Thursday, 19th December 2024

IPL 2025: ‘ನನಗೆ ಯಾವುದೇ ವಿಷಾದವಿಲ್ಲ’:-ಸಿಎಸ್‌ಕೆ ಪರ ಆಡಲು ಎದುರು ನೋಡುತ್ತಿದ್ದೇನೆಂದ ಆರ್‌ ಅಶ್ವಿನ್‌!

'I have zero regrets, want to play for chennai Super Kings as long as possible',says R Ashwin

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳಿದ ಬಳಿಕ ಚೆನ್ನೈಗೆ ಬಂದ ಆರ್‌ ಅಶ್ವಿನ್‌ಗೆ ಅದ್ದೂರಿ ಸ್ವಾಗತ ಸಿಕ್ಕಿತು. ಈ ವೇಳೆ ಆರ್‌ ಅಶ್ವಿನ್‌ಗೆ ಸುದ್ದಿಗಾರರು ಹಲವು ಪ್ರಶ್ನೆಗಳನ್ನು ಕೇಳಲಾಯಿತು. ರಾಷ್ಟ್ರೀಯ ತಂಡವನ್ನು ಮುನ್ನಡೆಸಲು ಅವಕಾಶ ಸಿಗದ ಬಗ್ಗೆ ಯಾವುದೇ ವಿಷಾದವಿಲ್ಲ. ನಾನು ಯಾವಾಗಲೂ ಸಂತೋಷವಾಗಿರಲು ಪ್ರಯತ್ನಿಸುತ್ತೇನೆ. ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಆಡಲು ಎದುರು ನೋಡುತ್ತಿದ್ದೇನೆ ಎಂದು ಆರ್‌ ಅಶ್ವಿನ್‌ ನಗುನಗುತ್ತಾ ಉತ್ತರ ನೀಡಿದ್ದಾರೆ.

ಬುಧವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಡ್ರಾ ಆದ ಬಳಿಕ ರವಿ ಚಂದ್ರನ್‌ ಅಶ್ವಿನ್‌ ಅವರು ಸುದ್ದಿಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಮೂಲಕ ತಮ್ಮ ಸಹ ಆಟಗಾರರು ಹಾಗೂ ಕ್ರಿಕೆಟ್‌ ಅಭಿಮಾನಿಗಳಿಗೆ ಆರ್‌ ಅಶ್ವಿನ್‌ ಶಾಕ್‌ ನೀಡಿದ್ದರು. ನಿವೃತ್ತಿ ಪಡೆದ ಒಂದು ದಿನದ ಬಳಿಕ ಹಿರಿಯ ಆಫ್‌ ಸ್ಪಿನ್ನರ್‌ ಚೆನ್ನೈಗೆ ಬಂದಿಳಿದಿದ್ದಾರೆ.

ಚೆನ್ನೈನ ತಮ್ಮ ನಿವಾಸಕ್ಕೆ ಬಂದಿಳಿಯುತ್ತಿದ್ದಂತೆ ಆರ್‌ ಅಶ್ವಿನ್‌ ಅವರನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಗಿತ್ತು. ಅಶ್ವಿನ್‌ ಅವರ ತಂದೆ ಸೇರಿದಂತೆ ಕುಟುಂಬದ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಸ್ಥಳೀಯರು ಈ ಸಮಯದಲ್ಲಿ ಉಪಸ್ಥಿತರಿದ್ದರು. ಅಂದ ಹಾಗೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅಶ್ವಿನ್‌ಗೆ ಸುದ್ದಿಗಾರರು ಎದುರಾಗಿದ್ದರು ಹಾಗೂ ಇಲ್ಲಿ ಅವರು ತುಟಿಯನ್ನು ಬಿಚ್ಚಿರಲಿಲ್ಲ. ಆದರೆ, ತಮ್ಮ ನಿವಾಸದ ಬಳಿ ಆಯ್ದ ಸುದ್ದಿಗಾರರ ಬಳಿ ಆರ್‌ ಅಶ್ವಿನ್‌ ಮಾತನಾಡಿದರು.‌

ತಮ್ಮ ವೃತ್ತಿ ಜೀವನದಲ್ಲಿ ಭಾರತ ತಂಡವನ್ನು ಮುನ್ನಡೆಸಲು ನಿಮಗೆ ಅವಕಾಶ ಸಿಗಲಿಲ್ಲ. ಈ ಬಗ್ಗೆ ನಿಮಗೆ ಬೇಸರವಿದೆಯಾ? ಎಂದು ಸುದ್ದಿಗಾರರು ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನ್‌, “ನಾನು ಎಂದಿಗೂ ಆಗಲಿಲ್ಲ. ಇದು ಮುಗಿದ ಅಧ್ಯಾಯ. ಇದರ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ನಾಯಕತ್ವ ಸಿಗಲಿಲ್ಲವೆಂದು ವಿಷಾದ ಪಟ್ಟಿರುವ ಅನೇಕ ಆಟಗಾರರನ್ನು ನಾನು ನೋಡಿದ್ದೇನೆ. ಆದರೆ, ನನ್ನ ಜೀವನ ಈ ರೀತಿ ಇರಲು ನಾನು ಬಯಸುವುದಿಲ್ಲ,” ಎಂದು ಹೇಳಿದ್ದಾರೆ.

ಸಾಧ್ಯವಾದಷ್ಟು ದೀರ್ಘಾವಧಿ ಸಿಎಸ್‌ಕೆ ಪರ ಆಡುತ್ತೇನೆ: ಅಶ್ವಿನ್‌

“ನಾನು ನಿಷ್ಕ್ರಿಯವಾಗಿರಲು ಬಯಸುತ್ತೇನೆ – ತಕ್ಷಣದ ಯೋಜನೆಗಳಿಲ್ಲ. ಸದ್ಯ ನಾನು ನಿಷ್ಕ್ರಿಯವಾಗಿರುವುದು ನನ್ನ ಪಾಲಿಗೆ ಅತ್ಯಂತ ಕಠಿಣವಾಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡುತ್ತೇನೆ. ಸಾಧ್ಯವಾದಷ್ಟು ದೀರ್ಘಾವಧಿ ಸಿಎಸ್‌ಕೆ ಪರ ಆಡಲು ಬಯಸುತ್ತಿದ್ದೇನೆ. ಅಶ್ವಿನ್‌ ಪಾಲಿಗೆ ಕ್ರಿಕೆಟ್‌ ಮುಗಿದಿದೆ ಎಂದು ನಾನು ಚಿಂತಿಸುವುದಿಲ್ಲ. ಭಾರತೀಯ ಕ್ರಿಕೆಟ್‌ನಲ್ಲಿ ಆರ್‌ ಅಶ್ವಿನ್‌ ಸಮಯ ಮುಗಿದಿದೆ,” ಎಂದು ಆರ್‌ ಅಶ್ವಿನ್‌ ತಿಳಿಸಿದ್ದಾರೆ.

ತಮ್ಮ ನಿವಾಸದ ಮುಂದೆ ಭಾವುಕರಾದ ಆರ್‌ ಅಶ್ವಿನ್‌

“ಎಲ್ಲರಿಯೂ ಧನ್ಯವಾದಗಳು. ಇಷ್ಟೊಂದು ಮಂದಿ ಇಲ್ಲಿಗೆ ಬರುತ್ತಾರೆಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಸುಮ್ಮನೆ ಮನೆಗೆ ಹೋಗೋಣ ಎಂದು ಅಂದುಕೊಂಡಿದ್ದೆ ಆದರೆ, ನೀವೆಲ್ಲರೂ ನನ್ನ ದಿನವನ್ನು ಉತ್ತಮವನ್ನಾಗಿಸಿದ್ದೀರಿ. 2011ರ ಏಕದಿನ ವಿಶ್ವಕಪ್‌ ಗೆದ್ದು ಮನೆಗೆ ಬಂದಾಗಲೂ ಇದೇ ರೀತಿ ನೀವು ನನ್ನನ್ನು ಬರ ಮಾಡಿಕೊಂಡಿದ್ದೀರಿ. ಇದಿಗ ಆ ನೆನಪುಗಳು ಕಣ್ಣು ಮುಂದೆ ಬಂದಿವೆ,” ಎಂದು ಆರ್‌ ಅಶ್ವಿನ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: R Ashwin Retires: ಆರ್‌.ಅಶ್ವಿನ್‌ ಕ್ರಿಕೆಟ್‌ ಸಾಧನೆಯ ಇಣುಕು ನೋಟ