ದುಬೈ: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ (ICC Champions Trophy 2025) ಮತ್ತು ಐಸಿಸಿ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಗಳ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ದೊಡ್ಡ ಘೋಷಣೆ ಮಾಡಿದೆ. 2024-27ರ ಋತುವಿನಲ್ಲಿ ಐಸಿಸಿ ಟೂರ್ನಿಗಳಲ್ಲಿ ಭಾರತ ಅಥವಾ ಪಾಕಿಸ್ತಾನ ಆಯೋಜಿಸುವ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ.
2025ರ ಆರಂಭದಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಖಚಿತಪಡಿಸಲಾಗುವುದು. ಅಲ್ಲದೆ, ಪಾಕಿಸ್ತಾನವು 2028ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಇದರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.
ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ ಶಾ, ಈ ತಿಂಗಳ ಆರಂಭದಲ್ಲಿ ಐಸಿಸಿ ಅಧ್ಯಕ್ಷರ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಈ ಹುದ್ದೆಗೆ ಬಂದ ನಂತರ ಇದು ಅವರ ಮೊದಲ ಪ್ರಮುಖ ನಿರ್ಧಾರವಾಗಿದೆ. ಶಾ ಅವರ ಸಾರಥ್ಯದಲ್ಲಿ ಐಸಿಸಿ, ಒಂದು ರೀತಿಯಲ್ಲಿ ಪಾಕಿಸ್ತಾನಕ್ಕೆ ಟೂರ್ನಿಯಿಂದ ಸಿಗುವ ದೊಡ್ಡ ಮೊತ್ತವನ್ನು ಕಸಿದುಕೊಂಡಿದೆ.
JUST IN: ICC issues update on Champions Trophy 2025 venue.
— ICC (@ICC) December 19, 2024
Details 👇https://t.co/aWEFiF5qeS
ಐಸಿಸಿ ಹೇಳಿದ್ದೇನು?
“2024 ರಿಂದ 2027 ರವರೆಗಿನ ಭಾರತ ಮತ್ತು ಪಾಕಿಸ್ತಾನ ಆತಿಥ್ಯದ ಐಸಿಸಿ ಟೂರ್ನಿಗಳಲ್ಲಿ ಸಂಪ್ರದಾಯಿಕ ಎದುರಾಳಿ ತಂಡಗಳ ನಡುವಣ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡಸಲಾಗುತ್ತದೆ,” ಎಂದು ಐಸಿಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಮುಂದಿನ ವರ್ಷ ಫೆಬ್ರವರಿ- ಮಾರ್ಚ್‌ನಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2025ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಮತ್ತು ಭಾರತದ ಆತಿಥ್ಯದಲ್ಲಿ ನಡೆಯುವ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗಳಿಗೆ ಐಸಿಸಿಯ ಈ ನಿಯಮಗಳು ಅನ್ವಯವಾಗಲಿವೆ. 2028ರ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ ಆತಿಥ್ಯದ ಹಕ್ಕುಗಳು ಕೂಡ ಪಾಕಿಸ್ಥಾನಕ್ಕೆ ಸಿಕ್ಕಿದೆ. ಈ ಟೂರ್ನಿಯಲ್ಲಿಯೂ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಿಸಲಾಗುತ್ತದೆ. 2029 ಮತ್ತು 2031ರಲ್ಲಿ ನಡೆಯುವ ಐಸಿಸಿ ಮಹಿಳಾ ಟೂರ್ನಿಗಳ ಆತಿಥ್ಯವನ್ನು ಕ್ರಿಕೆಟ್ ಆಸ್ಟ್ರೇಲಿಯಾಗೆ ವಹಿಸಲಾಗಿದೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ವೇಳಾಪಟ್ಟಿ ಬಿಡುಗಡೆ ಯಾವಾಗ?
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಹೈಬ್ರಿಡ್ ಸಮಸ್ಯೆಯನ್ನು ಐಸಿಸಿ ಪರಿಹರಿಸಿದೆ. ಇದೀಗ ಈ ಟೂರ್ನಿಯ ವೇಳಾಪಟ್ಟಿಯನ್ನು ಅತಿ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಐಸಿಸಿ ತಿಳಿಸಿದೆ. ಹಾಲಿ ಚಾಂಪಿಯನ್ ಪಾಕಿಸ್ತಾನದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗಿಯಾಗಲಿವೆ. ಅಫಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆತಿಥೇಯ ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.
ಈ ಸುದ್ದಿಯನ್ನು ಓದಿ: Champions Trophy Schedule: ಇನ್ನೆರಡು ದಿನದಲ್ಲಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ