Sunday, 15th December 2024

Highest Taxpayers: ಕೊಹ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಭಾರತದ ಕ್ರೀಡಾಪಟು

Highest Taxpayers

ನವದೆಹಲಿ: ಕಳೆದ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ(Highest Taxpayers) ಪಾವತಿ ಮಾಡುವ ಟಾಪ್‌ 10 ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಗೊಂಡಿದೆ. ಬಾಲಿವುಡ್‌ ನಟ ಶಾರುಕ್‌ ಖಾನ್‌ ಅಗ್ರಸ್ಥಾನ ಪಡೆದರೆ, ಕ್ರೀಡಾವಲಯದಲ್ಲಿ ವಿರಾಟ್‌ ಕೊಹ್ಲಿ(Virat Kohli) ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ 5ನೇ ಸ್ಥಾನಿಯಾಗಿದ್ದಾರೆ.

ಟೀಮ್‌ ಇಂಡಿಯಾ ಆಟಗಾರ ವಿರಾಟ್‌ ಕೊಹ್ಲಿಕ್ರಿಕೆಟ್ ಹೊರತಾಗಿಯೂ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಹಲವು ಬ್ರ್ಯಾಂಡ್‌ಗಳ ಜಾಹೀರಾತುಗಳಿಂದ ಕೋಟಿ ಕೋಟಿ ಗಳಿಸುತ್ತಾರೆ. ಜತೆಗೆ ವಿವಿಧ ಕಂಪೆನಿಗಳ ಶೇರ್‌ ಹೋಲ್ಡರ್‌ ಕೂಡ ಆಗಿದ್ದಾರೆ. ಅವರ ಒಟ್ಟು ಆಸ್ತಿ 1050 ಕೋಟಿ ರೂ. ಫಾರ್ಚೂನ್ ಇಂಡಿಯಾ ವರದಿ ಪ್ರಕಾರ, ಕೊಹ್ಲಿ ಈ ಬಾರಿ ಬರೋಬ್ಬರಿ 66 ಕೋಟಿ ತೆರಿಗೆ ಪಾವತಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ತೆರಿಗೆ ಪಾವತಿಸುವ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ದ್ವಿತೀಯ ಸ್ಥಾನಿಯಾಗಿ ಮಾಜಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ(MS Dhoni) ಕಾಣಿಸಿಕೊಂಡಿದ್ದಾರೆ. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಕೆಲವು ವರ್ಷಗಳಾಗಿದ್ದರೂ ಕೂಡ ಅವರ ಕ್ರೇಜ್‌ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಕೂಡ ಅವರು ಹಲವು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಐಪಿಎಲ್‌ನಿಂದಲೂ ಅವರಿಗೆ ಆದಾಯ ಬರುತ್ತಿದೆ. ಧೋನಿ ಈ ವರ್ಷ ಒಟ್ಟು 38 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ.

ಇದನ್ನೂ ಓದಿ GOAT Movie: ದಳಪತಿ ವಿಜಯ್‌ ತಮಿಳು ಸಿನಿಮಾ ಟಿಕೆಟ್‌ಗೆ ಚೆನ್ನೈಯಲ್ಲಿ 60 ರೂ., ಬೆಂಗಳೂರಲ್ಲಿ 1000 ರೂ!

ಸಚಿನ್‌ ತೆಂಡೂಲ್ಕರ್‌ ಅವರು 28 ಕೋಟಿ ತೆರಿಗೆ ಪಾವತಿಸಿದ್ದಾರೆ ಎನ್ನಲಾಗಿದೆ. ಉಳಿದಂತೆ ಸೌರವ್ ಗಂಗೂಲಿ 23 ಕೋಟಿ, ಹಾರ್ದಿಕ್‌ ಪಾಂಡ್ಯ 13 ಕೋಟಿ, ರಿಷಭ್‌ ಪಂತ್‌ 10 ಕೋಟಿ ತೆರಿಗೆ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಭಾರತ ತಂಡದ ನಾಯಕ ರೋಹಿತ್‌ ಶರ್ಮ, ಕೆ.ಎಲ್‌ ರಾಹುಲ್‌, ಜಸ್‌ಪ್ರೀತ್‌ ಬುಮ್ರಾ ಮತ್ತು ರವೀಂದ್ರ ಜಡೇಜಾ ಎಷ್ಟು ತೆರಿಗೆ ಪಾವತಿಸುತ್ತಾರೆ ಎಂದು ತಿಳಿದುಬಂದಿಲ್ಲ. ಪಟ್ಟಿಯಲ್ಲಿ ಅವರ ಹೆಸರು ಕೂಡ ಕಂಡುಬಂದಿಲ್ಲ.

ಅತಿ ಹೆಚ್ಚು ತೆರಿಗೆ ಪಾವತಿಸಿದ ಆಟಗಾರರು

ವಿರಾಟ್‌ ಕೊಹ್ಲಿ-66 ಕೋಟಿ

ಮಹೇಂದ್ರ ಸಿಂಗ್‌ ಧೋನಿ-38 ಕೋಟಿ

ಸಚಿನ್‌ ತೆಂಡೂಲ್ಕರ್‌- 28 ಕೋಟಿ

ಸೌರವ್‌ ಗಂಗೂಲಿ-23 ಕೋಟಿ

ಹಾರ್ದಿಕ್‌ ಪಾಂಡ್ಯ-13 ಕೋಟಿ

ರಿಷಭ್‌ ಪಂತ್‌-10 ಕೋಟಿ

ಶಾರುಕ್‌ ಖಾನ್‌ ಬರೋಬ್ಬರಿ 92 ಕೋಟಿ ತೆರಿಗೆ ಪಾವತಿ ಮಾಡುವ ಮೂಲಕ ಮೊದಲನೇ ಸ್ಥಾನದಲ್ಲಿದ್ದಾರೆ. ತಮಿಳು ನಟ ವಿಜಯ್‌ 80 ಕೋಟಿ ತೆರಿಗೆ ಪಾವತಿಸಿ ಎರಡನೇ ಸ್ಥಾನದಲ್ಲಿದ್ದರೆ, ಬಾಲಿವುಡ್ ನಟ ಸಲ್ಮಾನ್‌ ಖಾನ್‌ 75 ಕೋಟಿ ಆದಾಯ ತೆರಿಗೆ ಪಾವತಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.