ಸಿಡ್ನಿ: ತಂಡದ ಹಿರಿಯ ಆಟಗಾರರ ಭವಿಷ್ಯದ ಕುರಿತು ನಾನು ಮಾತನಾಡುವುದಿಲ್ಲ. ವಿದಾಯ ಹೇಳುವುದು ಅವರವರಿಗೆ ಬಿಟ್ಟದ್ದು ಎಂದು ಟೀಮ್ ಇಂಡಿಯಾದ(AUS vs IND) ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ. ಆಸೀಸ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಗಂಭೀರ್ ಮಾತನ್ನು ಹೇಳಿದರು.
‘ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬದ್ಧತೆ ಹಾಗೂ ಶಿಸ್ತು ಹೊಂದಿದ್ದಾರೆ. ಅವರು ಇನ್ನಷ್ಟು ಬಲಯುತವಾಗಿ ತಂಡವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬಹುದು ಎಂದು ನಾನು ನಿರೀಕ್ಷಿಸಿದ್ದೇನೆ. ಡ್ರೆಸಿಂಗ್ ರೂಮ್ನಲ್ಲಿ ಎಲ್ಲ ಹಿರಿಯ ಹಾಗೂ ಕಿರಿಯ ಆಟಗಾರರ ಜತೆ ಪ್ರಾಮಾಣಿಕ ಹಾಗೂ ನ್ಯಾಯಯುತವಾಗಿ ಇರಲು ಬಯಸುತ್ತೇನೆ. ಯಾವಾಗಲೂ ಡ್ರೆಸಿಂಗ್ ರೂಮ್ ಸಂತಸದಿಂದ ಇಡಬೇಕು ಎಂದುಕೊಳ್ಳುತ್ತೇನೆ’ ಎಂದು ಗಂಭೀರ್ ಹೇಳಿದರು.
ಇದೇ ವೇಳೆ ಆಸೀಸ್ ಯುವ ಬ್ಯಾಟರ್ ಸ್ಯಾಮ್ ಕೊನ್ಸ್ಟಾಸ್ ದುರ್ವರ್ತನೆಗೆ ಬೆಂಬಲ ಸೂಚಿಸಿ ಜಸ್‌ಪ್ರೀತ್ ಬುಮ್ರಾ ಅವರನ್ನು ದೂರಿದ್ದ ಆಸೀಸ್ ಕೋಚ್ ಆ್ಯಂಡ್ರ್ಯೂ ಮೆಕ್ಡೊನಾಲ್ಡ್ಗೂ ತಕ್ಕ ತಿರುಗೇಟು ನೀಡಿದ್ದಾರೆ. ‘ಕ್ರಿಕೆಟ್‌ನಲ್ಲಿ ತುಂಬಾ ಮೃದು ಸ್ವಭಾವದಲ್ಲಿ ಇರಲು ಸಾಧ್ಯವಿಲ್ಲ. ಇಲ್ಲಿ ಸ್ಯಾಮ್ಗೆ ಭಯ ಹುಟ್ಟಿಸುವಂಥದ್ದೇನೂ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ಸ್ಟ್ರೈಕ್ನಲ್ಲಿದ್ದ ಉಸ್ಮಾನ್ ಖವಾಜಾ ಅನಗತ್ಯವಾಗಿ ಸಮಯ ವ್ಯರ್ಥ ಮಾಡುತ್ತಿರುವ ಬಗ್ಗೆ ಬುಮ್ರಾ ಪ್ರಶ್ನಿಸಿದ್ದು ಸರಿಯಾಗಿಯೇ ಇದೆ. ಇಲ್ಲಿ ಕೊನ್ಸ್ಟಾಸ್ ಮಧ್ಯ ಪ್ರವೇಶಿಸುವ ಅಗತ್ಯವೇ ಇರಲಿಲ್ಲ. ಮಧ್ಯೆ ಪ್ರವೇಶಿಸುವುದು ಅಂಪೈರ್ ಕೆಲಸವಾಗಿತ್ತು. ಹೀಗಿರುವಾಗ ಆತನಿಗೆ ಅಲ್ಲಿ ಏನು ಕೆಲಸ’ ಎಂದು ಹೇಳುವ ಮೂಲಕ ಕೊನ್ಸ್ಟಾಸ್ನದ್ದೇ ತಪ್ಪು ಎಂದು ಗಂಭೀರ್ ಹೇಳಿದರು.
ಎಚ್ಚರಿಕೆ ನೀಡಿದ ಗಂಭೀರ್
ಟೆಸ್ಟ್ ಕ್ರಿಕೆಟ್ ಆಡುವ ಬದ್ಧತೆಯನ್ನು ಹೊಂದಿರುವ ಪ್ರತಿಯೊಬ್ಬರೂ ದೇಶೀಯ ಕ್ರಿಕೆಟ್ ಆಡಬೇಕು ಎಂದು ಟೀಮ್ ಇಂಡಿಯಾ ಆಟಗಾರರಿಗೆ ಗಂಭೀರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ದೇಶೀಯ ಕ್ರಿಕೆಟ್‌ನಲ್ಲಿ ಆಡಿ ತಮ್ಮ ಸಾಮರ್ಥ್ಯ ಪ್ರದರ್ಶಿದ ಆಟಗಾರರಿಗಷ್ಟೇ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
‘ಎಲ್ಲರೂ ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕೆಂದು ನಾನು ಯಾವಾಗಲೂ ಬಯಸುತ್ತೇನೆ. ಇದು ಕೇವಲ ಒಂದು ಪಂದ್ಯಕ್ಕೆ ಸೀಮಿತವಲ್ಲ. ಟೆಸ್ಟ್ ಆಡುವ ಬದ್ಧತೆಯನ್ನು ಹೊಂದಿದ್ದರೆ, ಪ್ರತಿಯೊಬ್ಬರೂ ದೇಶೀಯ ಕ್ರಿಕೆಟ್ ಆಡಬೇಕು. ದೇಶೀಯ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡದಿದ್ದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಎಂದಿಗೂ ಪಡೆಯಲು ಸಾಧ್ಯವಿಲ್ಲ’ ಎಂದು ಗಂಭೀರ್ ಹೇಳಿದರು.