Friday, 22nd November 2024

ಪುರುಷ ಸಿಂಗಲ್ಸ್ ಫೈನಲ್: ಚಿನ್ನದ ಪದಕಕ್ಕೆ ಕೊರಳೊಡ್ಡಿದ ಅಲೆಕ್ಸಾಂಡರ್ ಜ್ವೆರೆವ್

ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಚಿನ್ನದ ಪದಕ ಗೆದ್ದಿದ್ದಾರೆ.

ಭಾನುವಾರ ಪುರುಷ ಸಿಂಗಲ್ಸ್ ಫೈನಲ್ ಹೋರಾಟದಲ್ಲಿ ನಾಲ್ಕನೇ ಶ್ರೇಯಾಂಕಿತ ಜ್ವೆರೆವ್, ಎದುರಾಳಿ ರಷ್ಯಾದ ಕೆರೆನ್ ಕ್ಯಾಚ್‌ನೋವ್ ವಿರುದ್ಧ 6-3, 6-1ರ ಅಂತರದ ಸುಲಭ ಗೆಲುವು ದಾಖಲಿಸಿದರು.

ರೋಜರ್ ಫೆಡರರ್, ರಫೆಲ್ ನಡಾಲ್ ಅವರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ನೊವಾಕ್ ಜೊಕೊ ವಿಚ್ ಅವರಂತಹ ಘಟಾನುಘಟಿ ಟೆನಿಸ್ ಪಟುಗಳನ್ನು ಮೀರಿ ನಿಂತಿರುವ ಜ್ವೆರೆವ್, ಅರ್ಹವಾಗಿಯೇ ಚಿನ್ನದ ಪದಕ ಗೆದ್ದಿದ್ದಾರೆ.

ಸೆಮಿಫೈನಲ್ ಹೋರಾಟದಲ್ಲಿ ಜ್ವೆರೆವ್ ಅವರು ಸರ್ಬಿಯಾದ ಜೊಕೊವಿಚ್ ವಿರುದ್ಧ 1-6, 6-3, 6-1ರಿಂದ ಗೆಲುವು ದಾಖಲಿಸಿದ್ದರು.

1988ರಲ್ಲಿ ಸ್ಟೆಫಿ ಗ್ರಾಫ್ ಬಳಿಕ ಒಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ ಜರ್ಮನಿಯ ಮೊದಲ ಟೆನಿಸ್‌ ಪಟು ಎಂಬ ಕೀರ್ತಿಗೆ ಜ್ವೆರೆವ್ ಭಾಜನರಾಗಿದ್ದಾರೆ. 24 ವರ್ಷದ ಜರ್ಮನ್ ಆಟಗಾರ 79 ನಿಮಿಷಗಳ ಹೋರಾಟದ ಅಂತ್ಯದಲ್ಲಿ ಎದುರಾಳಿಯನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.