Monday, 13th January 2025

Champions Trophy: ʻಯಾವುದೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಸಿದ್ದʼ-ಶ್ರೇಯಸ್‌ ಅಯ್ಯರ್‌!

'I'm Flexible And Ready To Bat': Shreyas Iyer Reveals His Preferred Batting Position Ahead Of Champions Trophy

ನವದೆಹಲಿ: ಮುಂಬರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy) ಟೂರ್ನಿಯ ಭಾರತ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸದಲ್ಲಿರುವ ಭಾರತ ತಂಡದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌, ತಾವು ಯಾವುದೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಸಿದ್ದ ಎಂದು ಹೇಳಿದ್ದಾರೆ. ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಆರಂಭವಾಗಲಿದೆ.

ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಆದರೂ ಅವರನ್ನು 2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ ಉಳಿಸಿಕೊಳ್ಳುವಲ್ಲಿ ಕೋಲ್ಕತಾ ಫ್ರಾಂಚೈಸಿ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಪಂಜಾಬ್‌ ಕಿಂಗ್ಸ್‌ ದಾಖಲೆಯ ಮೊತ್ತಕ್ಕೆ (26.75 ಕೋಟಿ ರೂ) ಖರೀದಿಸಿತ್ತು ಹಾಗೂ ನಾಯಕತ್ವವನ್ನು ನೀಡಿದೆ.

ಐಪಿಎಲ್‌ ಇತಿಹಾಸದಲ್ಲಿಯೇ ಎರಡನೇ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ಬರೆದಿರುವ ಅವರು, 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ಏಕದಿನ ತಂಡದ ನಾಲ್ಕನೇ ಕ್ರಮಾಂಕದಲ್ಲಿ ಭದ್ರಪಡಿಸಿಕೊಂಡಿದ್ದರು. ಆದರೆ, ತದ ನಂತರ ಅವರು ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು.

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಭಾರತ ತಂಡವನ್ನು ಜನವರಿ 19 ರಂದು ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಪ್ರಕಟಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಂದ ಹಾಗೆ ಶ್ರೇಯಸ್‌ ಅಯ್ಯರ್‌ ಅವರು ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಪರ ಉತ್ತಮ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ಸ್‌ ಟ್ರೋಫಿ ಭಾರತ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ಶ್ರೇಯಸ್‌ ಅಯ್ಯರ್‌ ಹೇಳಿದ್ದೇನು?

ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ಸಂಭಾಷಣೆಯಲ್ಲಿ ಮಾತನಾಡಿದ ಶ್ರೇಯಸ್‌ ಅಯ್ಯರ್‌, “ನಾನು ಹೊಂದಿಕೊಳ್ಳುವವನಾಗಿದ್ದೇನೆಂದು ಭಾವಿಸುತ್ತೇನೆ. ನಾನು ಯಾವುದೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಸಿದ್ದನಿದ್ದೇನೆ, ಈ ಕೆಲಸವನ್ನು ನಾನು ಕೆಕೆಆರ್‌ ಪರ ಮಾಡಿದ್ದೇನೆ. ಆದರೂ ಕೆಲವರು ನನ್ನ ಅಂಕಿಅಂಶಗಳು ಚೆನ್ನಾಗಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ನನ್ನ ಬ್ಯಾಟಿಂಗ್‌ ಕ್ರಮಾಂಕ, ಸ್ಟ್ರೈಕ್‌ ರೇಟ್‌ ಹಾಗೂ ನನ್ನ ಸಂಖ್ಯೆಗಳನ್ನು ನೀವು ನೋಡಿದಾಗ, ಸಾಧ್ಯವಾದಷ್ಟು ಯಾವುದೋ ಒಂದು ಹಾದಿಯಲ್ಲಿ ತಂಡಕ್ಕೆ ನೆರವಾಗಿದೆ. ಆದರೆ, ನಿರ್ದಿಷ್ಟ ಬ್ಯಾಟ್ಸ್‌ಮನ್ ಇದೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕೆಂಬ ಗ್ರಹಿಕೆಯನ್ನು ಜನರು ಹೊರಗಿನಿಂದ ಸೃಷ್ಟಿಸುತ್ತಿದ್ದಾರೆ. ನಾನು ಈ ರೀತಿ ಯೋಚನೆ ಮಾಡುವ ವ್ಯಕ್ತಿಯಲ್ಲ. ಹೊಂದಿಕೊಳ್ಳುವುದನ್ನು ನಾನು ಇಷ್ಟಪಡುತ್ತೇನೆ. ನಾನು ಯಾವುದೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಸಿದ್ದನಾಗಿದ್ದೇನೆ. ತಂಡದ ಬೇಡಿಕೆಗೆ ತಕ್ಕಂತೆ ನಾನು ಯಾವುದೇ ಕ್ರಮಾಂಕದಲ್ಲಿ ಅಗತ್ಯವಿದ್ದರೂ ಆಡುತ್ತೇನೆ,” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Rohit Sharma: ಬಿಸಿಸಿಐ ಸಭೆಯಲ್ಲಿ ರೋಹಿತ್ ಹೇಳಿದ್ದೇನು?

Leave a Reply

Your email address will not be published. Required fields are marked *