ಅಡಿಲೇಡ್: ಮಿಚೆಲ್ ಸ್ಟಾರ್ಕ್ (6 ಕ್ಕೆ 48) ಅವರ ಮಾರಕ ಬೌಲಿಂಗ್ ದಾಳಿ ಹಾಗೂ ನೇಥನ್ ಮೆಕ್‌ಸ್ವೀನಿ (38*) ಅವರ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೊದಲನೇ ದಿನ (IND vs AUS 2nd Test Day 1 Highlights) ಮುನ್ನಡೆ ಸಾಧಿಸಿದೆ. ಆದರೆ, ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಟೀಮ್ ಇಂಡಿಯಾ ಆರಂಭಿಕ ದಿನ ಪ್ರಾಬಲ್ಯ ಸಾಧಿಸುವಲ್ಲಿ ವಿಫಲವಾಗಿದೆ.
ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಿದ್ದ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಯೋಜನೆಯನ್ನು ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಮಣ್ಣು ಪಾಲು ಮಾಡಿದರು. ಆಸೀಸ್ ಮಾರಕ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ಎಡವಿದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 44.1 ಓವರ್‌ಗಳಿಗೆ 180 ರನ್‌ಗಳಿಗೆ ಆಲೌಟ್ ಆಯಿತು.
ಪರ್ತ್‌ನಲ್ಲಿ ಶತಕ ಸಿಡಿಸಿ ಕಾಂಗರೂ ಪಡೆಗೆ ನಡುಕು ಉಂಟು ಮಾಡಿದ್ದ ಯಶಸ್ವಿ ಜೈಸ್ವಾಲ್, ಅಡಿಲೇಡ್‌ನಲ್ಲಿ ಮೊದಲನೇ ದಿನ ಎಡವಿದರು. ಆದರೆ, ಎರಡನೇ ವಿಕೆಟ್‌ಗೆ ಶುಭಮನ್ ಗಿಲ್ ಹಾಗೂ ಕೆಎಲ್ ರಾಹುಲ್ 69 ರನ್‌ಗಳನ್ನು ಕಲೆ ಹಾಕುವ ಮೂಲಕ ಭಾರತಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದರು. ಆದರೆ, ಕೆಎಲ್ ರಾಹುಲ್ (37 ರನ್) ಹಾಗೂ ಶುಭಮನ್ ಗಿಲ್ (31 ರನ್) ಅವರು ಆಸೀಸ್ ಮಾರಕ ದಾಳಿಯನ್ನು ಸಮರ್ಥ ಎದುರಿಸುವ ಮೂಲಕ ಭಾರತ ತಂಡವನ್ನು 100ರ ಗಡಿ ದಾಟಿಸುವ ಪ್ರಯತ್ನದಲ್ಲಿದ್ದರು. ಆದರೆ, ಇವರು ವಿಕೆಟ್ ಒಪ್ಪಿಸಿದ ಬಳಿಕ ಪಂದ್ಯದ ದಿಕ್ಕು ಸಂಪೂರ್ಣ ಬದಲಾಯಿತು.
ವಿರಾಟ್ ಕೊಹ್ಲಿ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಆಡಿದ ನಾಯಕ ರೋಹಿತ್ ಶರ್ಮಾ ಕೇವಲ ಮೂರು ರನ್‌ಗಳಿಗೆ ಸೀಮಿತರಾದರು. ಆದರೆ, 21 ರನ್ ಗಳಿಸಿ ಸಿಕ್ಕಿದ್ದ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ರಿಷಭ್ ಪಂತ್ ಎಡವಿದರು. ಆದರೆ, ಪರ್ತ್‌ನಲ್ಲಿ ಆಡಿದಂತೆ ಇಲ್ಲಿಯೂ ತಮ್ಮ ಬ್ಯಾಟಿಂಗ್‌ನಲ್ಲಿ ಪರಾಕ್ರಮ ಮೆರೆದ ನಿತೀಶ್ ಕುಮಾರ್ ರೆಡ್ಡಿ 54 ಎಸೆತಗಳಲ್ಲಿ 42 ರನ್‌ಗಳ ನಿರ್ಣಾಯಕ ಕೊಡುಗೆಯನ್ನು ಭಾರತಕ್ಕೆ ನೀಡಿದರು. ಅದೇ ರೀತಿ ಆರ್ ಅಶ್ವಿನ್ ಕೂಡ 22 ರನ್‌ಗಳ ಉಪಯುಕ್ತ ಕಾಣಿಕೆಯನ್ನು ನೀಡಿದರು.
ಮಿಂಚಿದ ಮಿಚೆಲ್ ಸ್ಟಾರ್ಕ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಯೋಜನೆಯನ್ನು ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ತಮ್ಮ ಮಾರಕ ದಾಳಿಯಿಂದ ತಲೆ ಕೆಳಗಾಗುವಂತೆ ಮಾಡಿದರು. ಇವರು ಬೌಲ್ ಮಾಡಿದ 14.1 ಓವರ್‌ಗಳಿಗೆ 48 ರನ್ ನೀಡಿ 6 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದರು. ಇವರಿಗೆ ಸಾಥ್ ನೀಡಿದ ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್ ಬೋಲೆಂಡ್ ತಲಾ ಎರಡು ವಿಕೆಟ್‌ಗಳನ್ನು ಕಿತ್ತರು.
ಭರ್ಜರಿ ಆರಂಭ ಪಡೆದ ಆಸ್ಟ್ರೇಲಿಯಾ
ಭಾರತ ತಂಡವನ್ನು 180 ರನ್‌ಗಳಿಗೆ ಕಟ್ಟಿ ಹಾಕಿದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ, ಮೊದಲನೇ ದಿನದಾಟದ ಅಂತ್ಯಕ್ಕೆ 33 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 86 ರನ್‌ಗಳನ್ನು ಕಲೆ ಹಾಕಿದೆ. ಉಸ್ಮಾನ್ ಖವಾಜ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರೂ, ನೇಥನ್ ಮೆಕ್‌ಸ್ವೀನಿ
ಅಜೇಯ 37 ರನ್‌ಗಳು ಹಾಗೂ ಮಾರ್ನಸ್ ಲಾಬುಶೇನ್ ಅಜೇಯ 20 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡ ಇನ್ನೂ 94 ರನ್‌ಗಳ ಹಿನ್ನಡೆಯಲ್ಲಿದೆ.
ಸ್ಕೋರ್ ವಿವರ (ಮೊದಲನೇ ದಿನದಾಟದ ಅಂತ್ಯಕ್ಕೆ)
ಭಾರತ ತಂಡ: ಪ್ರಥಮ ಇನಿಂಗ್ಸ್‌ನಲ್ಲಿ 44.1 ಓವರ್‌ಗಳಲ್ಲಿ 180-10 (ನಿತೀಶ್ ಕುಮಾರ್ ರೆಡ್ಡಿ 42,ಕೆಎಲ್ ರಾಹುಲ್ 37, ಶುಭಮನ್ ಗಿಲ್ 31, ಆರ್ ಅಶ್ವಿನ್ 22 ರನ್; ಮಿಚೆಲ್ ಸ್ಟಾರ್ಕ್ 48ಕ್ಕೆ 6, ಪ್ಯಾಟ್ ಕಮಿನ್ಸ್ 41 ಕ್ಕೆ 2, ಸ್ಕಾಟ್ ಬೋಲೆಂಡ್ 54ಕ್ಕೆ 2)
ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌ನಲ್ಲಿ 33 ಓವರ್‌ಗಳಲ್ಲಿ 86-1 (ನೇಥನ್ ಮೆಕ್‌ಸ್ವೀನಿ 37, ಮಾರ್ನಸ್ ಲಾಬುಶೇನ್ 20; ಜಸ್‌ಪ್ರೀತ್ ಬುಮ್ರಾ 13 ಕ್ಕೆ 1)
ಈ ಸುದ್ದಿಯನ್ನು ಓದಿ: IND vs AUS: ʻಅದೇ ರಾಗ ಅದೇ ತಾಳʼ-ವಿರಾಟ್ ಕೊಹ್ಲಿ ವೈಫಲ್ಯದ ಬಗ್ಗೆ ಸಂಜಯ್ ಮಾಂಜ್ರೇಕರ್ ಕಿಡಿ!