ಮುಂಬೈ: 20-20 ಪಂದ್ಯಗಳು 2020ನೇ ವರ್ಷದಲ್ಲಿ ನಡೆಯುವುದೂ ಅನುಮಾನವಾಗಿತ್ತು. ಆದರೀಗ ಹದಿಮೂರನೇ ಐಪಿಎಲ್ ಕರೋನಾ ಆತಂಕದ ನಡುವೆ ಯಾವ ಅಡ್ಡಿಯಿಲ್ಲದೆ ನಡೆದಿದೆ. ಪ್ರತಿಬಾರಿಯ ಐಪಿಎಲ್‌ಗಿಂತ ಈ ಬಾರಿಯದ್ದು ವಿಶೇಷ ಟೂರ್ನಿ ಎಂದರೆ ತಪ್ಪಾಗದು. ಅಂತಹ ಕೆಲ ವಿಶೇಷಗಳೇನು ಎಂಬ ಪರಿಚಯವಿದು.
ಅಭಿಮಾನಿಗಳೇ ಇಲ್ಲದೇ ಆಟ: ಐಪಿಎಲ್ ಎಂದರೆ ತಕ್ಷಣ ನೆನಪಾಗುವುದು ಕಿಕ್ಕಿರಿದು ತುಂಬಿದ ಸ್ಟೇಡಿಯಂಗಳು. ಭಿನ್ನ-ವಿಭಿನ್ನ ವೇಷಭೂಷಣ ತೊಟ್ಟು ಬಂದು ತಮ್ಮ ನೆಚ್ಚಿನ ತಂಡಕ್ಕೆ ಪ್ರೋತ್ಸಾಹ ನೀಡುವ ಫ್ಯಾನ್ಸ್‌ಗಳು. ಆದರೆ ಈ ಬಾರಿ ಕರೋನ
ದಿಂದಾಗಿ ಐಪಿಎಲ್ ನಡೆಯುವುದೇ ಅನುಮಾನ ಎಂಬಂತಾಗಿತ್ತು. ಕೊನೆಗೂ ಯೂನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಐಪಿಎಲ್‌ಗೆ ಮುಹೂರ್ತ ಕೂಡಿ ಬಂತು. ವಿಶೇಷ ಮತ್ತು ವಿಚಿತ್ರ ಎಂದರೆ ಕ್ರೀಡಾಭಿಮಾನಿಗಳೇ ಇಲ್ಲದೇ ಟೂರ್ನಿ ಆಡಲಾಯಿತು. ಖಾಲಿ ಸ್ಟೇಡಿಯಂನಲ್ಲಿ ಅಭ್ಯಾಸ ಮಾಡುತ್ತಿದ್ದ ಆಟಗಾರರು ಮೊದಲ ಸಲ ಖಾಲಿ ಸ್ಟೇಡಿಯಂನಲ್ಲಿ ಪಂದ್ಯವಾಡಿದರು.
ವಿಡಿಯೋ ಮತ್ತು ಆಡಿಯೋಗಳ ಮೂಲಕ ಅಭಿಮಾನಿಗಳ ಕೇಕೆ, ಕಿರುಚಾಟ ಮೂಡುವಂತೆ ಮಾಡಲಾಗಿತ್ತು. ಮೂವತ್ತು ಸಾವಿರ ಜನರು ಸೇರುವ ಸ್ಟೇಡಿಯಂನಲ್ಲಿ ನೂರು ಜನರೂ ಇರಲಿಲ್ಲ. ಎಲ್ಲವೂ ಕ್ರಿಕೆಟ್ ಮಾಯೆ!
ಬಯೋ ಸೆಕ್ಯೂರ್ ಬಬಲ್: ಐಪಿಎಲ್ ಏನೋ ಪ್ರಾರಂಭವಾಯಿತು. ಆದರೆ, ಆಟಗಾರರಿಗೆ ನಿರ್ಬಂಧಗಳ ಕೋಟೆಯನ್ನೇ
ಕಟ್ಟಲಾಗಿತ್ತು. ವಿಕೆಟ್ ಪಡೆದಾಗ ಒಬ್ಬರನ್ನು ಒಬ್ಬರು ತಬ್ಬಲೂ ಅವಕಾಶ ಇರಲಿಲ್ಲ. ಬಾಲ್‌ಗೆ ಎಂಜಲು ಹಚ್ಚಿ ಉಜ್ಜುವ ಚಾಳಿ
ಸಂಪೂರ್ಣ ಬಂದ್ ಎಂದು ಸೂಚಿಸಲಾಗಿತ್ತು. ಆಟಗಾರರನ್ನು ಪ್ರತ್ಯೇಕವಾಗಿ ಮೊದಲು ಕ್ವಾರಂಟೈನ್ ಮಾಡಲಾಗಿತ್ತು. ಪ್ರತಿ
ಯೊಬ್ಬರಿಗೂ ಆಗಾಗ ಕರೋನಾ ಪರೀಕ್ಷೆ ನಡೆಯತ್ತಲೇ ಇತ್ತು. ಯಾರೊಬ್ಬರೂ ನಿಯಮ ಉಲ್ಲಂಘನೆ ಮಾಡದಂತೆ ಕಟ್ಟುನಿಟ್ಟು
ಹೇರಲಾಗಿತ್ತು. ಬಯೋ ಸೆಕ್ಯೂರ್ ಬಬಲ್ ವಾತಾವರಣದಲ್ಲಿ ಇರುವುದು ಖಂಡಿತ ಸುಲಭವಲ್ಲ ಎಂದು ವಿರಾಟ್ ಕೊಹ್ಲಿ ಕೂಡ
ಕೊನೆಯಲ್ಲಿ ನಿಟ್ಟುಸಿರು ಬಿಟ್ಟರು!
ಐಪಿಲ್ ಫಾರ್ ಅವೇ: ಐಪಿಎಲ್ ಎಂದರೆ ಭಾರತೀಯರಿಗೆ ಹಬ್ಬವಿದ್ದಂತೆ. ಒಂದೆರೆಡು ತಿಂಗಳು ಬರೀ ಐಪಿಎಲ್‌ನದ್ದೇ ಮಾತು ಮಾತು. ಆಯಾ ತಂಡಗಳ ಸ್ಥಳದಲ್ಲಿ ಪಂದ್ಯ ನಡೆದಾಗ ಕ್ರೀಡಾಂಗಣದಲ್ಲಿ ಜನಜಾತ್ರೆ. ಇದು ಭಾರತೀಯರು ಕ್ರಿಕೆಟ್ ಪ್ರೀತಿಸುವ ಪರಿ. ಆದರೆ, ಈ ಬಾರಿ ಕರೋನಾದಿಂದಾಗಿ ಐಪಿಎಲ್ ದುಬೈಗೆ ಶಿಫ್ಟ್ ಆಯಿತು. ಈ ರೀತಿ ಆದದ್ದು ಮೊದಲೇನಲ್ಲ. 2009ರಲ್ಲಿ ಭಾರತದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಕ್ಷಣಾ ನಿರ್ವಹಣೆ ಕಷ್ಟ ಎಂದು ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ನಡೆದಿತ್ತು. ಆಗ ಈಗಿನಂತೆ ಮೊಬೈಲ್ ಅಬ್ಬರವಿರಲಿಲ್ಲ, ಆದರೂ ಐಪಿಎಲ್ ಡಲ್ ಆಗಿರಲಿಲ್ಲ!
ಹೊಸ ಪ್ರಾಯೋಜಕತ್ವ
ಭಾರತದ ಅತಿ ದೊಡ್ಡ ಆನ್‌ಲೈನ್ ಕಲಿಕಾ ವೇದಿಕೆಯಾದ ಬೆಂಗಳೂರು ಮೂಲದ ‘ಅನ್‌ಅಕಾಡೆಮಿ’ ಈ ಬಾರಿಯ ಪ್ರಾಯೋಜ ಕತ್ವ ವಹಿಸಿಕೊಂಡಿತ್ತು. ಜತೆಗೆ ಹಿಂದಿನ ವರ್ಷ ವಿವೋ ಐಪಿಎಲ್ ಎಂದಾಗಿದ್ದ ಟ್ರೋಫಿ ಈ ಬಾರಿ ಡ್ರೀಮ್ 11 ಐಪಿಎಲ್
ಆಗಿ ಬದಲಾಗಿತ್ತು. ಹೆಸರೇನೇ ಬದಲಾದರೂ ಐಪಿಎಲ್‌ನ ಫ್ಯಾನ್ ಬೇಸ್ ಹೆಚ್ಚೆಚ್ಚು ಆಗುತ್ತಲೇ ಇದೆ!
ಬದಲಾದ ವೇಳೆ
ಪ್ರತಿವರ್ಷ ವಾಡಿಕೆಯಂತೆ ಐಪಿಎಲ್ ನಡೆದಯುವುದು ಮಾರ್ಚ್ ತಿಂಗಳಲ್ಲಿ. ಆದರೆ ಈ ಬಾರಿ ಎಲ್ಲೆಲ್ಲೂ ಲಾಕ್ ಡೌನ್ ಮಾಡಲಾಗಿತ್ತು. ಹೀಗಿದ್ದಾಗ 2020 ಐಪಿಎಲ್ ನಡೆಯುವುದೇ ಅನುಮಾನ ಎಂಬಂತಾಗಿತ್ತು. ಆದರೂ ಹಣದ ಹೊಳೆ ಹರಿಸುವ ಐಪಿಎಲ್ ಆಡಿಸಿಯೇ ತೀರಬೇಕು ಎಂದು ಬಿಸಿಸಿಐ ಎಲ್ಲ ಪಟ್ಟುಗಳನ್ನೂ ಹಾಕಿತು. ಅದೆಲ್ಲದರ ಫಲವಾಗಿ ಟೂರ್ನಿ ಯಾವುದೇ ರೀತಿ ಅಡ್ಡಿ ಆತಂಕಗಳಿಲ್ಲದೆ ಮುಕ್ತಾಯವಾಯಿತು. ಈ ಜತೆಗೆ, ಹಿಂದಿನ ವರ್ಷದವರೆಗೂ ರಾತ್ರಿ 8ಕ್ಕೆ ಆರಂಭವಾಗುತ್ತಿದ್ದ
ಪಂದ್ಯಗಳನ್ನು ಈ ಬಾರಿ 7.30ಕ್ಕೆ ಆಡಿಸಲಾಯಿತು.
ಫ್ಯಾನ್ಸ್‌ಗಳು ನಿದ್ದೆಗೆಟ್ಟು ನೋಡದೇ ಅರಾಮವಾಗಿ ಪಂದ್ಯ ನೋಡಿ, ಮಲಗಲಿ ಎಂದು ಹೀಗೆ ಮಾಡಲಾಗಿತ್ತಂತೆ!