Sunday, 5th January 2025

ICC Awards 2024: ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ

ದುಬೈ: ಟೀಮ್‌ ಇಂಡಿಯಾದ ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಹೆಸರನ್ನು ಪ್ರತಿಷ್ಠಿತ ಐಸಿಸಿ(ICC Awards 2024) ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಬುಮ್ರಾ ಜತೆಗೆ ಇಂಗ್ಲೆಂಡ್‌ನ ಅನುಭವಿ ಬ್ಯಾಟರ್‌ ಜೋ ರೂಟ್‌, ಹ್ಯಾರಿ ಬ್ರೂಕ್‌ ಮತ್ತು ಶ್ರೀಲಂಕಾದ ಕಮಿಂಡು ಮೆಂಡಿಸ್‌ ಕೂಡ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ 2024ರಲ್ಲಿ ಇದುವರೆಗೆ 13 ಟೆಸ್ಟ್‌ಗಳಲ್ಲಿ 14.92ರ ಸರಾಸರಿಯೊಂದಿಗೆ 71 ವಿಕೆಟ್‌ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಪ್ರಸಕ್ತ ಸಾಗುತ್ತಿರುವ ಬಾರ್ಡರ್‌-ಗಾವಸ್ಕರ್‌ ಟ್ರೋಫಿ ಸರಣಿಯಲ್ಲಿ ಆಡಿದ 4 ಟೆಸ್ಟ್‌ಗಳಲ್ಲಿ ಬುಮ್ರಾ ಅಮೋಘ ಬೌಲಿಂಗ್‌ ಮೂಲಕ ಸರ್ವಾಧಿಕ 30 ವಿಕೆಟ್‌ ಉರುಳಿಸಿದ್ದಾರೆ. ಐಸಿಸಿಯ ವಿವಿಧ ವಾರ್ಷಿಕ ಪ್ರಶಸ್ತಿಗಳಿಗೆ ಸೂಚಿಸಲಾದ ಪಟ್ಟಿಯಲ್ಲಿ ಒಟ್ಟು ನಾಲ್ವರು ಭಾರತೀಯ ಕ್ರಿಕೆಟಿಗರು ಕಾಣಿಸಿಕೊಂಡಿದ್ದಾರೆ. ಇವರೆಂದರೆ ಶ್ರೇಯಾಂಕಾ ಪಾಟೀಲ್‌, ಸ್ಮೃತಿ ಮಂಧನಾ, ಅರ್ಷದೀಪ್‌ ಸಿಂಗ್‌ ಮತ್ತು ಜಸ್‌ಪ್ರೀತ್‌ ಬುಮ್ರಾ.

ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌(Arshdeep Singh) ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ(ICC T20I Cricketer of the Year) ನಾಮನಿರ್ದೇಶನಗೊಂಡಿದ್ದಾರೆ.  ಈ ವರ್ಷ ನಡೆದಿದ್ದ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಜಂಟಿ ಆತಿಥ್ಯದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅರ್ಶ್‌ದೀಪ್ ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಕಳೆದ ಕೆಲ ವರ್ಷಗಳಿಂದ ಭಾರತ ಟಿ20 ತಂಡದ ಅವಿಭಾಜ್ಯ ಅಂಗವಾಗಿರುವ ಅವರು 2024ರಲ್ಲಿ ಭಾರತ ಪರ 18 ಟಿ20 ಪಂದ್ಯಗಳನ್ನಾಡಿ 36 ವಿಕೆಟ್ ಕಬಳಿಸಿದ್ದಾರೆ.

ವರ್ಷದ ಏಕದಿನ ಆಟಗಾರ್ತಿ‌ ಪ್ರಶಸ್ತಿಗೆ ಮಂಧಾನ ಅವರನ್ನು ನಾಮ ನಿರ್ದೇಶ ಮಾಡಲಾಗಿದೆ. ಇವರ ಜತೆ ಪ್ರಶಸ್ತಿಗಾಗಿ ಲಾರಾ ವೋಲ್ವಾರ್ಟ್‌, ಚಾಮರಿ ಅತಪಟ್ಟು ಮತ್ತು ಅನ್ನಾಬೆಲ್‌ ಸದರ್‌ಲ್ಯಾಂಡ್‌ ಪೈಪೋಟಿಯಲ್ಲಿದ್ದಾರೆ. ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕನ್ನಡತಿ ಶ್ರೇಯಾಂಕಾ ನಾಮನಿರ್ದೇಶನಗೊಂಡಿದ್ದಾರೆ.

ಇದನ್ನೂ ಓದಿ IND vs AUS: ʻಕಿಂಗ್‌ ಕೊಹ್ಲಿ ಡೆಡ್‌, ಇನ್ಮುಂದೆ ಕಿಂಗ್‌ ಬುಮ್ರಾʼ-ವಿರಾಟ್‌ ವಿರುದ್ಧ ಸೈಮನ್‌ ಕ್ಯಾಟಿಚ್‌ ಕಿಡಿ!

2023ರಲ್ಲಿ ನಡೆದ ಮಹಿಳಾ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಎಂಬ ಶ್ರೇಯದೊಂದಿಗೆ ಶ್ರೇಯಾಂಕಾ ಅವರು ಇತಿಹಾಸ ಬರೆದಿದ್ದರು. ಎಲ್ಲಾ ಬಗೆಯ ಕ್ರಿಕೆಟ್‌ ಮಾದರಿಗಳಲ್ಲೂ ಶ್ರೇಯಾಂಕಾ ಅವರ ಅದ್ಭುತ ಪ್ರದರ್ಶನವನ್ನು ಪರಿಗಣಿಸಿ ಐಸಿಸಿ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.

ಇದುವರೆಗೆ ಭಾರತ ಪರ 3 ಏಕದಿನ, 16 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 5, ಟಿ20 ಯಲ್ಲಿ 20 ವಿಕೇಟ್‌ ಕೆಡವಿದ್ದಾರೆ. ಈ ವರ್ಷದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶ್ರೇಯಾಂಕಾ ಅವರು, ಆಸ್ಟ್ರೇಲಿಯಾ, ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ಸರಣಿ, ಮಹಿಳಾ ಟಿ20 ಏಷ್ಯಾ ಕಪ್‌ ಹಾಗೂ ಟಿ20 ವಿಶ್ವಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು.