ನವದೆಹಲಿ: ಬಾಂಗ್ಲಾದೇಶ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ (Tamim Iqbal Retirement) ಅವರು ಎರಡನೇ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎರಡನೇ ಬಾರಿ ವಿದಾಯ ಹೇಳಿದ್ದಾರೆ. ಇದಕ್ಕೂ ಮುನ್ನ 2023ರ ಜುಲೈನಲ್ಲಿ ಭಾವನಾತ್ಮಕ ಸುದ್ದಿಗೋಷ್ಠಿಯಲ್ಲಿ ಮೊದಲ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೂ ತದನಂತರ ಅವರು ನಿವೃತ್ತಿಯಿಂದ ಹೊರ ಬಂದಿದ್ದರು.
2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ತಮೀಮ್ ಇಕ್ಬಾಲ್ ಅವರು ಇಲ್ಲಿಯವರೆಗೂ ಬಾಂಗ್ಲಾದೇಶ ಪರ 70 ಟೆಸ್ಟ್ ಪಂದ್ಯಗಳು, 243 ಒಡಿಐ ಪಂದ್ಯಗಳು ಹಾಗೂ 78 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. 2023ರಲ್ಲಿ ತಮೀಮ್ ಇಕ್ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ವೇಳೆ ಬಾಂಗ್ಲಾದೇಶ ಪ್ರಧಾನ ಮಂತ್ರಿ ಶೇಖ್ ಹಸೀನಾ ಮನವೋಲಿಸಿದ್ದರು.
ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನಿಮಿತ್ತ ಬಾಂಗ್ಲಾದೇಶ ತಂಡಕ್ಕೆ ಮರಳಬೇಕೆಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಆಯ್ಕೆದಾರ ಗಝಿ ಅಶ್ರಫ್ ಅವರು ತಮೀಮ್ ಇಕ್ಬಾಲ್ ಅವರನ್ನು ಮನವೋಲಿಸಿದ್ದರು. ಅಲ್ಲದೆ ನಾಯಕ ನಜ್ಮುಲ್ ಹುಸೇನ್ ಶಾಂಟೊ ಕೂಡ ತಮೀಮ್ ಇಕ್ಬಾಲ್ ಬಳಿ ಮಾತನಾಡಿದ್ದರು. ಆದರೆ, ಎಡಗೈ ಬ್ಯಾಟ್ಸ್‌ಮನ್ ವಿದಾಯ ಹೇಳಿದ್ದಾರೆ.
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ತಮೀಮ್ ಇಕ್ಬಾಲ್, “ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೀರ್ಘಾವಧಿ ದೂರ ಉಳಿದಿದ್ದೇನೆ. ಈ ಅಂತರ ಹಾಗೆ ಮುಂದುವರಿಯಲಿದೆ. ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಅಧ್ಯಾಯ ಮುಕ್ತಾಯವಾಗಿದೆ. ಈ ನಿರ್ಧಾರದ ಬಗ್ಗೆ ನಾನು ದೀರ್ಘಾವಧಿಯಿಂದ ಯೋಚಿಸುತ್ತಿದ್ದೇನೆ. ಮುಂದೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬರುತ್ತಿದೆ ಹಾಗೂ ಪ್ರತಿಯೊಬ್ಬರ ಗಮನವನ್ನು ಸೆಳೆಯಲು ನನಗೆ ಇಷ್ಟವಿಲ್ಲ, ಇದು ತಂಡದ ಗಮನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಹಿಂದೆ ಕೂಡ ಇದು ಆಗಬಾರದಿತ್ತೆಂದು ನಾನು ಭಾವಿಸಿದ್ದೆ,” ಎಂದು ಹೇಳಿದ್ದಾರೆ.
“ರಾಷ್ಟ್ರೀಯ ತಂಡಕ್ಕೆ ನಾಯಕ ನಜ್ಮುಲ್ ಹುಸೇನ್ ಶಾಂಟೊ ಅವರು ಪ್ರಾಮಾಣಿಕವಾಗಿ ನನ್ನ ಬಳಿ ಕೇಳಿಕೊಂಡಿದ್ದರು. ಈ ಬಗ್ಗೆ ಆಯ್ಕೆ ಸಮಿತಿಯ ಬಳಿಯೂ ಚರ್ಚೆ ನಡೆಸಿದ್ದೇನೆ. ಈಗಲೂ ನನ್ನನ್ನು ತಂಡಕ್ಕೆ ಪರಿಗಣಿಸಲು ಆಸಕ್ತಿ ಹೊಂದಿರುವುದಕ್ಕೆ ನಾನು ಹರ್ಷಭರಿತನಾಗಿದ್ದೇನೆ. ಆದರೆ, ನಾನು ನನ್ನ ಹೃದಯದ ಮಾತನ್ನು ಕೇಳುತ್ತಿದ್ದೇನೆ,” ಎಂದು ತಮೀಮ್ ಇಕ್ಬಾಲ್ ಬರೆದುಕೊಂಡಿದ್ದಾರೆ.
ಕೇಂದ್ರ ಗುತ್ತಿಗೆಯಿಂದ ನನ್ನನ್ನು ಕೈ ಬಿಡಲಾಗಿತ್ತು
“ಬಿಸಿಬಿ ಗುತ್ತಿಗೆಯಿಂದ ನನ್ನನ್ನು ಸಾಕಷ್ಟು ದಿನಗಳ ಹಿಂದೆ ತೆಗೆಯಲಾಗಿತ್ತು ಏಕೆಂದರೆ, ನನಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಇಷ್ಟವಿರಲಿಲ್ಲ. ನಾನು ಅಸಮಾಧಾನದೊಂದಿಗೆ ರಾಷ್ಟ್ರೀಯ ತಂಡದಿಂದ ಹಿಂದೆ ಸರಿದಿದ್ದೇನೆಂದು ಹಲವರು ಹೇಳಿದ್ದರು. ಆದರೆ, ಕೇಂದ್ರ ಗುತ್ತಿಗೆ ಇಲ್ಲದ ಆಟಗಾರನ ಬಳಿಕ ಆಯ್ಕೆದಾರರು ಏಕೆ ಮಾತನಾಡುತ್ತಾರೆ? ಒಂದು ವರ್ಷದ ಹಿಂದೆ ನಾನು ಸ್ವಯಃ ಪ್ರೆರಣೆಯಿಂದ ನಿವೃತ್ತಿ ಪಡೆದಿದ್ದೇನೆ,” ಎಂದು ತಮೀಮ್ ಇಕ್ಬಾಲ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಒಮ್ಮೆ ಓದಿ: Varun Aaaron Retirement: ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವರುಣ್ ಆರೋನ್ ವಿದಾಯ!