ಲಂಡನ್: ಅಕ್ಟೋಬರ್ʼನಲ್ಲಿ ಪಾಕಿಸ್ತಾನದ ಪುರುಷರ ಮತ್ತು ಮಹಿಳೆಯರ ಪ್ರವಾಸಗಳನ್ನ ರದ್ದುಗೊಳಿಸಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸೋಮವಾರ ದೃಢಪಡಿಸಿದೆ.
ಭದ್ರತಾ ಕಾರಣಗಳಿಂದಾಗಿ ಕಳೆದ ಶುಕ್ರವಾರ ಕೊನೆ ಕ್ಷಣದಲ್ಲಿ ನ್ಯೂಜಿಲ್ಯಾಂಡ್ ಪಾಕಿಸ್ತಾನ ಜೊತೆಗಿನ ತನ್ನ ಸೀಮಿತ ಓವರ್ʼಗಳ ಸರಣಿಯಿಂದ ಹಿಂದೆ ಸರಿದಿತ್ತು. ಇಂಗ್ಲೆಂಡ್ ಕೂಡ ಇದೇ ಹಾದಿ ಅನುಸರಿಸಿದ್ದು, ಪಾಕಿ ಸ್ತಾನಕ್ಕೆ ಭಾರೀ ಮುಜುಗರ ತಂದಿದೆ.
ಇಂಗ್ಲೆಂಡ್ ಪುರುಷರು ಮತ್ತು ಮಹಿಳಾ ತಂಡಗಳು ಅಕ್ಟೋಬರ್ 13 ಮತ್ತು 14 ರಂದು ರಾವಲ್ಪಿಂಡಿಯಲ್ಲಿ ಎರಡು ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನ ಆಡಬೇಕಾಗಿತ್ತು, ಅಕ್ಟೋಬರ್ 17-21 ರವರೆಗೆ ಮೂರು ಪಂದ್ಯಗಳ ಒಂದು ದಿನದ ಅಂತರರಾಷ್ಟ್ರೀಯ ಸರಣಿಗಾಗಿ ಮಹಿಳಾ ತಂಡ ಉಳಿಯಬೇಕಿತ್ತು.
ಪಾಕಿಸ್ತಾನದಲ್ಲಿ ಈ ಹೆಚ್ಚುವರಿ ಇಂಗ್ಲೆಂಡ್ ಮಹಿಳಾ ಮತ್ತು ಪುರುಷರ ಆಟಗಳ ಬಗ್ಗೆ ಚರ್ಚಿಸಲು ಇಸಿಬಿ ಮಂಡಳಿ ಈ ವಾರಾಂತ್ಯದಲ್ಲಿ ಸಭೆ ಕರೆದಿದ್ದು, ಅಕ್ಟೋಬರ್ ಪ್ರವಾಸದಿಂದ ಎರಡೂ ತಂಡಗಳನ್ನ ಹಿಂತೆಗೆದು ಕೊಳ್ಳಲು ಮಂಡಳಿ ಒಲ್ಲದ ಮನಸ್ಸಿನಿಂದ ನಿರ್ಧರಿಸಿದೆ’ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.