ಸಿಡ್ನಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದ (IND vs AUS) ಮೊದಲನೇ ದಿನ ಜಸ್‌ಪ್ರೀತ್ ಬುಮ್ರಾ ಹಾಗೂ ಸ್ಯಾಮ್ ಕೊನ್‌ಸ್ಟಸ್ ನಡುವಿನ ಮಾತಿನ ಚಕಮಕಿ ಬಗ್ಗೆ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಪ್ರತಿಕ್ರಿಯಿಸಿದ್ದಾರೆ. ಮೊದಲನೇ ದಿನದಾಟದ ಅಂತ್ಯದಲ್ಲಿ ಆಸ್ಟ್ರೇಲಿಯನ್ ಆಟಗಾರರು ಸಮಯವನ್ನು ವ್ಯರ್ಥ ಮಾಡಲು ಬಯಸಿದ್ದರು ಎಂದು ಹೇಳಿದ್ದಾರೆ.
ಮೊದಲನೇ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಷಭ್ ಪಂತ್, “ಅವರು ಸ್ವಲ್ಪ ಸಮಯವನ್ನು ವ್ಯರ್ಥ ಮಾಡಲು ಬಯಸಿದ್ದರು ಹಾಗೂ ಈ ಬಗ್ಗೆ ಅವರು ಮೊದಲೇ ಮಾತನಾಡಿಕೊಂಡಿದ್ದರು ಎಂದೆನಿಸುತ್ತದೆ. ಈ ಕಾರಣದಿಂದಲೇ ಕೊನ್‌ಸ್ಟಸ್ ಅವರು ಜಸ್‌ಪ್ರೀತ್ ಬುಮ್ರಾ ಅವರ ಜೊತೆ ಮಾತನಾಡಿದ್ದರು ಎಂದೆನಿಸುತ್ತದೆ. ಅವರು ಏನೋ ಹೇಳಿದ್ದರು, ಅದು ನನಗೆ ಸರಿಯಾಗಿ ಕೇಳಿಸಲಿಲಲ್ಲ. ನಾವು ಮತ್ತೊಂದು ಓವರ್ ಬೌಲ್ ಮಾಡಬಾರದೆಂದು ಅವರು ಸಮಯ ವ್ಯರ್ಥ ಮಾಡಲು ಬಯಸಿದ್ದರು,” ಎಂದು ಹೇಳಿದ್ದಾರೆ.
ಮೂರನೇ ಓವರ್ ಕೊನೆಯ ಎಸೆತಕ್ಕೂ ಮುನ್ನ ಸ್ಟ್ರೈಕ್‌ನಲ್ಲಿದ್ದ ಉಸ್ಮಾನ್ ಖವಾಜ ಸಮಯವನ್ನು ವ್ಯರ್ಥ ಮಾಡಲು ಪ್ರಯತ್ನಿಸಿದರು. ಆ ಮೂಲಕ ಇನ್ನೊಂದು ಓವರ್ ಆಡುವುದನ್ನು ತಪ್ಪಿಸುವುದು ಅವರ ಉದ್ದೇಶವಾಗಿತ್ತು. ಇದರಿಂದ ಜಸ್‌ಪ್ರೀತ್ ಬುಮ್ರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ವೇಳೆ ನಾನ್ ಸ್ಟ್ರೈಕ್‌ನಲ್ಲಿದ್ದ ಕೊನ್‌ಸ್ಟಸ್ ಅವರು ಬುಮ್ರಾ ಅವರಿಗೆ ಏನೋ ಹೇಳಿದ್ದರು. ಇದರಿಂದ ಕೆರಳಿಸಿದ ಬುಮ್ರಾ ಮಾತಿನ ತಿರುಗೇಟು ನೀಡಿದರು. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಫೀಲ್ಡ್ ಅಂಪೈರ್ ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಿದರು.
IND vs AUS: ಸ್ಯಾಮ್ ಕೊನ್‌ಸ್ಟಸ್ ವಿರುದ್ಧ ರೊಚ್ಚಿಗೆದ್ದ ಜಸ್‌ಪ್ರೀತ್ ಬುಮ್ರಾ! ವಿಡಿಯೊ
ಉಸ್ಮಾನ್ ಖವಾಜ್ ವಿಕೆಟ್ ಕಿತ್ತ ಬುಮ್ರಾ
ನಂತರ ಜಸ್‌ಪ್ರೀತ್ ಬುಮ್ರಾ ಮೂರನೇ ಓವರ್ ಕೊನೆಯ ಎಸೆತದಲ್ಲಿ ಉಸ್ಮಾನ್ ಖವಾಜ ಅವರನ್ನು ಔಟ್ ಮಾಡಿದರು ಹಾಗೂ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗೆ ತಿರುಗೇಟು ನೀಡಿದರು. ಆಫ್ ಸ್ಟಂಪ್ ಮೇಲೆ ಹಾಕಿದ ಚೆಂಡು ಖವಾಜ ಅವರ ಬ್ಯಾಟ್ ತುದಿಗೆ ತಾಗಿ ಸ್ಲಿಪ್‌ನಲ್ಲಿದ್ದ ಕೆಎಲ್ ರಾಹುಲ್ ಕೈ ಸೇರಿತ್ತು. ಈ ವೇಳೆ ಬುಮ್ರಾ ನಾನ್‌ಸ್ಟ್ರೈಕ್‌ನಲ್ಲಿದ್ದ ಸ್ಯಾಮ್ ಕೊನ್‌ಸ್ಟಸ್ ಕಡೆ ಮುಖ ಮಾಡಿ ತಿರುಗೇಟು ನೀಡಿದರು. ನಂತರ ಖವಾಜ ವಿಕೆಟ್ ಉರುಳಿದ ಬಳಿಕ ಅಂಪೈರ್‌ಗಳು ಮೊದಲನೇ ದಿನವನ್ನು ಮುಗಿಸಿದರು.
Bumrah 🔥
— Naeem (@NaeemCaption_) January 3, 2025
pic.twitter.com/dAM3IOPwFa
ಆಸ್ಟ್ರೇಲಿಯಾ 9ಕ್ಕೆ 1
ಜಸ್‌ಪ್ರೀತ್ ಬುಮ್ರಾ ಹಾಗೂ ಪ್ರಸಿಧ್ ಕೃಷ್ಣ ಅವರು ಕೂಡ ಕೊನ್‌ಸ್ಟಸ್ ಅವರ ವಿರುದ್ದ ರೊಚ್ಚಿಗೆದ್ದರು. ಭಾರತ ತಂಡದ ಎಲ್ಲಾ ಆಟಗಾರರು ಕೂಡ ಪಿಚ್ ಬಳಿ ಬಂದು ಉಸ್ಮಾನ್ ಖವಾಜ ವಿಕೆಟ್ ಅನ್ನು ಸಂಭ್ರಮಿಸಿದರು. ಈ ವೇಳೆ ಕೊನ್‌ಸ್ಟಸ್ ತುಟಿಕ್ ಪಿಟಿಕ್ ಎನ್ನದೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಆ ಮೂಲಕ ಭಾರತ ತಂಡ ಮೊದಲನೇ ದಿನವೇ ಒಂದು ವಿಕೆಟ್ ಕಿತ್ತು ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ನೀಡಿತು. ಆ ಮೂಲಕ ಆಸ್ಟ್ರೇಲಿಯಾ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ ಮೂರು ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿದೆ.
185ಕ್ಕೆ ಭಾರತ ಆಲ್‌ಔಟ್
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. 72.2 ಓವರ್‌ಗಳಿಗೆ 185 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ರಿಷಭ್ ಪಂತ್ (40 ರನ್) ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಮಿಚೆಲ್ ಸ್ಟಾರ್ಕ್ 3 ವಿಕೆಟ್ ಕಿತ್ತರೆ, ಸ್ಕಾಟ್ ಬೋಲೆಂಡ್ 4 ವಿಕೆಟ್‌ಗಳನ್ನು ಕಬಳಿಸಿದ್ದರು.
ಈ ಸುದ್ದಿಯನ್ನು ಓದಿ: IND vs AUS: ಸ್ಕಾಟ್ ಬೋಲೆಂಡ್ ಮಾರಕ ದಾಳಿ, ಭಾರತ 185ಕ್ಕೆ ಆಲ್‌ಔಟ್!