ಚೆನ್ನೈ: ಭಾರತ ತಂಡಕ್ಕೆ ಆಟಗಾರರ ಆಯ್ಕೆ ವಿಚಾರದಲ್ಲಿ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ಪ್ರಾದೇಶಿಕ ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಕ್ರಿಕೆಟಿಗ ಎಸ್. ಬದ್ರಿನಾಥ್(S.Badrinath) ಗಂಭೀರ ಆರೋಪ ಮಾಡಿದ್ದಾರೆ. ಕಳೆದೊಂದು ವರ್ಷದಿಂದ ಶುಭಮನ್ ಗಿಲ್(Shubman Gill) ಸತತ ವೈಫಲ್ಯ ಕಾಣುತ್ತಿದ್ದರೂ ಅವರಿಗೆ ಮತ್ತೆ ಮತ್ತೆ ಅವಕಾಶವನ್ನು ನೀಡಲಾಗುತ್ತಿದೆ. ಅದೇ ತಮಿಳುನಾಡಿನ ಆಟಗಾರರಾಗಿದ್ದರೆ ಈಗಾಗಲೆ ತಂಡದಿಂದ ಹೊರಬಿದ್ದಿರುತ್ತಿದ್ದರು ಎಂದು ಬದ್ರಿನಾಥ್ ದೂರಿದ್ದಾರೆ.
ಗಿಲ್ ಆಸೀಸ್ ವಿರುದ್ಧದ ಬಾರ್ಡರ್- ಗಾವಸ್ಕರ್ ಟ್ರೋಫಿಯಲ್ಲಿ 18.60ರ ಸರಾಸರಿಯಲ್ಲಿ ಕೇವಲ 93 ರನ್ ಗಳಿಸಿದ್ದರು. ರನ್ ಗಳಿಸಲು ಸಾಧ್ಯವಾಗದೇ ಇದ್ದಲ್ಲಿ ಕನಿಷ್ಠ ಪಕ್ಷ ಬೌಲರ್ಗಳನ್ನು ಸತಾಯಿಸಿ ಚೆಂಡನ್ನು ಹಳೆಯದಾಗಿಸುವ ಪ್ರಯತ್ನವನ್ನಾದರೂ ಮಾಡಬೇಕು. ಇದು ತಂಡದ ಇತರ ಆಟಗಾರರಿಗಾದರೂ ರನ್ ಗಳಿಸಲು ನೆರವಾಗುತ್ತದೆ ಎಂದು ಬದ್ರಿನಾಥ್ ಹೇಳಿದ್ದಾರೆ. ಗಿಲ್ ಕಳೆದ ವರ್ಷಾರಂಭದಿಂದ ವಿದೇಶದಲ್ಲಿ ಆಡಿರುವ 7 ಟೆಸ್ಟ್ಗಳಲ್ಲಿ ಒಂದೂ ಶತಕ ಅಥವಾ ಅರ್ಧಶತಕ ಬಾರಿಸಿಲ್ಲ.
ಟೆಸ್ಟ್ ನಿವೃತ್ತಿ ಯಾವಾಗ?
ನವದೆಹಲಿ: ಆಸ್ಟ್ರೇಲಿಯಾ ವಿರುದ್ದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ (Virat Kohli-Rohit sharma) ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಈ ಇಬ್ಬರ ಟೆಸ್ಟ್ ನಿವೃತ್ತಿ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಐದನೇ ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಹೊರಗುಳಿದಿದ್ದರು. ಈ ವೇಳೆ ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿ ಜೀವನ ಮುಗಿದಿತ್ತು ಎಂದು ಹೇಳಲಾಗಿತ್ತು. ಆದರೆ, ರೋಹಿತ್ ಶರ್ಮಾ ಅವರೇ ಸ್ವತಃ ತಾವು ನಿವೃತ್ತಿ ಪಡೆಯುವುದಿಲ್ಲವೆಂದು ಹೇಳಿದ್ದರು.
ಮೊದಲನೇ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಹೊರತಾಗಿಯೂ ವಿರಾಟ್ ಕೊಹ್ಲಿ ಇನ್ನುಳಿದ ಪಂದ್ಯಗಳಲ್ಲಿ ಕನಿಷ್ಠ ಅರ್ಧಶತಕವನ್ನು ಸಿಡಿಸಲು ಸಾಧ್ಯವಾಗಲಿಲ್ಲ. ಅವರು ಆಡಿದ್ದ ಎಂಟು ಇನಿಂಗ್ಸ್‌ಗಳಿಂದ 23.75ರ ಸರಾಸರಿಯಲ್ಲಿ 190 ರನ್‌ಗಳನ್ನು ಗಳಿಸಿದ್ದರು. ಅದರಲ್ಲಿಯೂ ಅವರು ಆಸ್ಟ್ರೇಲಿಯಾ ತಂಡದ ಬೌಲರ್‌ಗಳ ಆಫ್‌ಸ್ಟಂಪ್ ಹೊರಗಡೆಯ ಎಸೆತಗಳ ರಣತಂತ್ರಕ್ಕೆ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ್ದರು. ಆದರೆ, ರೋಹಿತ್ ಶರ್ಮಾ ಅವರ ಸಂಗತಿಗಳು ಇನ್ನೂ ಕಠಿಣವಾಗಿವೆ. ಟೀಮ್ ಇಂಡಿಯಾ ನಾಯಕ ಆಡಿದ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 31 ರನ್‌ಗಳು ಮಾತ್ರ. ಆದರೆ, ಐದನೇ ಹಾಗೂ ಸಿಡ್ನಿ ಟೆಸ್ಟ್‌ನಿಂದ ಅವರನ್ನು ಕೈ ಬಿಡಲಾಗಿತ್ತು.
ಆದರೆ, ದೈನಿಕ್ ಜಾಗರಣ್ ವರದಿಯ ಪ್ರಕಾರ, ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸದ್ಯ ಟೆಸ್ಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಸಾಧ್ಯತೆ ಇಲ್ಲ. ಏಕೆಂದರೆ ಈ ಇಬ್ಬರೂ ಸ್ಟಾರ್ ಬ್ಯಾಟ್ಸ್‌ಮನ್‌ಗಳನ್ನು ತಂಡದಿಂದ ಕೈ ಬಿಡುವುದು ಅತ್ಯಂತ ಕಠಿಣ ಸಂಗತಿಯಾಗಿದೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾರ ಪ್ರದರ್ಶನದ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್‌ಗೆ ಅಸಮಾಧಾನ ಇರುವುದು ನಿಜ.