ಅನಂತಪುರ: ಇಂಡಿಯಾ ʼಬಿʼ ಮತ್ತು ಇಂಡಿಯಾ ʼಸಿʼ ನಡುವಣ ದುಲೀಪ್ ಟ್ರೋಫಿ ಪಂದ್ಯದಲ್ಲಿ ಮಧ್ಯಮ ವೇಗಿ ಅಂಶುಲ್ ಕಾಂಬೋಜ್(Anshul Kamboj) ಘಾತಕ ಬೌಲಿಂಗ್ ದಾಳಿ ನಡೆಸಿ 8 ವಿಕೆಟ್ ಕಿತ್ತು ದಾಖಲೆಯೊಂದನ್ನು ಬರೆದಿದ್ದಾರೆ. ದುಲೀಪ್ ಟ್ರೋಫಿ(Duleep Trophy) ಪಂದ್ಯವೊಂದರ ಇನಿಂಗ್ಸ್‌ನಲ್ಲಿ 8 ವಿಕೆಟ್ ಕಿತ್ತ ಮೂರನೇ ಬೌಲರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಕಾಂಬೋಜ್ ದೇಬಾಸಿಸ್ ಮೊಹಾಂತಿ (10/46) ಮತ್ತು ಅಶೋಕ್ ದಿಂಡಾ (8/123) ಈ ಸಾಧನೆಗೈದಿದ್ದರು.
ಹರಿಯಾಣದ ವೇಗಿ ಅಂಶುಲ್ ಕಾಂಬೋಜ್ ಭಾರತ ಸಿ ತಂಡದ ಆಟಗಾರನಾಗಿದ್ದು 27.5 ಓವರ್ ದಾಳಿ ನಡೆಸಿ 8 ಮೇಡನ್ ಸಹಿತ 69 ರನ್ ವೆಚ್ಚದಲ್ಲಿ 8 ವಿಕೆಟ್ ಕಿತ್ತು ಮಿಂಚಿದರು. ಇವರ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ಇಂಡಿಯಾ ʼಬಿʼ ತಂಡದ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು.
ಇದನ್ನೂ ಓದಿ Virat Kohli: 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವ ದಾಖಲೆ ಬರೆಯಲು ಸಜ್ಜಾದ ಕಿಂಗ್ ಕೊಹ್ಲಿ
ಈ ಪಂದದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಸಿ ತಂಡ ಇಶಾನ್ ಕಿಶನ್ ಅವರ ಶತಕದ ನೆರವಿನಿಂದ
525 ರನ್ ಬಾರಿದರೆ, ಇಂಡಿಯಾ ʼಬಿʼ ತಂಡ 332 ರನ್‌ಗೆ ಸರ್ವಪತನ ಕಂಡಿತು. ಸದ್ಯ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಭಾರತ ಸಿ ತಂಡ ಊಟದ ವಿರಾಮಕ್ಕೆ ಒಂದು ವಿಕೆಟ್ ನಷ್ಟಕ್ಕೆ 63 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ. 256 ರನ್ ಮುನ್ನಡೆಯಲ್ಲಿದೆ.
23 ವರ್ಷದ ಕಾಂಬೋಜ್ ಬೌಲಿಂಗ್ ಆಲ್ ರೌಂಡರ್ ಆಗಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಕಾಂಬೋಜ್ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದರು. ಆಡಿದ 10 ಪಂದ್ಯಗಳಿಂದ 17 ವಿಕೆಟ್‌ಗಳನ್ನು ಕಿತ್ತಿದ್ದರು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸದಸ್ಯನಾಗಿದ್ದರು. ಸದ್ಯ ಅವರು ದೇಶೀಯ ಟೂರ್ನಿಯಲ್ಲಿ ತೋರುತ್ತಿರುವ ಪ್ರದರ್ಶನ ನೋಡುವಾಗ ಶೀಘ್ರದಲ್ಲೇ ಭಾರತ ತಂಡಕ್ಕೂ ಪದಾರ್ಪಣೆ ಮಾಡಿದರೂ ಅಚ್ಚರಿಯಿಲ್ಲ.