Friday, 20th December 2024

IND vs AUS: ಕೆಎಲ್‌ ರಾಹುಲ್‌ ಓಪನರ್‌ ಆಗಿ ಮುಂದುವರಿಯಲಿ ಎಂದ ದಿನೇಶ್‌ ಕಾರ್ತಿಕ್!

IND vs AUS: ʻHope India back opener KL Rahul, value what he has done,ʼsays Dinesh Karthik

ನವದೆಹಲಿ: ಆಸ್ಟ್ರೇಲಿಯಾ ವಿರುದ್ದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ (IND vs AUS) ಕೊನೆಯ ಎರಡು ಪಂದ್ಯಗಳಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ಅವರೇ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಬೇಕೆಂದು ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಸಲಹೆ ನೀಡಿದ್ದಾರೆ. ವಿದೇಶಿ ನೆಲದಲ್ಲಿ ಓಪನರ್‌ ಆಗಿ ಕೆಎಲ್‌ ರಾಹುಲ್‌ ಅವರು ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಆದ್ದರಿಂದ ಟೀಮ್‌ ಮ್ಯಾನೇಜ್‌ಮೆಂಟ್‌ ಅವರನ್ನು ಕಡೆಗಣಿಸಬಾರದು ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಪ್ರಕಟಿಸಿದ್ದ 18 ಆಟಗಾರರ ಪೈಕಿ ಕೆಎಲ್‌ ರಾಹುಲ್‌ ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ರೋಹಿತ್‌ ಶರ್ಮಾ ಪರ್ತ್‌ ಟೆಸ್ಟ್‌ಗೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಕೆಎಲ್‌ ರಾಹುಲ್‌ ಆರಂಭಿಕ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸಿದ್ದರು ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಅರ್ಧಶತಕವನ್ನು (77 ರನ್‌) ಸಿಡಿಸಿದ್ದರು ಹಾಗೂ ಯಶಸ್ವಿ ಜೈಸ್ವಾಲ್‌ ಜೊತೆ 201 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿಯೂ ರಾಹುಲ್‌ ಓಪನರ್‌ ಆಗಿ ಆಡಿದ್ದರು ಹಾಗೂ ರೋಹಿತ್‌ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು. ಅದರಂತೆ ಮೂರನೇ ಟೆಸ್ಟ್‌ ಪಂದ್ಯದಲ್ಲಿಯೂ ಇವರಿಬ್ಬರೂ ಅದೇ ಕ್ರಮಾಂಕಗಳಲ್ಲಿ ಮುಂದುವರಿದಿದ್ದರು.

ನಂತರ ಮೂರನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಕೆಎಲ್‌ ರಾಹುಲ್‌ ಅವರು ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುವ ಮೂಲಕ 84 ರನ್‌ಗಳನ್ನು ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಮೆಲ್ಬರ್ನ್‌ ಟೆಸ್ಟ್‌ನಲ್ಲಿಯೂ ಬಹುತೇಕ ಕೆಎಲ್‌ ರಾಹುಲ್‌ ಅವರೇ ಇನಿಂಗ್ಸ್‌ ಆರಂಭಿಸಬಹುದು ಹಾಗೂ ರೋಹಿತ್‌ ಶರ್ಮಾ ಆರನೇ ಕ್ರಮಾಂಕದಲ್ಲಿ ಆಡಬಹುದು.

ಕೆಎಲ್‌ ರಾಹುಲ್‌ ಓಪನರ್‌ ಆಗಿ ಮುಂದುವರಿಯಲಿ: ದಿನೇಶ್‌ ಕಾರ್ತಿಕ್‌

“ಕೆಎಲ್‌ ರಾಹುಲ್‌ ಓಪನಿಂಗ್‌ ಬ್ಯಾಟ್ಸ್‌ಮನ್‌ ಆಗಿ ಭಾರತಕ್ಕೆ ಅಗತ್ಯವಿದೆ ಎಂದು ನಾನು ನಂಬುತ್ತೇನೆ. ಅವರನ್ನು ಓಪನರ್‌ ಆಗಿ ಮುಂದುವರಿಸಬಹುದು. ಈ ಸರಣಿ ಮುಗಿಯಲು ಇನ್ನು ಕೇವಲ ಎರಡು ಪದ್ಯಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಅವರೇ ಓಪನರ್‌ ಆಗಿ ಆಡಬೇಕು. ಅವರು ತಂಡಕ್ಕಾಗಿ ಏನು ಮಾಡಿದ್ದಾರೆ ಹಾಗೂ ಈಗ ಏನು ಮಾಡಿದ್ದಾರೆಂಬುದು ಇಲ್ಲಿ ಮುಖ್ಯವಾಗುತ್ತದೆ. ಮುಂದಿನ ಕೆಲ ದಿನಗಳಲ್ಲಿ ಟೆಸ್ಟ್‌ ಕ್ರಿಕೆಟಿಗರನ್ನು ಜನರು ಮರೆಯಬಹುದು. ಒಂದು ನಿರ್ದಿಷ್ಟ ಅವಧಿಯಲ್ಲಿ ಭಾರತಕ್ಕೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೊಡುಗೆ ನೀಡಿದವರ ಸಾಲಿನಲ್ಲಿ ಕೆಎಲ್‌ ರಾಹುಲ್‌ ಕೂಡ ಇದ್ದಾರೆ,” ಎಂದು ದಿನೇಶ್‌ ಕಾರ್ತಿಕ್‌ ಕ್ರಿಕ್‌ಬಝ್‌ಗೆ ತಿಳಿಸಿದ್ದಾರೆ.

“ಜನರು ಯಾವಾಗಲೂ ಅವರ ಸ್ಥಿರತೆಯ ಬಗ್ಗೆ ದೂರು ನೀಡುತ್ತಾರೆ; ನಾನು ಆ ಪದವನ್ನು ಬಳಸಲು ಬಯಸುವುದಿಲ್ಲ. ಆದರೆ ಅವರು ಅದನ್ನು ತನ್ನ ಮೇಲೆ ತೆಗೆದುಕೊಳ್ಳುತ್ತಾರೆ. ಅವರ ಸರಾಸರಿಯನ್ನು ತೋರಿಸುತ್ತದೆ. ಆದರೆ ಅವರು ಅದಕ್ಕಿಂತ ತುಂಬಾ ಉತ್ತಮ. ಅವರು ಅದಕ್ಕಿಂತ ಹೆಚ್ಚು, ಹೆಚ್ಚು ಉತ್ತಮ ವ್ಯಕ್ತಿ,” ಎಂದು ಆರ್‌ಸಿಬಿ ಮೆಂಟರ್‌ ಹೇಳಿದ್ದಾರೆ.

ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌

2024-25ರ ಸಾಲಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕೆಎಲ್‌ ರಾಹುಲ್‌ ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಆಗಿದ್ದಾರೆ. ಆರು ಇನಿಂಗ್ಸ್‌ಗಳಿಂದ ಅವರು 47ರ ಸರಾಸರಿಯಲ್ಲಿ 235 ರನ್‌ಗಳನ್ನು ಕಲೆ ಹಾಕಿದ್ದಾರೆ. 2021ರ ಬಳಿಕ ಅವರು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾದಲ್ಲಿ ಮೂರು ಶತಕಗಳೊಂದಿಗೆ 40.40ರ ಸರಾಸರಿಯಲ್ಲಿ 889 ರನ್‌ಗಳನ್ನು ಕಲೆ ಹಾಕಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಅರ್ಧಶತಕ ಸಿಡಿಸಿ 58 ವರ್ಷಗಳ ಹಳೆಯ ದಾಖಲೆ ಮುರಿದ ರವೀಂದ್ರ ಜಡೇಜಾ!