Saturday, 7th September 2024

ಐಸಿಸಿ ಟ್ವೆಂಟಿ-20 ಟೀಮ್ ರ‍್ಯಾಂಕಿಂಗ್‌: ಮೂರಕ್ಕೇರಿದ ಮಹಿಳಾ ಕ್ರಿಕೆಟ್ ತಂಡ

ದುಬೈ: ಶುಕ್ರವಾರ ಬಿಡುಗಡೆಯಾಗಿರುವ ಐಸಿಸಿ ಟ್ವೆಂಟಿ-20 ಟೀಮ್ ರ‍್ಯಾಂಕಿಂಗ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ನ್ಯೂಝಿಲ್ಯಾಂಡ್ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ. ಈ ಮೂಲಕ ಏಕದಿನ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನವನ್ನು ಭದ್ರಪಡಿಸಿ ಕೊಂಡಿದೆ.

ಟಿ-20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಅಗ್ರ ಎರಡು ಸ್ಥಾನದಲ್ಲಿವೆ. ಎರಡು ತಂಡಗಳು ಕ್ರಮವಾಗಿ 291 ಹಾಗೂ 280 ಅಂಕಗಳನ್ನು ಹೊಂದಿವೆ. ಈ ವರ್ಷದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದ ಭಾರತ(270 ಅಂಕ)ನ್ಯೂಝಿಲ್ಯಾಂಡ್ (269)ಗಿಂತ ಒಂದು ಅಂಕ ಮುಂದಿದೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಬ್ರೆಝಿಲ್ ತಂಡ 11 ಸ್ಥಾನ ಭಡ್ತಿ ಪಡೆದು 27ನೇ ಸ್ಥಾನಕ್ಕೇರಿದ್ದು, ಮಲೇಶ್ಯ 31ನೇ ಸ್ಥಾನದಿಂದ 38ನೇ ಸ್ಥಾನಕ್ಕೆ ಕುಸಿದಿದೆ. ಏಕದಿನ ರ್ಯಾಂಕಿಂಗ್‌ನಲ್ಲಿ ಭಾರತ(121) ಹಾಗೂ ಇಂಗ್ಲೆಂಡ್(119) ತಲಾ ನಾಲ್ಕು ಅಂಕಗಳನ್ನು ಕಳೆದುಕೊಂಡಿವೆ. ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನಕ್ಕೇರಿವೆ.

ಆರು ಬಾರಿಯ ಚಾಂಪಿಯನ್ ಹಾಗೂ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ಎರಡೂ ಆವೃತ್ತಿಗಳಲ್ಲಿ ಜಯಶಾಲಿಯಾಗಿರುವ ಆಸ್ಟ್ರೇಲಿಯ 21 ಏಕದಿನ ಪಂದ್ಯಗಳ ಪೈಕಿ 20ರಲ್ಲಿ ಜಯ ಸಾಧಿಸಿದ್ದು, ಒಟ್ಟು 160 ಅಂಕ ಗಳಿಸಿದೆ.

Leave a Reply

Your email address will not be published. Required fields are marked *

error: Content is protected !!