ನವದೆಹಲಿ: ಭಾರತ ತಂಡದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ಅವರು ಶನಿವಾರ ಪರ್ಲ್ ರಾಯಲ್ಸ್ ಪರ ದಕ್ಷಿಣ ಆಫ್ರಿಕಾ ಟಿ20 (SA-20) ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ. ಸನ್ ರೈಸರ್ಸ್ ಈಸ್ಟರ್ನ್ ಕೇಪ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕಣಕ್ಕೆ ಇಳಿದರು. ದಕ್ಷಿಣ ಆಫ್ರಿಕಾ ಫ್ರಾಂಚೈಸಿ ಲೀಗ್ ಆಡಿದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ದಿನೇಶ್ ಕಾರ್ತಿಕ್ ಭಾಜನರಾಗಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಒಟ್ಟು 6 ತಂಡಗಳ ಪರ 257 ಪಂದ್ಯಗಳನ್ನು ಆಡಿರುವ ದಿನೇಶ್ ಕಾರ್ತಿಕ್, 4842 ರನ್ ಗಳಿಸಿದ್ದಾರೆ. ಸದ್ಯ ಅವರು ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.
ಎಸ್‌ಎ ಟಿ20ಗೆ ಡಿಕೆ ಎಂಟ್ರಿ?
ಮೂರನೇ ಆವೃತ್ತಿಯ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಿಂದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಹಿಂದೆ ಸರಿದ ನಂತರ ಪರ್ಲ್ ರಾಯಲ್ಸ್ ಪರ ಆಡಲು ಬಂದ ಕರೆಯನ್ನು ದಿನೇಶ್ ಕಾರ್ತಿಕ್ ಒಪ್ಪಿಕೊಂಡರು. ಪರ್ಲ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ನಡುವಿನ ಪಂದ್ಯದ ವೇಳೆ “ನೀವೇಕೆ ಎಸ್ಎ-20 ಆಡಲು ಒಪ್ಪಿಗೆ ನೀಡಿದೀರಿ”? ಎಂದು ಕ್ರಿಕೆಟ್ ವಿಶ್ಲೇಷಕರು ದಿನೇಶ್ ಕಾರ್ತಿಕ್ ರನ್ನು ಪ್ರಶ್ನಿಸಿದ್ದರು.
Two legends, one message ⏬
— JioCinema (@JioCinema) January 8, 2025
Get ready to witness Dinesh Karthik & David Miller in the #SA20League, starting 9th Jan 👉 LIVE on Disney+Hotstar, Star Sports 2, & Sports18! pic.twitter.com/qBmLZJIPJJ
ರಾಯಲ್ಸ್ ನನ್ನ ನೆಚ್ಚಿನ ತಂಡ: ಡಿಕೆ
“ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್‌ನಲ್ಲಿ ಆಡಲು ಹಲವು ಕಾರಣಗಳಿವೆ. ಆದರೆ ಮುಖ್ಯ ಅಂಶವೆಂದರೆ ಎಸ್‌ಎ ಟಿ20ಯು ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ಅತಿ ಹೆಚ್ಚು ಸ್ಪರ್ಧಾತ್ಮಕ ಕ್ರಿಕೆಟ್ ಲೀಗ್ ಆಗಿದೆ. ನಾನು ಈಗಲೂ ಹಲವು ಸ್ಪರ್ಧಾತ್ಮಕ ಪಂದ್ಯ ಆಡಲು ಬಯಸುತ್ತೇನೆ. ಈ ಟೂರ್ನಿಗಿಂತ ನನಗೆ ಉತ್ತಮ ಪೈಪೋಟಿ ನೀಡುವ ಫ್ರಾಂಚೈಸಿ ಲೀಗ್ ಸಿಗುವುದಿಲ್ಲ ಎಂಬುದು ನನ್ನ ಅನಿಸಿಕೆ,” ಎಂದು ಆರ್‌ಸಿಬಿ ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.
39ನೇ ವಯಸ್ಸಿನ ವಿಕೆಟ್ ಕೀಪರ್ ಬ್ಯಾಟರ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಮ್ಮೆಯೂ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುವ ಅವಕಾಶ ಪಡೆದಿರಲಿಲ್ಲ. ಆದರೆ ರಾಯಲ್ಸ್ ತಂಡದ ಪರ ಆಡಲು ಸದಾ ಬಯಸುತ್ತಿದ್ದರು.
Dinesh Karthik will be back in action in SA20. 🔥 pic.twitter.com/5D2Rreqznf
— Mufaddal Vohra (@mufaddal_vohra) January 6, 2025
“ನಾನು ಯಾವಾಗಲೂ ರಾಯಲ್ಸ್ ತಂಡದ ಭಾಗವಾಗಲು ಬಯಸುತ್ತಿದ್ದೆ. ಏಕೆಂದರೆ ರಾಯಲ್ಸ್ ತಂಡದಲ್ಲಿ ನನಗೆ ಸಾಕಷ್ಟು ಸ್ನೇಹಿತರು ಇದ್ದಾರೆ. ಆದ್ದರಿಂದ ದಕ್ಷಿಣ ಆಫ್ರಿಕಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ಸ್ ಫ್ರಾಂಚೈಸಿಯಿಂದ ಕರೆ ಬಂದಾಗ ಸಂತೋಷದಿಂದಲೇ ಈ ತಂಡದ ಪರ ಆಡಲು ಒಪ್ಪಿಕೊಂಡೆ,” ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.
ಭಾರತದ ಆಟಗಾರರು ನಿವೃತ್ತಿ ನಂತರ ವಿದೇಶಿ ಫ್ರಾಂಚೈಸಿ ಲೀಗ್ ಆಡಲು ಬಿಸಿಸಿಐ ಒಪ್ಪಿಗೆ ಸೂಚಿಸಿದ್ದು, ಈಗಾಗಲೇ ಮುನಾಫ್ ಪಟೇಲ್, ಯುವರಾಜ್ ಸಿಂಗ್, ಶಿಖರ್ ಧವನ್, ಅಂಬಾಟಿ ರಾಯುಡು, ಯುಸೂಫ್ ಪಠಾಣ್, ರಾಬಿನ್ ಉತ್ತಪ್ಪ ಸೇರಿದಂತೆ ಹಲವು ಕ್ರಿಕೆಟ್ ಗಳು ವಿವಿಧ ದೇಶಗಳ ಫ್ರಾಂಚೈಸಿ ಲೀಗ್ ನಲ್ಲಿ ಕಾಣಿಸಿಕೊಂಡಿದ್ದು, ಈಗ ದಿನೇಶ್ ಕಾರ್ತಿಕ್ ಕೂಡ ಈ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
ಈ ಸುದ್ದಿಯನ್ನು ಓದಿ: BBL: 58 ಎಸೆತಗಳಲ್ಲಿ ಸ್ಪೋಟಕ ಶತಕ ಬಾರಿಸಿದ ಸ್ಟೀವನ್ ಸ್ಮಿತ್!