Wednesday, 8th January 2025

Champions Trophy: ಆಪ್ಘಾನ್‌ ವಿರುದ್ಧದ ಪಂದ್ಯ ಬಹಿಷ್ಕಾರ ಮನವಿ ತಿರಸ್ಕರಿಸಿದ ಇಸಿಬಿ

ಲಂಡನ್‌: ತಾಲಿಬಾನ್ ಸರ್ಕಾರವು ಮಹಿಳಾ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಕಾರಣ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ(Champions Trophy) ಅಫ್ಘಾನಿಸ್ತಾನ ವಿರುದ್ಧದ ಇಂಗ್ಲೆಂಡ್ ಪಂದ್ಯವನ್ನು ಬಹಿಷ್ಕರಿಸುವ ಬಂದ ಕರೆಗಳನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸುವಂತೆ ಇಂಗ್ಲೆಂಡ್​ನ 160 ಕ್ಕೂ ಅಧಿಕ ರಾಜಕಾರಣಿಗಳು ಇಸಿಬಿಗೆ ಪತ್ರ ಬರೆದಿದ್ದರು.

ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಮೇಲೆ ಭಯಾನಕ ವರ್ತನೆ ತೋರುತ್ತಿದೆ. ಇದನ್ನು ಹತ್ತಿಕ್ಕುವ ಸಲುವಾಗಿ ನಾವು ಇಂಗ್ಲೆಂಡ್ ತಂಡದ ಆಟಗಾರರು ಮತ್ತು ಅಧಿಕಾರಿಗಳಿಗೆ ಬಲವಾಗಿ ಒತ್ತಾಯಿಸುತ್ತೇವೆ. ಅಫ್ಘಾನಿಸ್ತಾನ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿಯ ಪಂದ್ಯವನ್ನು ಬಹಿಷ್ಕರಿಸಿ ಎಂದು 160 ಕ್ಕೂ ಅಧಿಕ ರಾಜಕಾರಣಿಗಳು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗೆ ಪತ್ರ ಬರೆದು ಮನವಿ ಮಾಡಿದ್ದರು.

2021ರಲ್ಲಿ ತಾಲಿಬಾನ್‌ ಸರ್ಕಾರ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರಿಕೆಟ್‌ ಬ್ಯಾನ್‌ ಮಾಡಿದ್ದ ಸಂದರ್ಭದಲ್ಲಿ ಇದನ್ನು ಖಂಡಿಸಿ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್, ಅಫ್ಘಾನಿಸ್ತಾನ್ ವಿರುದ್ಧ ಸರಣಿ ಆಡಲು ನಿರಾಕರಿಸಿತ್ತು. ಇತ್ತೀಚೆಗೆ ಮಹಿಳೆಯರ ಮೇಲೆ ಕೆಲವೊಂದು ನಿರ್ಬಂಧ ಹೇರಿರುವ ತಾಲಿಬಾನ್(Taliban) ಉಗ್ರರ ವಿರುದ್ಧ ಅಫ್ಘಾನಿಸ್ತಾನ ಕ್ರಿಕೆಟಿಗರಾದ ರಶೀದ್​ ಖಾನ್(Rashid Khan)​ ಮತ್ತು ಮೊಹಮ್ಮದ್​ ನಬಿ(Mohammad Nabi) ತಿರುಗಿ ಬಿದ್ದಿದ್ದರು.

ಇದನ್ನೂ ಓದಿ Australian Open: ನೂತನ ಕೋಚ್‌ ಜತೆ ಅಭ್ಯಾಸ ಆರಂಭಿಸಿದ ಜೊಕೊವಿಕ್

ತಾಲಿಬಾನ್ ಸರ್ಕಾರ ಆರನೇ ತರಗತಿಯ ನಂತರ ಹುಡುಗಿಯರಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿತು. ಬಳಿಕ ಡಿಸೆಂಬರ್ 2022ರಲ್ಲಿ ಮಹಿಳೆಯರು ವಿಶ್ವವಿದ್ಯಾಲಯಕ್ಕೆ ಹೋಗುವುದನ್ನು ನಿಷೇಧಿಸಿತ್ತು. ಇದೀಗ ಮಹಿಳೆಯರಿಗೆ ವೈದ್ಯಕೀಯ ತರಬೇತಿಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇನ್ನು ಮುಂದೆ ದೇಶದಲ್ಲಿ ಮಹಿಳೆಯರು ಶುಶ್ರೂಷಕಿ ಹಾಗೂ ನರ್ಸಿಂಗ್ ಶಿಕ್ಷಣವನ್ನು ಪಡೆಯುವಂತಿಲ್ಲ ಎಂದು ತಿಳಿಸಿದೆ. ಡಿಸೆಂಬರ್​ 2 ರಂದು ತಾಲಿಬಾನ್ ಸಚಿವ ಹಿಬತುಲ್ಲಾ ಅಖುಂದ್ಜಾದಾ ಈ ಆದೇಶ ಹೊರಡಿಸಿದ್ದರು.

ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ರಶೀದ್ ಖಾನ್‌ ಟ್ವಿಟರ್‌ ಎಕ್ಸ್‌ನಲ್ಲಿ ಸುದೀರ್ಘ ಪತ್ರ ಬರೆದಿದ್ದು, ʼಇಸ್ಲಾಂನಲ್ಲಿ ಶಿಕ್ಷಣ ಎಂಬುದು ಪ್ರತಿಯೊಬ್ಬರಿಗೂ ಕಡ್ಡಾಯವಾಗಿದೆ. ಅದು ಪ್ರತಿಯೊಬ್ಬರು ಹಕ್ಕು ಕೂಡ ಆಗಿದೆ. ಇದರಿಂದ ಪುರುಷರಾಗಲಿ ಅಥವಾ ಮಹಿಳೆಯರಾಗಲಿ ವಂಚಿತರಾಗಲು ಸಾಧ್ಯವಿಲ್ಲ. ಆದರೆ ನಮ್ಮ ಸಹೋದರಿಯರಿಗೆ ವೈದ್ಯಕೀಯ ಶಿಕ್ಷಣದ ಬಾಗಿಲು ಮುಚ್ಚಿರುವುದು ನನ್ನನು ದುಃಖಿತನನ್ನಾಗಿ ಮಾಡಿದೆ. ಎಲ್ಲರಿಗೂ ಶಿಕ್ಷಣವನ್ನು ಒದಗಿಸುವುದು ಸಾಮಾಜಿಕ ಜವಾಬ್ದಾರಿ ಮಾತ್ರವಲ್ಲ, ನಮ್ಮ ನೈತಿಕ ಹೊಣೆಗಾರಿಕೆಯಾಗಿದೆ. ಸರ್ಕಾರದ ಈ ನಡೆ ನಿರಾಶೆಗೊಳಿಸಿದೆ ಎಂದು ಅಸಮಾಧಾನ ಹೊರ ಹಾಕಿದ್ದರು.

Leave a Reply

Your email address will not be published. Required fields are marked *