Saturday, 14th December 2024

ICC: ಲಂಕಾ ಸ್ಪಿನ್ನರ್‌ಗೆ ಒಂದು ವರ್ಷ ನಿಷೇಧ ಹೇರಿದ ಐಸಿಸಿ

ದುಬೈ: ಶ್ರೀಲಂಕಾ ತಂಡದ ಯುವ ಆಟಗಾರ ಪ್ರವೀಣ್ ಜಯವಿಕ್ರಮ(Praveen Jayawickrama) ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ICC) ಒಂದು ವರ್ಷ ನಿಷೇಧ ಹೇರಿದೆ. ಐಸಿಸಿಯ ಭ್ರಷ್ಟಾಚಾರ ನಿಗ್ರಹ ಸಂಹಿತೆಯ ಉಲ್ಲಂಘನೆಗಾಗಿ ಅವರು ಈ ಶಿಕ್ಷೆಗೆ ಗುರಿಯಾಗಿದ್ದಾರೆ.

26 ವರ್ಷದ ಎಡಗೈ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡ ಒಪ್ಪಿಕೊಂಡಿದ್ದು ಅವರಿಗೆ ಆರು ತಿಂಗಳ ಅಮಾನತು ಸೇರಿದಂತೆ ಒಂದು ವರ್ಷ ನಿಷೇಧ ಹೇರಲಾಗಿದೆ. ಆದರೆ, ನಿಷೇಧಿಸುವ ನಿರ್ದಿಷ್ಟ ಘಟನೆಯನ್ನು ಐಸಿಸಿ ಬಹಿರಂಗಪಡಿಸಲಿಲ್ಲ. ಅವರ ವಿರುದ್ಧದ ಆರೋಪಗಳು ಐಸಿಸಿ ಮತ್ತು ಲಂಕಾ ಪ್ರೀಮಿಯರ್ ಲೀಗ್‌ಗೆ ಸಂಬಂಧಿಸಿವೆ ಎಂದು ದೃಢಪಡಿಸಿದೆ. 27 ವರ್ಷಗಳ ಬಳಿಕ ಲಂಕಾ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದ ಸಾಧನೆ ಮಾಡುವಲ್ಲಿಯೂ ಪ್ರವೀಣ್ ಜಯವಿಕ್ರಮ ಪ್ರಮುಖ ಪಾತ್ರ ವಹಿಸಿದ್ದರು.

ಭ್ರಷ್ಟಾಚಾರ ನಿಗ್ರಹ ಸಂಹಿತೆಯ ಅಡಿಯಲ್ಲಿ ಯಾವುದೇ ತನಿಖೆಯನ್ನು ತಡೆಯುವುದು ಅಥವಾ ವಿಳಂಬಗೊಳಿಸುವುದು, ಮರೆಮಾಚುವುದು, ಯಾವುದೇ ದಾಖಲಾತಿ ಅಥವಾ ಇತರ ಮಾಹಿತಿಯನ್ನು ನಾಶಪಡಿಸುವುದು ಸೇರಿದಂತೆ ಭ್ರಷ್ಟ ನಡವಳಿಕೆಯ ಪುರಾವೆಗಳ ಆವಿಷ್ಕಾರಕ್ಕೆ ಕಾರಣವಾಗಬಹುದಾದ ಆರ್ಟಿಕಲ್ 2.4.7 ಅಡಿಯಲ್ಲಿ ನಿಬಂಧನೆಯನ್ನು ಉಲ್ಲಂಘಿಸಿರುವುದನ್ನು ಜಯವಿಕ್ರಮ ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಶ್ರೀಲಂಕಾ ಸ್ಪಿನ್ನರ್ ವಿರುದ್ಧದ ಆರೋಪಗಳು

ಐಸಿಸಿಯ ಪ್ಯಾರಾಗ್ರಾಫ್ 2.4.4 – ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ತಮ್ಮನ್ನು ಸಂಪರ್ಕಿಸಿದ ಮಾಹಿತಿಯನ್ನು ಭ್ರಷ್ಟಾಚಾರ-ವಿರೋಧಿ ಘಟಕಕ್ಕೆ ವರದಿ ಮಾಡಲು ವಿಫಲವಾಗಿದ್ದರು. ಜತೆಗೆ ಮ್ಯಾಚ್ ಫಿಕ್ಸಿಂಗ್ ಗಾಗಿ ಸಂಪರ್ಕಿಸಿದ ಮೆಸೇಜ್ ಗಳನ್ನು ಅಳಿಸಿದ್ದರು.

ಇದನ್ನೂ ಓದಿ Vinesh Phogat : ಒಲಿಂಪಿಕ್ಸ್‌ ಹಿನ್ನಡೆ ಬಳಿಕ ಮೋದಿ ಕರೆಯನ್ನೇ ತಿರಸ್ಕರಿಸಿದ್ದ ವಿನೇಶ್‌ ಫೋಗಟ್‌

ಜಯವಿಕ್ರಮ ಅವರು 2021 ರಲ್ಲಿ ಪಲ್ಲೆಕೆಲೆಯಲ್ಲಿ ಬಾಂಗ್ಲಾದೇಶದ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 11 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಉದಯೋನ್ಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಅವರು ಶ್ರೀಲಂಕಾ ಪರ 5 ಟೆಸ್ಟ್‌ ಗಳು, 5 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಿದ್ದಾರೆ. ಪ್ರವೀಣ್ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ 2021 ಮತ್ತು 2022 ರಲ್ಲಿ ಜಾಫ್ನಾ ಕಿಂಗ್ಸ್‌ ಮತ್ತು ಇತ್ತೀಚೆಗೆ 2023 ರಲ್ಲಿ ದಂಬುಲ್ಲಾ ಸಿಕ್ಸರ್‌ ಪರ ಆಡಿದ್ದಾರೆ.