ಮುಂಬಯಿ: ರೋಹಿತ್ ಶರ್ಮ(Rohit Sharma) ಆಸ್ಟ್ರೇಲಿಯಾ ವಿರುದ್ಧ 4ನೇ ಪಂದ್ಯದ ಬಳಿಕವೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದರು. ಆದರೆ ಅವರ ಹಿತೈಶಿಗಳು ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ ಕಾರಣ ರೋಹಿತ್ ಕೊನೆಯ ಕ್ಷಣದಲ್ಲಿ ನಿವೃತ್ತಿ ನಿರ್ಧಾರ ಕೈಬಿಟ್ಟರು ಎನ್ನಲಾಗಿದೆ. ಇದು ಕೋಚ್ ಗೌತಮ್ ಗಂಭೀರ್(Gautam Gambhir) ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
ರೋಹಿತ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವ ನಿರ್ಧಾರದಿಂದ ಹಿಂದೆ ಸರಿದಿದ್ದು ಗಂಭೀರ್ ಸಿಟ್ಟಿಗೆ ಕಾರಣವಾಗಿ ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಸರಣಿ ವೇಳೆ ಡ್ರೆಸ್ಸಿಂಗ್ ಕೋಣೆಯಲ್ಲಿ ಹಿರಿಯ ಆಟಗಾರರು, ಕೋಚ್ ನಡುವೆ ಭಿನ್ನಮತ ತಲೆದೋರಿದ್ದಾಗಿ ವರದಿಯಾಗಿತ್ತು. ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ 184 ರನ್‌ಗಳ ಸೋಲಿನ ನಂತರ ಗೌತಮ್ ಗಂಭೀರ್ ತಂಡದ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಪರಿಸ್ಥಿತಿಯ ಅಗತ್ಯತೆಗಳಿಗಿಂತ ತಮ್ಮ ಸಹಜ ಆಟಕ್ಕೆ ಆದ್ಯತೆ ನೀಡುವುದಕ್ಕಾಗಿ ಆಟಗಾರರನ್ನು ಟೀಕಿಸಿದ್ದರು ಎನ್ನಲಾಗಿತ್ತು. ಆದರೆ ಗಂಭೀರ್ ಮತ್ತು ರೋಹಿತ್ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ತಳ್ಳಿ ಹಾಕಿದ್ದರು.
ಆಸ್ಟ್ರೆಲಿಯಾ ಪ್ರವಾಸದಲ್ಲಿ ಭಾರತ ತಂಡ ತೋರಿದ ನಿರ್ವಹಣೆಯ ಬಗ್ಗೆ ನಾಯಕ ರೋಹಿತ್ ಶರ್ಮ, ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಜತೆಗೆ ಬಿಸಿಸಿಐ ಅಧಿಕಾರಿಗಳು ಶನಿವಾರ ಮುಂಬೈನಲ್ಲಿ ಪರಾಮರ್ಶೆ ಸಭೆ ನಡೆಸಿದ್ದರು. ಈ ವೇಳೆ ಈ ವೇಳೆ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆಯೂ ಚರ್ಚಿಸಲಾಗಿದೆ ಎನ್ನಲಾಗಿದೆ.
ಗಂಭೀರ್ ಭಾರತ ತಂಡದ ಕೋಚ್ ಆದಾಗ ಅವರ ಮೇಲೆ ಭಾರೀ ನಿರೀಕ್ಷೆಗಳನ್ನು ಮಾಡಲಾಗಿತ್ತು. ಆದರೆ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಅವರ ಹುದ್ದೆ ಮೇಲೆ ತೂಗುಯ್ಯಾಲೆಯಲ್ಲಿದೆ. ಗಂಭೀರ್ ಕೋಚ್ ಆದ ಬಳಿಕ ಭಾರತ 10 ಟೆಸ್ಟ್ ಆಡಿದ್ದು, ಕೇವಲ 3ರಲ್ಲಿ ಗೆದ್ದಿದೆ. ಇದರಲ್ಲಿ 2 ಟೆಸ್ಟ್ ಬಾಂಗ್ಲಾ ವಿರುದ್ಧ. ತಂಡ ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ 6 ಟೆಸ್ಟ್ ಸೋತಿದೆ. ಇನ್ನು, ಏಕದಿನದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲೂ ಗೆಲುವಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪ್ರದರ್ಶನ ಗಂಭೀರ್ ಭವಿಷ್ಯವನ್ನು ನಿರ್ಧರಿಸಲಿದೆ.