Wednesday, 27th November 2024

Hardik Pandya: 2025ರ ಐಪಿಎಲ್‌ನ ಮೊದಲ ಪಂದ್ಯ ಆಡುವಂತಿಲ್ಲ ಹಾರ್ದಿಕ್‌ ಪಾಂಡ್ಯ; ಕಾರಣವೇನು?

ಮುಂಬಯಿ: ಮುಂದಿನ ವರ್ಷ ನಡೆಯುವ 18ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ(IPL 2025) ಈಗಾಗಗಲೇ ಆಟಗಾರರ ಮೆಗಾ ಹರಾಜು ಮುಕ್ತಾಯ ಕಂಡಿದೆ. ಎಲ್ಲ ಫ್ರಾಂಚೈಸಿಗಳು ಸ್ಟಾರ್‌ ಆಟಗಾರರನ್ನು ಖರೀದಿ ಮಾಡಿ ಬಲಿಷ್ಠ ತಂಡವನ್ನು ಕಟ್ಟಿದೆ. ಆದರೆ, ಮುಂಬೈ ಇಂಡಿಯನ್ಸ್‌(MI Captain) ತಂಡದ ನಾಯಕನಾಗಿರುವ ಹಾರ್ದಿಕ್‌ ಪಾಂಡ್ಯ(Hardik Pandya) ಅವರಿಗೆ ಮುಂದಿನ ಆವೃತ್ತಿಯ ಮೊದಲ ಪಂದ್ಯ ಆಡಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಅವರು ಕಳೆದ ಆವೃತ್ತಿಯಲ್ಲಿ ಮಾಡಿದ ಒಂದು ಎಡವಟ್ಟು.

ಹೌದು, ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿದಿದ್ದ ಮುಂಬೈ ತಂಡ ನಿಗದಿತ ಸಮಯದೊಳಗೆ 20 ಓವರ್​ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯದ ನಿಷೇಧ ಹೇರಲಾಗಿತ್ತು. ಇದು ಮುಂಬೈ ಆಡಿದ ಅಂತಿಮ ಲೀಗ್‌ ಪಂದ್ಯವಾಗಿತ್ತು. ಹೀಗಾಗಿ ಪಾಂಡ್ಯ ನಿಷೇಧದ ಶಿಕ್ಷೆ ಈ ಬಾರಿಯ ಐಪಿಎಲ್​​ನಲ್ಲಿ ಮುಂದುವರೆಯಲಿದೆ. ಅದರಂತೆ ಐಪಿಎಲ್ 2025 ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ ಮೊದಲ ಪಂದ್ಯವಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ Syed Modi badminton: ಸೈಯ್ಯದ್ ಮೋದಿ ಟೂರ್ನಿಯಿಂದ ಹಿಂದೆ ಸರಿದ ಸಾತ್ವಿಕ್‌-ಚಿರಾಗ್ ಜೋಡಿ

ಸ್ಲೋ ಓವರ್​ ರೇಟ್​ ನಿಯಮದ ಪ್ರಕಾರ ಮೊದಲ ತಪ್ಪಿಗೆ ನಾಯಕನನ್ನು ದೋಷಿಯನ್ನಾಗಿ ಮಾಡಲಾಗುತ್ತದೆ. ಮೊದಲ ಬಾರಿಯ ತಪ್ಪಿಗೆ 12 ಲಕ್ಷ ರೂ. ದಂಡ ಹಾಕಲಾಗುತ್ತದೆ. ಇದು ಪುನರಾವರ್ತನೆಯಾದಲ್ಲಿ 24 ಲಕ್ಷ ರೂ. ದಂಡ ನಿಗದಿ ಮಾಡಲಾಗಿದೆ. ಅಲ್ಲದೆ ತಂಡದ ಇತರೆ ಆಟಗಾರರು ಪಂದ್ಯದ ಶುಲ್ಕದ ಶೇ.25 ರಷ್ಟು ಮೊತ್ತವನ್ನು ದಂಡವಾಗಿ ನೀಡಬೇಕು. ಒಂದೊಮ್ಮೆ ಮೂರನೇ ಬಾರಿ ಮತ್ತೆ ಇದೇ ತಪ್ಪು ಮರುಕಳಿಸಿದರೆ ಆಗ ನಾಯಕ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಲಿದ್ದಾರೆ.

ಮುಂಬೈ ತಂಡ

ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮ, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್, ನಮನ್ ಧೀರ್, ರಾಬಿನ್ ಮಿಂಜ್, ಕರ್ಣ್ ಶರ್ಮಾ, ರಿಯಾನ್ ರಿಕೆಲ್ಟನ್, ದೀಪಕ್ ಚಾಹರ್, ಅಲ್ಲಾ ಗಜನ್ಫರ್, ವಿಲ್ ಜ್ಯಾಕ್ಸ್, ಅಶ್ವನಿ ಕುಮಾರ್, ಮಿಚೆಲ್ ಸ್ಯಾಂಟ್ನರ್, ರೀಸ್ ಟೋಪ್ಲಿ, ಕೃಷ್ಣನ್ ಶ್ರೀಜಿತ್, ರಾಜ್ ಅಂಗದ್ ಬಾವಾ, ಸತ್ಯನಾರಾಯಣ ರಾಜು, ಬೆವನ್ ಜೇಕಬ್ಸ್, ಅರ್ಜುನ್ ತೆಂಡೂಲ್ಕರ್, ಲಿಜಾದ್ ವಿಲಿಯಮ್ಸ್, ವಿಘ್ನೇಶ್ ಪುತ್ತೂರು.