Saturday, 23rd November 2024

Donald Trump: ಟ್ರಂಪ್‌ ಗೆಲುವಿಗೂ ಕೊಹ್ಲಿ ಸಾಧನೆಗೂ ಇದೆ ಅವಿನಾಭಾವ ಸಂಬಂಧ

ಬೆಂಗಳೂರು: ಅಮೆರಿಕ ಅ‍ಧ್ಯಕ್ಷೀಯ ಚುನಾವಣೆಯಲ್ಲಿ(US presidential elections 2024) ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌(Donald Trump) ಪ್ರಚಂಡ ಗೆಲುವು ಸಾಧಿಸಿ 2ನೇ ಬಾರಿಗೆ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ. ಟ್ರಂಪ್‌ ಗೆಲುವು ಸಾಧಿಸುತ್ತಿದ್ದಂತೆ ವಿರಾಟ್‌ ಕೊಹ್ಲಿಯ(Virat Kohli) ಅಭಿಮಾನಿಗಳು ಸಂಸತಗೊಂಡಿದ್ದಾರೆ. ಇದಕ್ಕೆ ಕಾರಣ ಕೊಹ್ಲಿ ಸಾಧನೆಗೂ ಟ್ರಂಪ್‌ ಗೆಲುವಿಗೂ ಇರುವ ಸ್ವಾರಸ್ಯಕರ ಅವಿನಾಭಾವ ಸಂಬಂಧ.

ವಿರಾಟ್ ಕೊಹ್ಲಿ ಸದ್ಯ ಕಳಪೆ ಫಾರ್ಮ್‌ನಲ್ಲಿದ್ದಾರೆ. ತವರಿನಲ್ಲೇ ರನ್‌ ಗಳಿಸಿಲು ಪರದಾಟ ನಡೆಸುತ್ತಿದ್ದಾರೆ. ಇದಕ್ಕೆ ನ್ಯೂಜಿಲ್ಯಾಂಡ್‌ ಮತ್ತು ಬಾಂಗ್ಲಾ ಎದುರಿನ ತವರಿನ ಟೆಸ್ಟ್‌ ಸರಣಿಯೇ ಉತ್ತಮ ನಿದರ್ಶನ. ಕೊಹ್ಲಿ ಕಳಪೆ ಫಾರ್ಮ್‌ಗೆ ಮಾಜಿ ಆಟಗಾರರು ಟೀಕೆ ಮಾಡುತ್ತಿದ್ದಾರೆ. ಇದೀಗ ಟ್ರಂಪ್‌ ಗೆಲುವಿನಿಂದ ಕೊಹ್ಲಿಗೆ ಮತ್ತೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತಿದೆ ಅಂಕಿ ಅಂಶಗಳು.

ಹೌದು, ಟ್ರಂಪ್‌ ಮೊದಲ ಬಾರಿಗೆ ಗೆದ್ದು ಅಧ್ಯಕ್ಷರಾದಾಗ ಕೊಹ್ಲಿಯ ಬ್ಯಾಟಿಂಗ್‌ ಪ್ರದರ್ಶನ ಉತ್ತುಂಗ ಮಟ್ಟದಲ್ಲಿತ್ತು. ಕೊಹ್ಲಿ ಬರೋಬ್ಬರಿ 22 ಅಂತಾರಾಷ್ಟ್ರೀಯ ಶತಕ ಬಾರಿಸಿ ಮಿಂಚಿದ್ದರು. 2021ರಲ್ಲಿ ಟ್ರಂಪ್‌ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಇದೇ ವೇಳೆ ವಿರಾಟ್‌ ಕೊಹ್ಲಿಯ ಬ್ಯಾಟಿಂಗ್‌ ಫಾರ್ಮ್‌ ಕೂಡ ಕುಸಿತ ಕಾಣಲಾರಂಭಿಸಿತ್ತು. ಇದೀಗ ಮತ್ತೆ ಟ್ರಂಪ್‌ ಗೆದ್ದಿದ್ದಾರೆ. ಇದೇ ಕಾಕತಾಳಿಯ ಲೆಕ್ಕಾಚಾರದ ಪ್ರಕಾರ ಕೊಹ್ಲಿ ಮತ್ತೆ ಬ್ಯಾಟಿಂಗ್‌ ಲಯಕ್ಕೆ ಮರಳಲಿದ್ದಾರೆ ಎಂದು ನೆಟ್ಟಿಗರು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಟ್ರಂಪ್‌ ಅವರ ಮುಂದಿನ ಅಧಿಕಾರಾವಧಿಯಲ್ಲಿ ಕೊಹ್ಲಿ ಅದೆಷ್ಟು ಶತಕ ಬಾರಿಸುತ್ತಾರೊ ಊಹಿಸಲು ಅಸಾಧ್ಯ ಎಂಬ ಕೆಲ ಮಿಮ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ Donald Trump: ಹಿಂದೂಗಳ ಬೆಂಬಲದಿಂದ ಗೆದ್ದ ಟ್ರಂಪ್!‌

ಭಾರೀ ಕುತೂಹಲ ಕೆರಳಿಸಿದ್ದ, ಜಗತ್ತೇ ಕಾದು ಕುಳಿತ್ತಿದ್ದ ಜಿದ್ದಾಜಿದ್ದಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಭಾರತ ಮೂಲದ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris) ಅವರನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ಗದ್ದುಗೆಗೆ ಏರಿದ್ದಾರೆ. ಈ ಸಲದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಹಿಂದೂ ಮತದಾರರು ನಿರ್ಣಾಯಕ ಪಾತ್ರ ವಹಿಸಿದ್ದು ವಿಶೇಷ. ಈ ಬಾರಿ ಒಂದೊಂದು ಮತಗಳೂ ಅತಿ ಅಮೂಲ್ಯವಾಗಿತ್ತು. ಇದನ್ನು ಅರಿತಿದ್ದ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಮತ್ತು ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಇಬ್ಬರೂ ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಹಿಂದೂ ಮತದಾರರ ಮತಗಳನ್ನು ಪಡೆಯಲು ತೀವ್ರ ಪೈಪೋಟಿ ನಡೆಸಿದ್ದರು.

ಡೊನಾಲ್ಡ್‌ ಟ್ರಂಪ್‌ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದರು. ಚುನಾವಣಾ ಪ್ರಚಾರದ ಸಂದರ್ಭ ಭಾರತೀಯ ಅಮೆರಿಕರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿದ್ದರು. ಬಾಂಗ್ಲಾದೇಶದ ಹಿಂದೂಗಳ ಸಂರಕ್ಷಣೆಯ ಅಗತ್ಯವನ್ನು ಒತ್ತಿ ಹೇಳಿದ್ದರು. ಕಮಲಾ ಹ್ಯಾರಿಸ್‌ ಮತ್ತು ಬೈಡೆನ್‌ ಹಿಂದೂಗಳ ರಕ್ಷಣೆಯನ್ನು ಕಡೆಗಣಿಸುತ್ತಿದ್ದಾರೆ ಎಂದೂ ಅರೋಪಿಸಿದ್ದರು. ಅಮೆರಿಕ ಮತ್ತು ಜಾಗತಿಕ ಮಟ್ಟದಲ್ಲಿ ಹಿಂದೂಗಳ ಹಕ್ಕುಗಳ ಸಂರಕ್ಷಣೆಯನ್ನು ಪ್ರತಿಪಾದಿಸಿದ್ದರು. ಟ್ರಂಪ್‌ ಅವರ ಈ ಹೇಳಿಕೆಯನ್ನು ಅಮೆರಿಕದಲ್ಲಿರುವ ಹಿಂದೂಗಳು ಸ್ವಾಗತಿಸಿದ್ದರು. ಪೆನ್‌ಸೆಲ್ವೇನಿಯಾ, ಜಾರ್ಜಿಯಾ, ಮಿಚಿಗನ್‌ ಮತ್ತು ನಾರ್ತ್‌ ಕ್ಯಾರೊಲಿನಾದಲ್ಲಿ ಹಿಂದೂ ಮತಗಳು ನಿರ್ಣಾಯಕವಾಗಿದ್ದು, ಇಲ್ಲೆಲ್ಲ ಟ್ರಂಪ್‌ ಅವರಿಗೆ ಉತ್ತಮ ಬೆಂಬಲ ಲಭಿಸಿದೆ.