Friday, 27th December 2024

IND vs AUS: ಸ್ಟೀವನ್‌ ಸ್ಮಿತ್‌ ಭರ್ಜರಿ ಶತಕ, 474 ರನ್‌ಗಳಿಗೆ ಆಸ್ಟ್ರೇಲಿಯಾ ಆಲ್‌ಔಟ್‌!

IND vs AUS 4th Test Day 2: Steven Smith Scored Hundred, Australia All out for 474 Runs

ಮೆಲ್ಬರ್ನ್‌: ಸ್ಟೀವನ್‌ ಸ್ಮಿತ್‌ ಭರ್ಜರಿ ಶತಕ ಸಿಡಿಸಿದ ಬಲದಿಂದ ಆಸ್ಟ್ರೇಲಿಯಾ ತಂಡ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ (IND vs AUS) ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿದೆ. ಆ ಮೂಲಕ ಪ್ರವಾಸಿ ಭಾರತ ತಂಡಕ್ಕೆ ಕಠಿಣ ಸವಾಲು ನೀಡಿದೆ. ಆಸ್ಟ್ರೇಲಿಯಾ ಪರ ಮನಮೋಹಕ ಬ್ಯಾಟಿಂಗ್‌ ಪ್ರದರ್ಶನದ ತೋರಿದ ಸ್ಟೀವನ್‌ ಸ್ಮಿತ್‌ ತಮ್ಮ ಟೆಸ್ಟ್‌ ವೃತ್ತಿ ಜೀವನದ 34ನೇ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಆಸ್ಟ್ರೇಲಿಯಾ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ನೆರವು ನೀಡಿದರು.

ಇಲ್ಲಿನ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಶುಕ್ರವಾರ ಬೆಳಿಗ್ಗೆ 311 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಆಸ್ಟ್ರೇಲಿಯಾ ತಂಡ, ಸ್ಟೀವನ್‌ ಸ್ಮಿತ್‌ ಶತಕದ ಬಲದಿಂದ ಪ್ರಥಮ ಇನಿಂಗ್ಸ್‌ನಲ್ಲಿ 122.4 ರನ್‌ಗಳಿಗೆ 474 ರನ್‌ಗಳನ್ನು ಕಲೆ ಹಾಕಿ ಆಲ್‌ಔಟ್‌ ಆಯಿತು. ಆಸ್ಟ್ರೇಲಿಯಾ ತಂಡದ ಪರ ಅತ್ಯುತ್ತಮ ಬ್ಯಾಟ್‌ ಮಾಡಿದ ಸ್ಟೀವನ್‌ ಸ್ಮಿತ್‌ ತಮ್ಮ ವೃತ್ತಿ ಜೀವನದ 34ನೇ ಟೆಸ್ಟ್‌ ಶತಕವನ್ನು ಪೂರ್ಣಗೊಳಿಸಿದರು.

IND vs AUS: ವಿರಾಟ್‌ ಕೊಹ್ಲಿ-ಸ್ಯಾಮ್‌ ಕೋನ್‌ಸ್ಟಸ್‌ ನಡುವೆ ಮಾತಿನ ಚಕಮಕಿ! ವಿಡಿಯೊ ವೈರಲ್‌

34ನೇ ಶತಕ ಸಿಡಿಸಿದ ಸ್ಟೀವನ್‌ ಸ್ಮಿತ್‌

ಶುಕ್ರವಾರ ಬೆಳಿಗ್ಗೆ ಅಜೇಯ 68 ರನ್‌ಗಳಿಂದ ಬ್ಯಾಟಿಂಗ್‌ ಮುಂದುವರಿಸಿದ ಸ್ಟೀವನ್‌ ಸ್ಮಿತ್‌ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಪ್ರಥಮ ಇನಿಂಗ್ಸ್‌ನಲ್ಲಿ ಆಡಿದ 197 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 13 ಬೌಂಡರಿಗಳೊಂದಿಗೆ 140 ರನ್‌ಗಳನ್ನು ಕಲೆ ಹಾಕಿ ಆತಿಥೇಯರ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಅಲ್ಲದೆ ನಾಯಕ ಪ್ಯಾಟ್‌ ಕಮಿನ್ಸ್‌ ಅವರ ಜೊತೆ ಮುರಿಯದ ಏಳನೇ ವಿಕೆಟ್‌ಗೆ 112 ರನ್‌ಗಳನ್ನು ಕಲೆ ಹಾಕಿದರು. ಈ ಜೋಡಿಯನ್ನು ಬೇರ್ಪಡಿಸಲು ಟೀಮ್‌ ಇಂಡಿಯಾ ಬೌಲರ್‌ಗಳು ಸಾಕಷ್ಟು ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಆದರೆ, ಅಂತಿಮವಾಗಿ ಈ ಜೋಡಿ ಮೂರಂಕಿ ಜೊತೆಯಾಟವನ್ನು ಕಲೆ ಹಾಕಿದ ಬಳಿಕ ಪ್ಯಾಟ್‌ ಕಮಿನ್ಸ್‌ ಅವರನ್ನು ರವೀಂದ್ರ ಜಡೇಜಾ ಔಟ್‌ ಮಾಡಿದರು.

ಅರ್ಧಶತಕ ಕಳೆದುಕೊಂಡ ಪ್ಯಾಟ್‌ ಕಮಿನ್ಸ್‌

ಸ್ಟೀವನ್‌ ಸ್ಮಿತ್‌ ಜೊತೆಗೆ ಶತಕದ ಜೊತೆಯಾಟವಾಡಿದ ನಾಯಕ ಪ್ಯಾಟ್‌ ಕಮಿನ್ಸ್‌ ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಅವರು ಆಡಿದ 63 ಎಸೆತಗಳಲ್ಲಿ 49 ರನ್‌ಗಳನ್ನು ಕಲೆ ಹಾಕಿದರು. ಆದರೆ, ಅರ್ಧಶತಕದಂಚಿನಲ್ಲಿ ಕಮಿನ್ಸ್‌ ವಿಕೆಟ್‌ ಒಪ್ಪಿಸಿದರು ಹಾಗೂ ಕೇವಲ ಒಂದು ರನ್‌ ಅಂತರದಲ್ಲಿ ಅರ್ಧಶತಕವನ್ನು ವಂಚಿತರಾದರು. ಆದರೆ, ಒಂದು ತುದಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಸ್ಮಿತ್‌ 140 ರನ್‌ಗಳನ್ನು ಕಲೆ ಹಾಕಿದ ಬಳಿಕ ಆಕಾಶ ದೀಪ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು.

ಭಾರತದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಜಸ್‌ಪ್ರೀತ್‌ ಬುಮ್ರಾ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ರವೀಂದ್ರ ಜಡೇಜಾ ಮೂಎರು ವಿಕೆಟ್‌ಗಳನ್ನು ಕಬಳಿಸಿದರು.

ಸ್ಕೋರ್‌ ವಿವರ (ಎರಡನೇ ದಿನ ಇನಿಂಗ್ಸ್‌ ಬ್ರೇಕ್‌)

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌ 122.4 ಓವರ್‌ಗಳಿಗೆ 474-10 (ಮಾರ್ನಸ್‌ ಲಾಬುಶೇನ್‌ 72, ಸ್ಯಾಮ್‌ ಕೋನ್‌ಸ್ಟಸ್‌ 60, ಉಸ್ಮಾನ್‌ ಖವಾಜ 57, ಸ್ಟೀವನ್‌ ಸ್ಮಿತ್‌ 140, ಪ್ಯಾಟ್‌ ಕಮಿನ್ಸ್‌ 49; ಜಸ್‌ಪ್ರೀತ್‌ ಬುಮ್ರಾ 99 ಕ್ಕೆ 4, ರವೀಂದ್ರ ಜಡೇಜಾ ಕ್ಕೆ 78 3)