ಕೋಪನ್‌ಹೇಗನ್: ಜೋಯಲ್ ಗಳಿಸಿದ ಗೋಲಿನ ನೆರವಿನಿಂದ ಫಿನ್‌ಲೆಂಡ್ ತಂಡವು ಶನಿವಾರ ನಡೆದ ಯೂರೋಪಿಯನ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು ಸೋಲಿಸಿತು.
ಡೆನ್ಮಾರ್ಕ್ ತಂಡದ ಕ್ರಿಸ್ಟಿಯನ್ ಎರಿಕ್ಸನ್ ಕ್ರೀಡಾಂಗಣದಲ್ಲಿ ಕುಸಿದುಬಿದ್ದ ಕಾರಣ ಪಂದ್ಯವನ್ನು 90 ನಿಮಿಷಗಳ ಕಾಲ ಸ್ಥಗಿತ ಗೊಳಿಸಲಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಿಕ್ಸನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಪಂದ್ಯದ 60ನೇ ನಿಮಿಷದಲ್ಲಿ ಜೆರೆ ಯುರೊನೆನ್ ನೆರವಿನೊಂದಿಗೆ ಪೋಜನ್ ಪಾಲೊ ಕಾಲ್ಚಳಕ ತೋರಿದರು. ಡೆನ್ಮಾರ್ಕ್‌ನ ಗೋಲ್‌ಕೀಪರ್ ಕಾಸ್ಪರ್ ಶೆಮಿಚೆಲ್ ಅದನ್ನು ತಡೆಯುವ ಯತ್ನ ನಡೆಸಿದರೂ ಸಫಲರಾಗಲಿಲ್ಲ. ಪಂದ್ಯದುದ್ದಕ್ಕೂ ಡೆನ್ಮಾರ್ಕ್ ಆಟಗಾರರ ಪ್ರಾಬಲ್ಯ ಹೆಚ್ಚಾಗಿತ್ತು.
ಫಿನ್‌ಲೆಂಡ್ ಗೋಲ್‌ಕೀಪರ್ ಲೂಕಾಸ್ ರಾಡೆಕಿ ಪೆನಾಲ್ಟಿಯೊಂದನ್ನು ತಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೊಂದು ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬೆಲ್ಜಿಯಂ ತಂಡವು 3-0ಯಿಂದ ರಷ್ಯಾವನ್ನು ಸೋಲಿಸಿತು.