Friday, 10th January 2025

Dodda Ganesh: ಕೋಚ್​ ಹುದ್ದೆಯಿಂದ ವಜಾಗೊಂಡಿಲ್ಲ; ದೊಡ್ಡ ಗಣೇಶ್‌ ಸ್ಪಷ್ಟನೆ

Dodda Ganesh

ಬೆಂಗಳೂರು: ಕೀನ್ಯಾ ರಾಷ್ಟ್ರೀಯ ಕ್ರಿಕೆಟ್‌(Cricket Kenya) ತಂಡದ ಪ್ರಧಾನ ಕೋಚ್‌(kenya cricket coach) ಆಗಿ ಆಯ್ಕೆಯಾಗಿದ್ದ ಮಾಜಿ ವೇಗಿ, ಕನ್ನಡಿಗ ದೊಡ್ಡ ಗಣೇಶ್‌(Dodda Ganesh) ಅವರನ್ನು ಕೀನ್ಯಾ ಕ್ರಿಕೆಟ್‌ ಮಂಡಳಿ ಒಂದೇ ತಿಂಗಳಲ್ಲಿ ವಜಾಗೊಳಿಸಿದೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಈ ವಿಚಾರವಾಗಿ ದೊಡ್ಡ ಗಣೇಶ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶದಲ್ಲಿ ಸ್ಪಷ್ಟನೆ ನೀಡಿದ್ದು ತಾನು ಕೋಚ್​ ಹುದ್ದೆಯಿಂದ ವಜಾಗೊಂಡಿಲ್ಲ ಎಂದು ಹೇಳಿದ್ದಾರೆ.

ಗಣೇಶ್‌ ಅವರ ನೇಮಕ ಅಸಮರ್ಪಕವಾಗಿದೆ, ಕೆಲವು ಕಾರ್ಯ ವಿಧಾನಗಳನ್ನು ಅನುಸರಿಸಲಾಗಿಲ್ಲ, ಹೀಗಾಗಿ ಈ ನೇಮಕವನ್ನು ಕೀನ್ಯಾ ಕ್ರಿಕೆಟ್‌ ಕಾರ್ಯಕಾರಿ ಮಂಡಳಿ ಅನುಮೋದಿಸಲು ನಿರಾಕರಿಸಿದ್ದು ಗಣೇಶ್ ಅವರನ್ನು ಕೋಚ್‌ ಹುದ್ದೆಯಿಂದ ವಜಾಗೊಳಿಸಿದೆ ಎಂದು ಕಳೆದ ವಾರ ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಗಣೇಶ್‌, ಕೀನ್ಯಾ ಕ್ರಿಕೆಟ್​ ಮಂಡಳಿಯಲ್ಲಿನ ಎರಡು ಬಣಗಳ ನಡುವಿನ ಮನಸ್ತಾಪದಿಂದಾಗಿ ಸದ್ಯ ಕೋಚ್​ ಹುದ್ದೆಯಿಂದ ಕೆಳಗಿಳಿದಿರುವೆ. ಆದರೆ ಕೀನ್ಯಾ ಕ್ರಿಕೆಟ್​ ಮಂಡಳಿ ಮುಂದಿನ ಕೆಲ ದಿನಗಳಲ್ಲಿ ಬಿಕ್ಕಟ್ಟು ಬಗೆಹರಿಸಿ ನನ್ನನ್ನು ಹುದ್ದೆಯಲ್ಲಿ ಮುಂದುವರಿಸುವ ಭರವಸೆ ನೀಡಿದೆ. ಸದ್ಯ ನಾನು ನೈರೋಬಿಯಲ್ಲೇ ಉಳಿದುಕೊಂಡಿರುವೆ. ಕೀನ್ಯಾ ಕ್ರಿಕೆಟ್​ ಮಂಡಳಿ ನನ್ನನ್ನು ಗೌರವದಿಂದಲೇ ನಡೆಸಿಕೊಳ್ಳುತ್ತಿದೆ ಎಂದು ಹೇಳುವ ಮೂಲಕ ಕೋಚ್‌ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ. ಆಗಸ್ಟ್​ 13ರಂದು ದೊಡ್ಡ ಗಣೇಶ್ ಕೀನ್ಯಾ ತಂಡದ ಮುಖ್ಯ ಕೋಚ್​ ಆಗಿ ನೇಮಕಗೊಂಡಿದ್ದರು.

50 ವರ್ಷದ ದೊಡ್ಡ ಗಣೇಶ್ ನೇರ ನುಡಿಗಳಿಂದಲೇ ಹೆಸರುವಾಸಿ. 1997ರಲ್ಲಿ ಭಾರತ ಪರ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 104 ಪಂದ್ಯಗಳಿಂದ 365 ವಿಕೆಟ್​ ಪಡೆದಿದ್ದಾರೆ. ಭಾರತ ತಂಡದ ಪರ 6 ವಿಕೆಟ್​ ಕಿತ್ತಿದ್ದಾರೆ. ಲಿಸ್ಟ್​ ‘ಎ’ ಕ್ರಿಕೆಟ್​ನಲ್ಲಿ 89 ಪಂದ್ಯಗಳನ್ನಾಡಿ 128 ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್​ನಲ್ಲಿಯೂ ಉತ್ತಮ ದಾಖಲೆ ಹೊಂದಿರುವ ಇವರು ಲಿಸ್ಟ್​ ‘ಎ’ ಮತ್ತು ಪ್ರಥಮ ದರ್ಜೆ ಕ್ರಿಕೆಟ್​ ಸೇರಿ ಒಟ್ಟು 2,548 ರನ್​ ಬಾರಿಸಿದ್ದಾರೆ. 6 ಬಾರಿ 10 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. 90ರ ದಶಕದಲ್ಲಿ ಭಾರತ ಮತ್ತು ಕರ್ನಾಟಕ ರಣಜಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ ಹೆಗ್ಗಳಿಕೆ ಇವರದ್ದು.

ಇದನ್ನೂ ಓದಿ IND vs BAN: ದಿಗ್ಗಜರ ಜತೆ ಎಲೈಟ್‌ ಪಟ್ಟಿ ಸೇರಲು ಬುಮ್ರಾ ಸಜ್ಜು; 3 ವಿಕೆಟ್‌ ಅಗತ್ಯ

5 ತಿಂಗಳ ಹಿಂದಷ್ಟೇ ದೊಡ್ಡ ಗಣೇಶ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(B. S. Yediyurappa) ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ದೊಡ್ಡ ಗಣೇಶ್ ಮೊದಲು ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ಭಾರತದ 1983ರ ವಿಶ್ವಕಪ್ ವಿಜೇತ ವಿಕೆಟ್-ಕೀಪರ್ ಸೈಯದ್ ಕಿರ್ಮಾನಿ ಅವರನ್ನು ಆರಾಧ್ಯ ಕ್ರಿಕೆಟಿಗನಾಗಿ ಕಂಡುಕೊಂಡಿದ್ದರು. ಗುಂಡಪ್ಪ ವಿಶ್ವನಾಥ್ ಅವರು ದೊಡ್ಡ ಗಣೇಶ್ ಬೌಲಿಂಗ್ ಪ್ರತಿಭೆಯನ್ನು ಗುರುತಿಸಿ ಅವರಿಗೆ ಹಲವು ಕ್ಲಬ್​ಗಳ ಪರ ಆಡುವ ಅವಕಾಶ ಕಲ್ಪಿಸಿದ್ದರು ಎನ್ನಲಾಗಿದೆ.