Tuesday, 7th January 2025

Gautam Gambhir: ತಂಡದಲ್ಲಿ ಸ್ಥಾನ ಬೇಕಿದ್ದರೆ…; ಖಡಕ್‌ ಎಚ್ಚರಿಕೆ ನೀಡಿದ ಕೋಚ್‌ ಗಂಭೀರ್‌

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್‌ ಪಂದ್ಯ ಸೋಲುವ(Australia series loss) ಮೂಲಕ ಭಾರತ ತಂಡ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌(Border Gavaskar Trophy) ಸರಣಿಯನ್ನು 1-3 ಅಂತರದಿಂದ ಕಳೆದಕೊಂಡಿತು. ಹಿರಿಯ ಆಟಗಾರರು ದೇಶೀಯ ಕ್ರಿಕೆಟ್​ನಲ್ಲಿ ಆಡುವುದನ್ನು ಕಡೆಗಣಿಸಿದ್ದರಿಂದಲೇ ಈ ಸೋಲು ಎದುರಾಗಿದೆ ಎಂದು ಮಾಜಿ ಆಟಗಾರರು ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ ಕೋಚ್‌ ಗೌತಮ್‌ ಗಂಭೀರ್‌(Gautam Gambhir) ಕೂಡ ಆಟಗಾರರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್ ಆಡುವ ಬದ್ಧತೆಯನ್ನು ಹೊಂದಿರುವ ಪ್ರತಿಯೊಬ್ಬರೂ ದೇಶೀಯ ಕ್ರಿಕೆಟ್ ಆಡಬೇಕು ಎಂದು ಹೇಳಿದ್ದಾರೆ.

ಸಿಡ್ನಿ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್‌, ಇನ್ನು ಮುಂದೆ ದೇಶೀಯ ಕ್ರಿಕೆಟ್​ನಲ್ಲಿ ಆಡಿ ತಮ್ಮ ಸಾಮರ್ಥ್ಯ ಪ್ರದರ್ಶಿದ ಆಟಗಾರರಿಗಷ್ಟೇ ಟೀಮ್‌ ಇಂಡಿಯಾದಲ್ಲಿ ಸ್ಥಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಕಳಪೆ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ಹಿರಿಯ ಆಟಗಾರರಾದ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜಾ ಸೇರಿ ಕಳಪೆ ಪ್ರದರ್ಶನ ತೋರಿದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿಯಲ್ಲಿ ವೈಟ್​ವಾಷ್​ ಮುಖಭಂಗ ಎದುರಿಸಿದಾಗಲೇ ಆಸೀಸ್‌ ಪ್ರವಾಸಕ್ಕೂ ಮುನ್ನ ಭಾರತೀಯ ಆಟಗಾರರು ದೇಶೀಯ ಕ್ರಿಕೆಟ್‌ ಆಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಆಟಗಾರರು ಕಾರ್ಯದೊತ್ತಡದ ನೆಪ ನೀಡಿ ಕಡೆಗಣಿಸಿದ್ದರು. ಇದೀಗ ಕೋಚ್‌ ಗಂಭೀರ್‌ ದೇಶೀಯ ಕ್ರಿಕೆಟ್‌ ಆಡುವ ವಿಚಾರವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಆಟಗಾರರಿಗೆ ದೇಶೀಯ ಕ್ರಿಕೆಟ್‌ನ ಮಹತ್ವವನ್ನು ಕೂಡ ಮನವರಿಕೆ ಮಾಡಿದ್ದಾರೆ.

‘ಎಲ್ಲರೂ ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕೆಂದು ನಾನು ಯಾವಾಗಲೂ ಬಯಸುತ್ತೇನೆ. ಇದು ಕೇವಲ ಒಂದು ಪಂದ್ಯಕ್ಕೆ ಸೀಮಿತವಲ್ಲ. ಟೆಸ್ಟ್‌ ಆಡುವ ಬದ್ಧತೆಯನ್ನು ಹೊಂದಿದ್ದರೆ, ಪ್ರತಿಯೊಬ್ಬರೂ ದೇಶೀಯ ಕ್ರಿಕೆಟ್ ಆಡಬೇಕು. ದೇಶೀಯ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡದಿದ್ದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಎಂದಿಗೂ ಪಡೆಯಲು ಸಾಧ್ಯವಿಲ್ಲ’ ಎಂದು ಗಂಭೀರ್ ಹೇಳಿದರು.

ವಿರಾಟ್​ ಕೊಹ್ಲಿ 2013 ಮತ್ತು ರೋಹಿತ್​ ಶರ್ಮ 2015ರಲ್ಲಿ ಕೊನೆಯದಾಗಿ ರಣಜಿ ಟ್ರೋಫಿಯಲ್ಲಿ ಆಡಿದ್ದರು. ಇದಾದ ಬಳಿಕ ಉಭಯ ಆಟಗಾರರು ದೇಶೀಯ ಕ್ರಿಕೆಟ್‌ನತ್ತ ಮುಖ ಮಾಡಿಲ್ಲ. ದಿಗ್ಗಜ ಆಟಗಾರಾದ ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ, ಜಹೀರ್‌ ಖಾನ್‌, ಲಕ್ಷ್ಮನ್‌ ಸೇರಿ ಹಲವು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫಾರ್ಮ್‌ ಕಳೆದುಕೊಂಡಾಗ ಯಾವುದೇ ಅಂಜಿಕೆ ಇಲ್ಲದೆ ದೇಶೀಯ ಕ್ರಿಕೆಟ್‌ ಆಡಿ ಮತ್ತೆ ಫಾರ್ಮ್‌ ಕಂಡುಕೊಂಡಿದ್ದರು.

Leave a Reply

Your email address will not be published. Required fields are marked *