ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಊಟದ ವಿರಾಮದ ವೇಳೆಗೆ ಬೆನ್ನು ಬೆನ್ನಿಗೆ ಎರಡು ವಿಕೆಟ್ ಕಬಳಿಸಿರುವ ಟೀಮ್ ಇಂಡಿಯಾ ತಿರುಗೇಟು ನೀಡಿದೆ. ಊಟದ ವಿರಾಮದ ಹೊತ್ತಿಗೆ 27 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ.
ಆರಂಭಿಕರಾದ ರೋರಿ ಬರ್ನ್ಸ್ ಹಾಗೂ ಡಾಮಿನಿಕ್ ಸಿಬ್ಲಿ ಎಚ್ಚರಿಕೆಯ ಆರಂಭ ನೀಡಿದರು. 17 ಟೆಸ್ಟ್ ಪಂದ್ಯಗಳ ಬಳಿಕ ತವರಿನಲ್ಲಿ ಮೊದಲ ಪಂದ್ಯ ಆಡುತ್ತಿರುವ ಜಸ್‌ಪ್ರೀತ್ ಬೂಮ್ರಾ ಹಾಗೂ ಸುದೀರ್ಘ ಸಮಯದ ಬಳಿಕ ತಂಡಕ್ಕೆ ಪುನರಾಗಮನ ಮಾಡಿರುವ ಇಶಾಂತ್ ಶರ್ಮಾ ಪ್ರಭಾವಿ ದಾಳಿ ಸಂಘಟಿಸಿದರೂ ಆರಂಭದಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಊಟದ ವಿರಾಮಕ್ಕೆ ಸ್ವಲ್ಪ ಮೊದಲು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಎದುರಾಳಿಗಳಿಗೆ ಮೊದಲ ಆಘಾತ ನೀಡಿದರು. ರೋರಿ ಬರ್ನ್ಸ್ (33) ಹೊರದಬ್ಬುವಲ್ಲಿ ಯಶಸ್ವಿಯಾದರು. ಬರ್ನ್ಸ್ ಎರಡು ಬೌಂಡರಿಗಳಿಂದ 33 ರನ್ ಗಳಿಸಿದರು. ಮೊದಲ ವಿಕೆಟ್‌ಗೆ ಡಾಮಿನಿಕ್ ಸಿಬ್ಲಿ ಜೊತೆಗೆ 63 ರನ್‌ಗಳ ಜೊತೆಯಾಟ ನೀಡಿದರು.
ಜಸ್‌ಪ್ರೀತ್ ಬೂಮ್ರಾ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದ ಡ್ಯಾನಿಯಲ್ ಲಾರೆನ್ಸ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. ಕ್ರೀಸಿನಲ್ಲಿರುವ ಸಿಬ್ಲಿ ಹಾಗೂ ನಾಯಕ ಜೋ ರೂಟ್ (4*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೊಂದೆಡೆ 96 ಎಸೆತಗಳನ್ನು ಎದುರಿಸಿರುವ ಸಿಬ್ಲಿ ಮೂರು ಬೌಂಡರಿಗಳಿಂದ ಅಜೇಯ 26 ರನ್ ಗಳಿಸಿದ್ದಾರೆ.
ಸುದೀರ್ಘ ಸಮಯದ ಬಳಿಕ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.