ನವದೆಹಲಿ: ತಮ್ಮ ಸೊಗಸಾದ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ಬರೆದಿರುವ ಇಂಗ್ಲೆಂಡ್ ತಂಡದ ಹಿರಿಯ ಬ್ಯಾಟ್ಸ್‌ಮನ್ ಜೋ ರೂಟ್, ಇದೀಗ ಮತ್ತೊಂದು ದಾಖಲೆಯ ಸನಿಹದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 13000 ರನ್‌ಗಳ ಸನಿಹದಲ್ಲಿದ್ದಾರೆ. ಡಿಸೆಂಬರ್ 14 ರಂದು ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿರುವ ಮೂರನೇ ಹಾಗೂ ಕೊನೆಯ (ENG vs NZ) ಟೆಸ್ಟ್‌ನಲ್ಲಿ ಜೋ ರೂಟ್ ಈ ದಾಖಲೆಯನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ.
ಪ್ರಸ್ತುತ ಜೋ ರೂಟ್ ಅವರು ಆಡಿದ 151 ಟೆಸ್ಟ್ ಪಂದ್ಯಗಳಿಂದ 12886 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐದನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದೀಗ13000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಲು ಇಂಗ್ಲೆಂಡ್ ಮಾಜಿ ನಾಯಕನಿಗೆ ಕೇವಲ 114 ರನ್‌ಗಳ ಅಗತ್ಯವಿದೆ.
ಇಷ್ಟು ರನ್‌ಗಳನ್ನು ಅವರು ಕಲೆ ಹಾಕಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 13000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾ ದಿಗ್ಗಜ ಜಾಕ್ ಕಾಲಿಸ್ ಅವರನ್ನು ಹಿಂದಿಕ್ಕಲಿದ್ದಾರೆ. ಜಾಕ್ ಕಾಲಿಸ್ 13000 ರನ್‌ಗಳನ್ನು ಪೂರ್ಣಗೊಳಿಸಲು 159 ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಭಾರತದ ಮಾಜಿ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಈ ದಾಖಲೆಯನ್ನು ಬರೆಯಲು 160 ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡಿದ್ದರು.
ವೇಗವಾಗಿ 13000 ಟೆಸ್ಟ್ ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. ಇವರು 162 ಟೆಸ್ಟ್ ಪಂದ್ಯಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು. ಇನ್ನು ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮಾಸ್ಟರ್ ಬ್ಲಾಸ್ಟರ್ 13000 ರನ್‌ಗಳನ್ನು ತಲುಪಲು 163 ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡಿದ್ದರು. 266 ಇನಿಂಗ್ಸ್‌ಗಳನ್ನು ಆಡುವ ಮೂಲಕ ಕ್ರಿಕೆಟ್ ದೇವರು ಈ ಸಾಧನೆಗೆ ಭಾಜನರಾಗಿದ್ದರು.
ಸಚಿನ್ ತೆಂಡೂಲ್ಕರ್ ದಾಖಲೆ ಮೇಲೆ ಜೋ ರೂಟ್ ಕಣ್ಣು
ಜೋ ರೂಟ್ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 36 ಶತಕಗಳು ಹಾಗೂ 64 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯ ಮೇಲೆ ಇಂಗ್ಲೆಂಡ್ ಮಾಜಿ ನಾಯಕ ಕಣ್ಣಿಟ್ಟಿದ್ದಾರೆ. 200 ಟೆಸ್ಟ್ ಪಂದ್ಯಗಳನ್ನು ಆಡಿರುವ ತೆಂಡೂಲ್ಕರ್ 15921 ರನ್‌ಗಳನ್ನು ಗಳಿಸಿದಾರೆ.
ಟೆಸ್ಟ್ ಸರಣಿ ವಶಪಡಿಸಿಕೊಂಡಿರುವ ಇಂಗ್ಲೆಂಡ್
ನ್ಯೂಜಿಲೆಂಡ್ ವಿರುದ್ಧ ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಇಂಗ್ಲೆಂಡ್ ತಂಡ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಮೊದಲನೇ ಟೆಸ್ಟ್ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದಿದ್ದ ಕಿವೀಸ್, ಎರಡನೇ ಟೆಸ್ಟ್ ಪಂದ್ಯವನ್ನು 323 ರನ್‌ಗಳಿಂದ ಗೆಲುವು ಪಡೆದಿತ್ತು. ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡಿಸೆಂಬರ್ 24 ರಂದು ಆರಂಭವಾಗಲಿದೆ.
ಈ ಸುದ್ದಿಯನ್ನು ಓದಿ: Joe Root: ದಿಗ್ಗಜ ಸಚಿನ್ ಟೆಸ್ಟ್ ದಾಖಲೆ ಮುರಿದ ಜೋ ರೂಟ್