ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮಹಾರಾಷ್ಟ್ರದ ಥಾಣೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಹತ್ತು ದಿನಗಳ ಚಿಕಿತ್ಸೆಯ ಬಳಿಕ ಥಾಣೆಯ ಆಕೃತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಈ ಸಂಬಂಧ ವಿಡಿಯೊ ಬಿಡುಗಡೆಯಾಗಿದೆ. ಈ ವಿಡಿಯೊದಲ್ಲಿ ಅವರಿಂದ ನಡೆಯಲು ಸಾಧ್ಯವಾಗುತ್ತಿಲ್ಲ ಆದರೆ, ಒಬ್ಬ ವ್ಯಕ್ತಿ ಅವರನ್ನು ಹಿಡಿದು ಕಾರಿಗೆ ಕಡೆದುಕೊಂಡು ಹತ್ತಿಸಿದರು. ಈ ವೇಳೆ ಅವರು ನಗುತ್ತಿರುವುದನ್ನು ಕಾಣಬಹುದು.
ಹೊಸ ವರ್ಷದಲ್ಲಿ ನಾಗರಿಕರು ಮದ್ಯ ಹಾಗೂ ಇತರೆ ಅಮಲು ಪದಾರ್ಥಗಳಿಂದ ದೂರವಿರಬೇಕು ಎಂಬ ಸಂದೇಶವನ್ನು ವಿನೋದ್ ಕಾಂಬ್ಳಿ ನೀಡಿದ್ದಾರೆ. ಯಾವುದೇ ವ್ಯಸನವು ಜೀವನವನ್ನು ನಾಶಪಡಿಸುತ್ತದೆ ಎಂದಿದ್ದಾರೆ. ಅಲ್ಲದೆ ಆಸ್ಪತ್ರೆಯಲ್ಲೂ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಧರಿಸಿ ಬ್ಯಾಟ್ ಹಿಡಿದು ಹೊಸ ವರ್ಷಕ್ಕೆ ಶುಭ ಕೋರಿದ್ದಾರೆ. ಭಾರತ ತಂಡದ ಮಾಜಿ ಆಟಗಾರನಿಗೆ ಚಿಕಿತ್ಸೆ ನೀಡಿದ್ದ ಆಕೃತಿ ಆಸ್ಪತ್ರೆಯ ವೈದ್ಯರು, ಕಾಂಬ್ಳಿ ಸಂಪೂರ್ಣ ಫಿಟ್ ಆಗಿದ್ದಾರೆ. ಆದರೆ, ಅವರು ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.
ಆಸ್ಪತ್ರೆಗೆ ದಾಖಲಾದ ಮೂರು ದಿನಗಳ ಬಳಿಕ ವಿನೋದ್ ಕಾಂಬ್ಳಿ ಪ್ರೇರಕ ಗೀತೆಯೊಂದನ್ನು ಹಾಡಿದ್ದರು. ತಮ್ಮ ಕಠಿಣ ಸನ್ನಿವೇಶದಲ್ಲಿ ಜೊತೆಗಿದ್ದ ಸ್ನೇಹಿತರು ಹಾಗೂ ನನ್ನೆಲ್ಲಾ ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಎಂದಿಗೂ ಕ್ರಿಕೆಟ್ ಅನ್ನು ಬಿಡುವುದಿಲ್ಲವೆಂದು ಮಾಧ್ಯಮಗಳಿಗೆ ತಮ್ಮ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ.
Vinod Kambli discharged from hospital. pic.twitter.com/NlpnGqPRmP
— News Arena India (@NewsArenaIndia) January 1, 2025
ಮೂತ್ರ ವಿಸರ್ಜನೆಯ ಸಮಸ್ಯೆ
2024ರ ಡಿಸೆಂಬರ್ ತಿಂಗಳಲ್ಲಿ ಅವರ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿತು. ಇದಾದ ಬಳಿಕ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಮೂತ್ರ ವಿಸರ್ಜನೆಯ ಸಮಸ್ಯೆ ಇತ್ತು ಮತ್ತು ದೇಹದ ಸೆಳೆತವೂ ಇತ್ತು. ನಂತರ ಆತನ ಮೆದುಳಿನಲ್ಲಿಯೂ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಈ ಹಿಂದೆಯೂ ಅವರು ತಮ್ಮ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಿದ್ದರು. ಇತ್ತೀಚೆಗೆ, ತಮ್ಮ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಅವರಿಗಾಗಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದ ವೀಡಿಯೊ ವೈರಲ್ ಆಗಿತ್ತು, ಅದರಲ್ಲಿ ಅವರು ಸಚಿನ್ ಅವರನ್ನು ತಮ್ಮ ಬಳಿ ಕುಳಿತುಕೊಳ್ಳಲು ಕೇಳಿದರು, ಆದರೆ ಅವರು ಮುಂದೆ ಹೋಗುತ್ತಾರೆ. ಈ ಕಾರ್ಯಕ್ರಮದಲ್ಲಿ ಅವರು ತುಂಬಾ ದುರ್ಬಲವಾಗಿ ಕಾಣಿಸಿಕೊಂಡಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ವಿನೋದ್ ಕಾಂಬ್ಳಿ ಅವರ ವೃತ್ತಿಜೀವನ
ವಿನೋದ್ ಕಾಂಬ್ಳಿ ಭಾರತ ತಂಡದ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಆಡಿದ್ದಾರೆ. ಅವರು 1991ರಲ್ಲಿ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ 2000ನೇ ಇಸವಿಯಲ್ಲಿ ತಮ್ಮ ವೃತ್ತಿ ಜೀವನದ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಭಾರತ ತಂಡದ ಪರ 104 ಏಕದಿನ ಪಂದ್ಯಗಳಲ್ಲಿ 2477 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 17 ಟೆಸ್ಟ್ ಪಂದ್ಯಗಳಲ್ಲಿ 4 ಶತಕ ಮತ್ತು ಮೂರು ಅರ್ಧ ಶತಕಗಳನ್ನು ಒಳಗೊಂಡಂತೆ 1084 ರನ್ ಗಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Vinod Kambli: ಚೇತರಿಕೆ ಕಂಡ ತಕ್ಷಣ ವಿನೋದ್ ಕಾಂಬ್ಳಿ ಹೇಳಿದ್ದೇನು?