Wednesday, 8th January 2025

Mohammed Shami: ʻಈ ವೇಗಿ ಆಡಿದ್ದರೆ ಭಾರತದ ಕಥೆ ಬೇರೆ ರೀತಿ ಇರುತ್ತಿತ್ತುʼ-ರವಿ ಶಾಸ್ತ್ರಿ!

He could have been the difference': Ravi Shastri and Ricky Ponting question Mohammed Shami's absence for BGT

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಗೆ ಹಿರಿಯ ವೇಗಿ ಮೊಹಮ್ಮದ್‌ ಶಮಿ (Mohammed Shami) ಅವರನ್ನು ಆಯ್ಕೆ ಮಾಡದ ಬಗ್ಗೆ ಮಾಜಿ ಕ್ರಿಕೆಟಿಗರಾದ ರವಿ ಶಾಸ್ತ್ರಿ ಹಾಗೂ ರಿಕಿ ಪಾಂಟಿಂಗ್‌ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಮೊಹಮ್ಮದ್‌ ಶಮಿ ಅವರು ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ಆಡಿದ್ದರೆ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಈ ಇಬ್ಬರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್‌ ಶಮಿ ಅನುಪಸ್ಥಿತಿಯಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯನ್ನು 1-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಆ ಮೂಲಕ ಕಾಂಗರೂ ನಾಡಿನಲ್ಲಿ ಹ್ಯಾಟ್ರಿಕ್‌ ಟೆಸ್ಟ್‌ ಸರಣಿ ಗೆಲುವಿನ ಅವಕಾಶವನ್ನು ಭಾರತ ತಂಡ ಕೈಚೆಲ್ಲಿಕೊಂಡಿತ್ತು. 2015ರ ಬಳಿಕ ಆಸ್ಟ್ರೇಲಿಯಾ ತಂಡ ಮೊದಲ ಬಾರಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಇದರ ಬೆನ್ನಲ್ಲೆ ಮೊಹಮ್ಮದ್‌ ಶಮಿ ಅವರ ಗಾಯದ ನಿರ್ವಹಣೆಯನ್ನು ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಮತ್ತು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ಪ್ರಶ್ನೆ ಮಾಡಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಗಾಯದ ಹೊರತಾಗಿಯೂ ಎರಡನೇ ಅವಧಿಯ ಪಂದ್ಯಗಳನ್ನು ಆಡಿದ್ದ ಮೊಹಮ್ಮದ್‌ ಶಮಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆಯುವ ಮೂಲಕ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ತದ ನಂತರ ಅವರು ಪಾದದ ಶಸ್ತ್ರ ಚಿಕಿತ್ಸೆಗೆ ಭಾಜನರಾಗಿದ್ದರು. ಆ ಬಳಿಕ ಬರೋಬ್ಬರಿ ಒಂದು ವರ್ಷ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿಸಿದ್ದರು. ಪಾದದ ಗಾಯದಿಂದ ಚೇತರಿಸಿಕೊಂಡ ಶಮಿ, ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20 ಮತ್ತು ವಿಜಯ್ ಹಝಾರೆ ಟ್ರೋಫಿ ಏಕದಿನ ಈ ಮೂರೂ ಟೂರ್ನಿಗಳಲಿ ಬಂಗಾಳ ತಂಡವನ್ನು ಪ್ರತಿನಿಧಿಸಿದ್ದರು.

ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವೈದ್ಯಕೀಯ ತಂಡವು ಮೊಣಕಾಲು ಊತದ ಕಾರಣವನ್ನು ನೀಡಿ ಆಸ್ಟ್ರೇಲಿಯಾ ಪ್ರವಾಸದಕೊನೆಯ ಎರಡು ಪಂದ್ಯಗಳ ಲಭ್ಯತೆಯನ್ನು ನಿರಾಕರಿಸಿತ್ತು. ಆದರೂ ರವಿ ಶಾಸ್ತ್ರಿ ಮತ್ತು ರಿಕಿ ಪಾಂಟಿಂಗ್‌ ಹಿರಿಯ ವೇಗಿಯನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಉಳಿಸಿಕೊಳ್ಳಬಹುದಿತ್ತು ಎಂದಿದ್ದಾರೆ.

ಮೊಹಮ್ಮದ್‌ ಶಮಿ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?

“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕೊನೆಗೆ ಮೊಹಮ್ಮದ್ ಶಮಿಗೆ ಏನಾಯಿತು ಎಂದು ಮಾಧ್ಯಮಗಳಲ್ಲಿ ನಡೆಯುತ್ತಿರುವುದನ್ನು ನೋಡಿ ನನಗೆ ತುಂಬಾ ಅಚ್ಚರಿಯಾಯಿತು. ಅವರು ಎನ್‌ಸಿಎ (ಇಂಡಿಯನ್ ಕ್ರಿಕೆಟ್ ಅಕಾಡೆಮಿ) ನಲ್ಲಿ ಎಷ್ಟು ದಿನ ಇದ್ದಾರೋ ಗೊತ್ತಿಲ್ಲ. ಅವರ ಪರಿಸ್ಥಿತಿಯ ಬಗ್ಗೆ ಸರಿಯಾದ ಸಂವಹನ ನಡೆಸಬಹುದಿತ್ತು. ನಾನು ಆ ಸ್ಥಳದಲ್ಲಿದಿದ್ದರೆ, ಅವನನ್ನು ಆಸ್ಟ್ರೇಲಿಯಾಕ್ಕೆ ಕರೆ ತರುತ್ತಿದ್ದೆ ಹಾಗೂ ಅವರಿಗೆ ಅತ್ಯುತ್ತಮ ಫಿಸಿಯೊಗಳನ್ನು ನೀಡುತ್ತಿದ್ದೆ. ಆ ಮೂಲಕ ಟೆಸ್ಟ್‌ ಬಳಿಕ ಅವರ ಆಡುವಿಕೆಯ ಬಗ್ಗೆ ಖಚಿತಪಡಿಸಿಕೊಳ್ಳುತ್ತಿದ್ದೆ,” ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

ರವಿ ಶಾಸ್ತ್ರಿ ಹೇಳಿಕೆಯನ್ನು ಬೆಂಬಲಿಸಿದ ಪಾಂಟಿಂಗ್‌

ಆಸ್ಟ್ರೇಲಿಯದ ವಿಶ್ವಕಪ್ ವಿಜೇತ ತಂಡದ ನಾಯಕ ರಿಕಿ ಪಾಂಟಿಂಗ್ ಕೂಡ ರವಿ ಶಾಸ್ತ್ರಿ ಅವರ ಹೇಳಿಕೆಗೆ ಬೆಂಬಲಿಸಿದ್ದಾರೆ. “ಸರಣಿಯ ಮಧ್ಯದಲ್ಲಿ ಅವರನ್ನು (ಶಮಿ) ಏಕೆ ತಂಡಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ನಾನು ನಿಜವಾಗಿಯೂ ಅಚ್ಚರಿಯಾಗಿತ್ತು. ಅವರು ಕಡಿಮೆ ಓವರ್ ಬೌಲ್ ಮಾಡಿದರೂ ಬದಲಾವಣೆ ಮಾಡಬಹುದಿತ್ತು. ನೀವು ಆರಂಭದಲ್ಲಿ ಸರಣಿಯ ಫಲಿತಾಂಶ ಏನೆಂದು ಕೇಳಿದಾಗ, ನಾನು ಆಸ್ಟ್ರೇಲಿಯಾ ತಂಡ 3-1 ಅಂತರದಲ್ಲಿ ಟೆಸ್ಟ್‌ ಸರಣಿ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದೆ. ಶಮಿ ಇಲ್ಲದ ಕಾರಣ ಆಸ್ಟ್ರೇಲಿಯಾ ಗೆಲ್ಲುತ್ತೆ ಎಂದಿದ್ದೆ. ಶಮಿ, ಬುಮ್ರಾ ಮತ್ತು ಸಿರಾಜ್ ಅವರ ಆರಂಭಿಕ ತಂಡದಲ್ಲಿದ್ದರೆ, ಫಲಿತಾಂಶವು ವಿಭಿನ್ನವಾಗಿರುತ್ತಿತ್ತು,” ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Shubman Gill: ʻಶುಭಮನ್‌ ಗಿಲ್‌ಗೆ ಏಕೆ ಇಷ್ಟೊಂದು ಅವಕಾಶ?-ಬಿಸಿಸಿಐಗೆ ಕೆ ಶ್ರೀಕಾಂತ್‌ ಪ್ರಶ್ನೆ!

Leave a Reply

Your email address will not be published. Required fields are marked *