Thursday, 26th December 2024

IND vs AUS 4th Test Day-1 Highlights: ಮೊದಲನೇ ದಿನ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾ!

IND vs AUS 4th Test Day-1 Highlights

ಮೆಲ್ಬರ್ನ್‌: ಜಸ್‌ಪ್ರೀತ್‌ ಬುಮ್ರಾ (75ಕ್ಕೆ 3) ಅವರ ಮಾರಕ ಬೌಲಿಂಗ್‌ ದಾಳಿಯ ಹೊರತಾಗಿಯೂ ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡ, ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ (IND vs AUS 4th Test Day-1 Highlights) ಪಂದ್ಯದ ಮೊದಲನೇ ದಿನ ಪ್ರಾಬಲ್ಯ ಸಾಧಿಸಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 86 ಓವರ್‌ಗಳಿಗೆ ಆರು ವಿಕೆಟ್‌ಗಳ ನಷ್ಟಕ್ಕೆ 311 ರನ್‌ಗಳನ್ನು ಕಲೆ ಹಾಕಿದೆ. ಕ್ರೀಸ್‌ನಲ್ಲಿ ಸ್ಟೀವನ್‌ ಸ್ಮಿತ್‌ (68) ಹಾಗೂ ಪ್ಯಾಟ್‌ ಕಮಿನ್ಸ್‌ (8) ಅವರು ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇಲ್ಲಿನ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಗುರುವಾರ ಆರಂಭವಾದ ನಾಲ್ಕನೇ ಟೆಸ್ಟ್‌ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ನಾಯಕ ಪ್ಯಾಟ್‌ ಕಮಿನ್ಸ್‌ ನಿರ್ಧಾರಕ್ಕೆ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳು ತಲಾ ಅರ್ಧಶತಕಗಳನ್ನು ಬಾರಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

IND vs AUS: ವಿರಾಟ್‌ ಕೊಹ್ಲಿ-ಸ್ಯಾಮ್‌ ಕೋನ್‌ಸ್ಟಸ್‌ ನಡುವೆ ಮಾತಿನ ಚಕಮಕಿ! ವಿಡಿಯೊ ವೈರಲ್‌

ಆಸ್ಟ್ರೇಲಿಯಾಗೆ ಭರ್ಜರಿ ಆರಂಭ

ಆಸ್ಟೇಲಿಯಾ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಉಸ್ಮಾನ್‌ ಖವಾಜ ಹಾಗೂ ಡೆಬ್ಯೂಟಂಟ್‌ ಸ್ಯಾಮ್‌ ಕೋನ್‌ಸ್ಟಸ್‌ ಅವರು ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 89 ರನ್‌ಗಳನ್ನು ಕಲೆ ಹಾಕುವ ಮೂಲಕ ಆಸ್ಟ್ರೇಲಿಯಾಗೆ ಭದ್ರ ಅಡಿಪಾಯ ಕೊಟ್ಟಿತು. ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ಸ್ಪೋಟಕ ಬ್ಯಾಟ್‌ ಮಾಡಿದ ಸ್ಯಾಮ್‌ ಕೋನ್‌ಸ್ಟಸ್‌ ಅವರು 62 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 62 ರನ್‌ ಗಳಿಸಿದರು. ಆ ಮೂಲಕ ಆಸ್ಟ್ರೇಲಿಯಾ ಪರ ಪದಾರ್ಪಣೆ ಪಂದ್ಯದಲ್ಲಿಯೇ ಅರ್ಧಶತಕ ಸಿಡಿಸಿದ ಎರಡನೇ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ನಂತರ ಬ್ಯಾಟಿಂಗ್‌ ಮುಂದುವರಿಸಿದ ಉಸ್ಮಾನ್‌ ಖವಾಜ 121 ಎಸೆತಗಳಲ್ಲಿ 57 ರನ್‌ ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ ಭದ್ರ ಅಡಿಪಾಯ ಹಾಕಿ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಮಾರ್ನಸ್‌ ಲಾಬುಶೇನ್‌ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರ. ಎದುರಿಸಿದ 145 ಎಸೆತಗಳಲ್ಲಿ 72 ರನ್‌ ಗಳಿಸಿ ಶತಕದ ಭರವಸೆ ಮೂಡಿಸಿದ್ದರು. ಆದರೆ, ಇದಕ್ಕೆ ವಾಷಿಂಗ್ಟನ್‌ ಸುಂದರ್‌ ಅವಕಾಶ ನೀಡಲಿಲ್ಲ.

ಸ್ಟೀವನ್‌ ಸ್ಮಿತ್‌ ಆಸರೆ

ಮಿಚೆಲ್‌ ಮಾರ್ಷ್‌, ಟ್ರಾವಿಸ್‌ ಹೆಡ್‌ ಹಾಗೂ ಅಲೆಕ್ಸ್‌ ಕೇರಿ ತ್ವರಿತವಾಗಿ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ತಾಳ್ಮೆಯಿಂದ ಬ್ಯಾಟ್‌ ಮಾಡಿದ ಸ್ಟೀವನ್‌ ಸ್ಮಿತ್‌, 111 ಎಸೆತಗಳಲ್ಲಿ ಅಜೇಯ 68 ರನ್‌ ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾಗಿದ್ದಾರೆ. ಸ್ಟೀವನ್‌ ಸ್ಮಿತ್‌ ಜೊತೆಗೆ ಮತ್ತೊಂದು ತುದಿಯಲ್ಲಿ ಪ್ಯಾಟ್‌ ಕಮಿನ್ಸ್‌ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಭಾರತದ ಕಮ್‌ಬ್ಯಾಕ್‌ಗೆ ನೆರವಾದ ಬುಮ್ರಾ

ಮೊದಲನೇ ದಿನದ ಆರಂಭಿಕ ಸೆಷನ್‌ನಲ್ಲಿ ಭಾರತದ ಬೌಲರ್‌ಗಳು ಬಾರಿ ಹಿನ್ನಡೆಯನ್ನು ಅನುಭವಿಸಿದ್ದರು. ಆದರೆ, ಎರಡನೇ ಸೆಷನ್‌ನಲ್ಲಿ ಭಾರತದ ಬೌಲರ್‌ಗಳು ಕಮ್‌ಬ್ಯಾಕ್‌ ಮಾಡಿದರು. ಅದರಲ್ಲಿಯೂ ವಿಶೇಷವಾಗಿ ಜಸ್‌ಪ್ರೀತ್‌ ಬುಮ್ರಾ ಅವರು ಕ್ರೀಸ್‌ನಲ್ಲಿ ನೆಲೆಯೂರಿದ್ದ ಉಸ್ಮಾನ್‌ ಖವಾಜ, ಟ್ರಾವಿಸ್‌ ಹೆದಡ್‌ ಹಾಗೂ ಮಿಚೆಲ್‌ ಮಾರ್ಷ್‌ ಅವರನ್ನು ಔಟ್‌ ಮಾಡಿ ಭಾರತದ ಕಮ್‌ಬ್ಯಾಕ್‌ಗೆ ನೆರವು ನೀಡಿದ್ದರು.

ಸ್ಕೋರ್‌ ವಿವರ (ಮೊದಲನೇ ದಿನದಾಟದ ಅಂತ್ಯಕ್ಕೆ)

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌ 86 ಓವರ್‌ಗಳಿಗೆ 311-6 (ಮಾರ್ನಸ್‌ ಲಾಬುಶೇನ್‌ 72, ಸ್ಯಾಮ್‌ ಕೋನ್‌ಸ್ಟಸ್‌ 60, ಉಸ್ಮಾನ್‌ ಖವಾಜ 57, ಸ್ಟೀವನ್‌ ಸ್ಮಿತ್‌ 68*; ಜಸ್‌ಪ್ರೀತ್‌ ಬುಮ್ರಾ 75 ಕ್ಕೆ 3)