ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಏಕದಿನ ರ‍್ಯಾಂಕಿಂಗಿನ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 2 ಅರ್ಧಶತಕ ಸಿಡಿಸಿದ್ದರು. ಸಿಡ್ನಿಯಲ್ಲಿ ನಡೆದ 2ನೇ ಏಕದಿನ ಹಾಗೂ ಕ್ಯಾನ್‌ಬೆರಾದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಕ್ರಮವಾಗಿ 89 ಹಾಗೂ 63 ರನ್ ಸಿಡಿಸಿದ್ದ ಕೊಹ್ಲಿ, ಒಟ್ಟಾರೆ 870 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.
ಸ್ನಾಯುಸೆಳೆತದಿಂದ ಏಕದಿನ ಸರಣಿಯಿಂದ ಹೊರಗುಳಿದಿದ್ದ ರೋಹಿತ್ ಶರ್ಮ (842) ಎರಡನೇ ಸ್ಥಾನ ಕಾಯ್ದುಕೊಂಡಿದ್ದು, 3ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್ ಅಜಮ್‌ಗಿಂತ 5 ಪಾಯಿಂಟ್ಸ್ ಮುಂದಿದ್ದಾರೆ. 2019ರ ಏಕದಿನ ವಿಶ್ವಕಪ್ ಬಳಿಕ ಮೊದಲ ಬಾರಿಗೆ ಏಕದಿನ ಸರಣಿಯಲ್ಲಿ ಆಡಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, 49ನೇ ಸ್ಥಾನ ಪಡೆದಿದ್ದಾರೆ. ವೃತ್ತಿಶ್ರೇಷ್ಠ 553 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ (700 ಪಾಯಿಂಟ್ಸ್) 3ನೇ ಸ್ಥಾನ ಕಾಯ್ದು ಕೊಂಡಿದ್ದಾರೆ.