Friday, 20th September 2024

Duleep Trophy: ಶತಕ ಬಾರಿಸಿದ ಇಶಾನ್‌ ಕಿಶನ್‌; ಬೃಹತ್‌ ಮೊತ್ತದತ್ತ ಭಾರತ ‘ಸಿ’

Duleep Trophy

ಅನಂತಪುರ: ರಣಜಿ ಆಡಲು ಅಸಡ್ಡೆ ತೋರಿ ಬಿಸಿಸಿಐ(BCCI) ಕೆಂಗಣ್ಣಿಗೆ ಗುರಿಯಾಗಿ, ಭಾರತ ತಂಡದಲ್ಲಿ ಅವಕಾಶ ವಂಚಿತರಾಗಿರುವ ಇಶಾನ್​ ಕಿಶನ್​(Ishan Kishan) ಮತ್ತೆ ಟೀಮ್‌ ಇಂಡಿಯಾಕ್ಕೆ ಕಮ್‌ಬ್ಯಾಕ್‌ ಮಾಡಲು ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ಇಂದು(ಗುರುವಾರ) ಆರಂಭಗೊಂಡ ದುಲೀಪ್‌ ಟ್ರೋಫಿ(Duleep Trophy)ಕ್ರಿಕೆಟ್‌ ಪಂದ್ಯಾವಳಿಯ ದ್ವಿತೀಯ ಸುತ್ತಿನ ಪಂದ್ಯಾವಳಿಯಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ(Ishan Kishan hundred). ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಬುಚ್ಚಿಬಾಬು ಆಹ್ವಾನಿತ ಕ್ರಿಕೆಟ್‌ ಕೂಟದಲ್ಲಿಯೂ ಇಶಾನ್‌ ಶತಕ ಬಾರಿಸಿದ್ದರು.

ಗಾಯದಿಂದಾಗಿ ಮೊದಲ ಸುತ್ತಿನ ಪಂದ್ಯದಲ್ಲಿ ಇಶಾನ್‌ ಕಿಶನ್‌ ಕಣಕ್ಕಿಳಿದಿರಲಿಲ್ಲ. ದ್ವಿತೀಯ ಸುತ್ತುನಲ್ಲಿ ಆಡಲಿಳಿದ ಅವರು ಇಂಡಿಯಾ ʼಸಿʼ(India C) ತಂಡದ ಪರ 4ನೇ ಕ್ರಮಾಂಕದಲ್ಲಿ ಆಡಲಿಳಿದು 14 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 111 ರನ್‌ ಬಾರಿಸಿದರು. ವಿಶೇಷವೆಂದರೆ ಸಿಕ್ಸರ್‌ ಮೂಲಕವೇ ಅವರು ಶತಕ ಪೂರ್ತಿಗೊಳಿಸಿದ್ದು. 2014 ರಲ್ಲಿ ಜಾರ್ಖಂಡ್‌ ಪರ 16 ನೇ ವಯಸ್ಸಿನಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ್ದ ಕಿಶನ್ ಈ ಸ್ವರೂಪದಲ್ಲಿ ಬಾರಿಸಿದ 7ನೇ ಶತಕ ಇದಾಗಿದೆ. ಸದ್ಯ ಭಾರತ ಸಿ ತಂಡ 300ರ ಗಡಿ ದಾಟಿ ಬೃಹತ್‌ ಮೊತ್ತದತ್ತ ಓಟ ಬೆಳೆಸಿದೆ.

ಸದ್ಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಮಾತ್ರ ಭಾರತ ತಂಡ ಪ್ರಕಟಿಸಲಾಗಿದೆ. 2ನೇ ಪಂದ್ಯ ಕಾನ್ಪುರದಲ್ಲಿ ಸೆ.27ರಿಂದ ಅ.1ರ ವರೆಗೆ ನಡೆಯಲಿದೆ. ಆ ಪಂದ್ಯಕ್ಕೆ ಇನ್ನಷ್ಟೇ ತಂಡ ಪ್ರಕಟಗೊಳ್ಳಬೇಕಿದೆ. ಇಶಾನ್‌ ಕಿಶನ್‌ಗೂ ಅವಕಾಶ ಸಿಗುವ ಸಾಧ್ಯತೆಯೊಂದು ದಟ್ಟವಾಗಿದೆ.

ಕಳೆದ ವರ್ಷ ನವೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಸಂದರ್ಭದಲ್ಲಿ ಕಿಶನ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು. ನಂತರದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ ಕೂಡ ಅಂತಿಮ ಹಂತದಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದರು. ಸ್ವಲ್ಪ ವಿರಾಮವನ್ನು ತೆಗೆದುಕೊಂಡ ಇಶಾನ್​ಗೆ ಅಂದಿನ ಕೋಚ್​ ದ್ರಾವಿಡ್​ ಮತ್ತು ಆಯ್ಕೆ ಸಮಿತಿ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವಂತೆ ಸೂಚನೆ ನೀಡಿತ್ತು. ಆದರೆ ಇದನ್ನು ಇಶಾನ್​ ಕಡೆಗಣಿಸಿದ್ದರು. ಈ ಕಾರಣದಿಂದ ಬಿಸಿಸಿಐ ಅವರನ್ನು ಕೇಂದ್ರೀಯ ಗುತ್ತಿಗೆಯಿಂದಲೂ ಕೈಬಿಟ್ಟಿತ್ತು.

ಇದನ್ನೂ ಓದಿ ಇಶಾನ್‌ ಕಿಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ತಂಡಕ್ಕೆ ಆಯ್ಕೆ ಮಾಡದಿರುವುದರ ಕುರಿತು ಕೆಲ ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಇಶಾನ್​, “ನಾನು ಬ್ರೇಕ್ ಪಡೆದಿದ್ದೆ, ನನ್ನ ಪ್ರಕಾರ ಇದು ಸಾಮಾನ್ಯ. ತಂಡಕ್ಕೆ ಕಮ್ ಬ್ಯಾಕ್ ಮಾಡಬೇಕಾದರೆ ದೇಶೀಯ ಕ್ರಿಕೆಟ್​ನಲ್ಲಿ ಪ್ರದರ್ಶನ ನೀಡಬೇಕು ಎಂಬ ನಿಯಮವಿದೆ ಎನ್ನುವುದು ನನಗೆ ತಿಳಿದಿದೆ. ಆದರೆ, ಅಂದು ನಾನು ಆಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಿಗಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದೆ. ಉತ್ತಮ ಫಾರ್ಮ್​ನಲ್ಲಿರುವಾಗ ಅಂತಾರಾಷ್ಟ್ರೀಯ ಕ್ರಿಕೆಟ್​ ಬಿಟ್ಟು ದೇಶೀಯ ಕ್ರಿಕೆಟ್​ನಲ್ಲಿ ಆಡಬೇಕು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಇಂಡಿಯನ್ ಎಕ್ಸ್ ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.