ಅನಂತಪುರ: ದುಲೀಪ್ ಟ್ರೋಫಿ ಕ್ರಿಕೆಟ್(Duleep Trophy) ಪಂದ್ಯಾವಳಿಯ ದ್ವಿತೀಯ ಸುತ್ತಿನ ಮುಖಾಮುಖಿಯಲ್ಲಿ ಇಂಡಿಯಾ ಎ(India A vs India D) ತಂಡ 186 ರನ್‌ಗಳ ಅಂತರದಿಂದ ಇಂಡಿಯಾ ಡಿ ತಂಡವನ್ನು ಮಣಿಸಿದೆ. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ಇಂಡಿಯಾ ಬಿ ವಿರುದ್ಧ 76 ರನ್ ಅಂತರದ ಸೋಲು ಕಂಡಿತ್ತು. ಇಂಡಿಯಾ ಬಿ ಮತ್ತು ಇಂಡಿಯಾ ಸಿ(India B vs India C) ನಡುವಣ ಮತ್ತೊಂದು ಪಂದ್ಯ ಡ್ರಾ ಗೊಂಡಿದೆ.
488 ರನ್ ಗೆಲುವಿನ ಗುರಿ ಪಡೆದಿದ್ದ ಇಂಡಿಯಾ ಡಿ ತಂಡ ಶನಿವಾರ ಒಂದು ವಿಕೆಟಿಗೆ 62 ರನ್ ಮಾಡಿತ್ತು. ಅಂತಿಮ ದಿನವಾದ ಭಾನುವಾರ ಇನಿಂಗ್ಸ್ ಆರಂಭಿಸಿದ ಇಂಡಿಯಾ ಡಿ, ರಿಕಿ ಭುಯಿ(113) ಅವರ ಅಮೋಘ ಶತಕದ ಹೊರತಾಗಿಯೂ 301 ರನ್‌ಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು. ತನುಷ್ ಕೋಟ್ಯಾನ್(4) ಮತ್ತು ಶಮ್ಸ್ ಮುಲಾನಿ(3) ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇಂಡಿಯಾ ಎ 3 ವಿಕೆಟಿಗೆ 380 ರನ್ ಪೇರಿಸಿ ದ್ವಿತೀಯ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಪ್ರಥಮ್ ಸಿಂಗ್ 122 ರನ್ ಹೊಡೆದರೆ (189 ಎಸೆತ, 12 ಬೌಂಡರಿ, 1 ಸಿಕ್ಸರ್), ತಿಲಕ್ ವರ್ಮ 111 ರನ್ ಗಳಿಸಿ ಅಜೇಯರಾಗಿ ಉಳಿದರು (193 ಎಸೆತ, 9 ಬೌಂಡರಿ). ಇಬವರಿಬ್ಬರ 2ನೇ ವಿಕೆಟ್ ಜತೆಯಾಟದಲ್ಲಿ 104 ರನ್ ಒಟ್ಟುಗೂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ 290 ರನ್‌ಗೆ ಆಲೌಟ್ ಆಗಿತ್ತು. ಇಂಡಿಯಾ ಡಿ ತಂಡ ಮೊದಲ ಇನಿಂಗ್ಸ್‌ನಲ್ಲಿ 183 ರನ್‌ಗೆ ಕುಸಿದಿತ್ತು. ಒಟ್ಟು ಈ ಪಂದ್ಯದಲ್ಲಿ 3 ಶತಕ ದಾಖಲಾಯಿತು.
ದ್ವಿತೀಯ ಇನಿಂಗ್ಸ್‌ನಲ್ಲಿ ಸೋಲು ತಪ್ಪಿಸಲು ಇಂಡಿಯಾ ಡಿ ತಂಡದ ಆಟಗಾರ ರಿಕಿ ಭುಯಿ ಶಕ್ತಿ ಮೀರಿ ಬ್ಯಾಟಿಂಗ್ ಪ್ರದರ್ಶನ ತೋರಿದರೂ ಕೂಡ ಸಹ ಆಟಗಾರರಿಂದ ಸರಿಯಾಗಿ ಸಾಥ್ ಸಿಗಲಿಲ್ಲ. ಮೂರನೇ ಕ್ರಮಾಂಕದಲ್ಲಿ ಆಡಲಿಳಿದು 195 ಎಸೆತಗಳಿಂದ 113 ರನ್ ಬಾರಿಸಿ ತನುಷ್ ಕೋಟ್ಯಾನ್‌ಗೆ ವಿಕೆಟ್ ಒಪ್ಪಿಸಿದರು. ಸಂಜು ಸ್ಯಾಮ್ಸನ್ ಬಿರುಸಿನ ಆಟವಾಡಲು ಹೋಗಿ ವಿಕೆಟ್ ಕಳೆದುಕೊಂಡರು. ಅವರ ಗಳಿಕೆ 40 ರನ್. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಅಯ್ಯರ್ 41 ರನ್ ಬಾರಿಸಿದರು. ದೇವದತ್ತ ಪಡಿಕ್ಕಲ್(1) ಮತ್ತು ಅಥರ್ವ ತೈದೆ(0) ಬ್ಯಾಟಿಂಗ್ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಉಭಯ ಆಟಗಾರರ ಪೈಕಿ ಒಬ್ಬ ಆಟಗಾರನಾದರೂ ನಿರೀಕ್ಷಿತ ಪ್ರದರ್ಶನ ತೋರುತ್ತಿದ್ದರೆ ಸೋಲಿನಿಂದ ಪಾರಾಗುವ ಅವಕಾಶ ಇರುತ್ತಿತ್ತು.
ಇದನ್ನೂ ಓದಿ Anshul Kamboj: 8 ವಿಕೆಟ್ ಕಿತ್ತು ದುಲೀಪ್ ಟ್ರೋಫಿಯಲ್ಲಿ ದಾಖಲೆ ಬರೆದ ಅಂಶುಲ್
ಪಂದ್ಯ ಡ್ರಾ
ಇಂಡಿಯಾ ಬಿ ಮತ್ತು ಇಂಡಿಯಾ ಸಿ ನಡುವಣ ಮತ್ತೊಂದು ಪಂದ್ಯ ಡ್ರಾ ಗೊಳ್ಳುವ ಮೂಲಕ ಅಂತ್ಯ ಕಂಡಿತು. ಈ ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿ 8 ವಿಕೆಟ್ ಕಿತ್ತು ದಾಖಲೆ ಬರೆದ ಮಧ್ಯಮ ವೇಗಿ ಅಂಶುಲ್ ಕಾಂಬೋಜ್(Anshul Kamboj) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕಾಂಬೋಜ್ 27.5 ಓವರ್ ದಾಳಿ ನಡೆಸಿ 8 ಮೇಡನ್ ಸಹಿತ 69 ರನ್ ವೆಚ್ಚದಲ್ಲಿ 8 ವಿಕೆಟ್ ಕಿತ್ತು ಮಿಂಚಿದರು. ಈ ಪಂದದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಸಿ ತಂಡ ಇಶಾನ್ ಕಿಶನ್ ಅವರ ಶತಕದ ನೆರವಿನಿಂದ 525 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಡಿಯಾ ʼಬಿʼ ತಂಡ 332 ರನ್‌ಗೆ ಸರ್ವಪತನ ಕಂಡಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ಸಿ ಅಂತಿಮ ದಿನದಾಟ ಮುಕ್ತಾಯಕ್ಕೆ ಕೆಲವೇ ನಿಮಿಷ ಇರುವಾಗ 4 ವಿಕೆಟ್‌ಗೆ 128 ರನ್ ಬಾರಿಸಿ ಡಿಕ್ಲೀರ್ ಮಾಡಿತು. ಹೀಗಾಗಿ ಪಂದ್ಯ ಡ್ರಾ ಗೊಂಡಿತು.