Friday, 27th December 2024

Ellyse Perry: ಮಹಿಳಾ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ಆರ್‌ಸಿಬಿ ಆಟಗಾರ್ತಿ!

Ellyse Perry Becomes First Woman Player To score 7000 runs and scalp 300 wickets in women's cricket

ಬ್ರಿಸ್ಬೇನ್‌: ಭಾರತ ಮಹಿಳಾ ಕ್ರಿಕೆಟ್‌ ತಂಡದ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಸ್ಟಾರ್‌ ಆಲ್‌ರೌಂಡರ್‌ ಎಲಿಸ್‌ ಪೆರಿ (Ellyse Perry) ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಭಾನುವಾರ ಇಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಪೆರಿ ಕೇವಲ 75 ಎಸೆತಗಳಲ್ಲಿ ಭರ್ಜರಿ ಶತಕವನ್ನು (105 ರನ್‌) ಸಿಡಿಸಿದ್ದರು.

ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ ಎಲಿಸ್‌ ಪೆರಿ ಅವರು 140.00ರ ಸ್ಟ್ರೈಕ್‌ ರೇಟ್‌ನಲ್ಲಿ 6 ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಗಳನ್ನು ಸಿಡಿಸಿದ್ದರು. ಇತ್ತೀಚಿಗೆ ರನ್‌ ಹೊಳೆ ಹರಿಸುವಲ್ಲಿ ತಲ್ಲೀನರಾಗಿರುವ ಎಲಿಸ್‌ ಪೆರಿ, ಮಹಿಳಾ ಕ್ರಿಕೆಟ್‌ನಲ್ಲಿ 7000 ರನ್‌ಗಳು ಹಾಗೂ 300 ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ಆಟಗಾರ್ತಿ ಎಂಬ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಇದೀಗ ಆಸೀಸ್‌ ಆಟಗಾರ್ತಿಯ ಖಾತೆಯಲ್ಲಿ 7080 ರನ್‌ಗಳು ಹಾಗೂ 330 ವಿಕೆಟ್‌ಗಳಿವೆ.

ಎಲಿಸ್‌ ಪೆರಿ ಅವರು 13 ಟೆಸ್ಟ್‌ ಪಂದ್ಯಗಳಿಂದ 928 ರನ್‌ಗಳು ಹಾಗೂ 39 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು 149 ಏಕದಿನ ಪಂದ್ಯಗಳಿಂದ 4064 ರನ್‌ಗಳು ಹಾಗೂ 165 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ಆಸೀಸ್‌ ಆಟಗಾರ್ತಿ 2088 ರನ್‌ಗಳು ಮತ್ತು 126 ವಿಕೆಟ್‌ಗಳನ್ನುಕಬಳಿಸಿದ್ದಾರೆ.

2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ

ಎಲಿಸ್‌ ಪೆರಿ ಅವರು 2007ರಲ್ಲಿ ಆಸ್ಟ್ರೇಲಿಯಾ ತಂಡದ ಪರ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ಆಸೀಸ್‌ ತಂಡಕ್ಕೆ ಕೀ ಆಟಗಾರ್ತಿಯಾಗಿ ಆಡುತ್ತಿದ್ದಾರೆ ಹಾಗೂ ಇನ್ನೂ 4-5 ವರ್ಷಗಳ ಕಾಲ ಆಡಲಿದ್ದಾರೆ. ಅವರು ಖಚಿತವಾಗಿಯೂ ತಮ್ಮ ವೃತ್ತಿ ಜೀವನವನ್ನು ಮುಗಿಸುವ ಹೊತ್ತಿಗೆ 10000 ರನ್‌ಗಳನ್ನು ದಾಖಲಿಸುವ ಸಾಧ್ಯತೆ ಇದೆ.

ಏಕದಿನ ಸರಣಿ ವಶಪಡಿಸಿಕೊಂಡ ಆಸ್ಟ್ರೇಲಿಯಾ ವನಿತೆಯರು

ಎಲಿಸ್‌ ಪೆರಿ ಮತ್ತು ಜಾರ್ಜಿಯಾ ವಾಲ್‌ ಅವರ ಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡ, ಎರಡನೇ ಏಕದಿನ ಪಂದ್ಯದಲ್ಲಿ 122 ರನ್‌ಗಳ ಭಾರಿ ಅಂತರದಲ್ಲಿ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಕಾಂಗರೂ ಪಡೆ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.

ಈ ಪಂದ್ಯದಲ್ಲಿ 372 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಸ್ಮೃತಿ ಮಂಧಾನಾ ನಾಲ್ಕನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದರು ಹಾಗೂ ಹರ್ಲೀನ್‌ ಡಿಯೋಲ್‌ 22 ಎಸೆತಗಳಲ್ಲಿ 12 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ನಂತರ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ರಿಚಾ ಘೋಷ್‌ ಅವರು ಮೂರನೇ ವಿಕೆಟ್‌ಗೆ 66 ರನ್‌ ಗಳಿಸುವ ಮೂಲಕ ಭಾರತಕ್ಕೆ ಆಸರೆ 22ನೇ ಓವರ್‌ನ ಕೊನೆಯ ಎಸೆತದಲ್ಲಿ ರಿಚಾ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಭಾರತ ವನಿತೆಯರು 249 ರನ್‌ಗಳಿಗೆ ಆಲ್‌ಔಟ್‌ ಆದರು. ಇನ್ನು ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಡಿಸೆಂಬರ್‌ 11 ರಂದು ನಡೆಯಲಿದೆ.

ಈ ಸುದ್ದಿಯನ್ನು ಓದಿ: India: ಕ್ರಿಕೆಟ್‌ ಇತಿಹಾಸದಲ್ಲಿಯೇ ಅನಗತ್ಯ ಹ್ಯಾಟ್ರಿಕ್‌ ಹೆಗಲೇರಿಸಿಕೊಂಡ ಭಾರತ!