ್ಯಾರಿಸ್ ಗೇಮ್ಸ್ ಕಂಚಿನ ಪದಕ ವಿಜೇತ ಆಂಡರ್ಸನ್ ಪೀಟರ್ಸ್, ಜೂಲಿಯನ್ ವೆಬ್ಬರ್, ಜಾಕುಬ್ ವಡ್ಲೆಜ್, ಆಂಡ್ರಿಯನ್ ಮರ್ಡೇರ್ ನೀರಜ್‌ಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ Viral Video: ಪ್ರಯಾಣಿಕರಿಗೆ ಜಲಪಾತ! ರೈಲಿನೊಳಗೆ ನೀರು ಸೋರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವ್ಯಂಗ್ಯ
ಗಾಯದ ಮಧ್ಯೆಯೂ 26ರ ಹರೆಯದ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಲ್ಲಿ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ನೀರಜ್ ಅವರು ಜರ್ಮನಿಯಲ್ಲಿ ತೊಡೆಸಂಧು ನೋವಿಗೆ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಡೈಮಂಡ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಚಿಕಿತ್ಸೆಯನ್ನು ಮುಂದೂಡಿದ್ದರು. ಫೈನಲ್ ಮುಕ್ತಾಯದ ಬಳಿಕ ನೀರಜ್ ಮತ್ತೆ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಅವಿನಾಶ್ ಸಾಬ್ಲೆ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ಒಟ್ಟು 12 ಮಂದಿ ಕಣದಲ್ಲಿದ್ದಾರೆ. ಸಾಬ್ಲೆ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 11ನೇ ಸ್ಥಾನಿಯಾಗಿದ್ದರು. ಇದೇ ವರ್ಷ ಪೋಲೆಂಡ್‌ನಲ್ಲಿ ನಡೆದ ಸಿಲೇಸಿಯಾ ಡೈಮಂಡ್ ಲೀಗ್‌ನಲ್ಲಿ ಅವಿನಾಶ್ 14ನೇ ಸ್ಥಾನಿಯಾಗಿದ್ದರು.