Saturday, 4th January 2025

IND vs AUS: ಬ್ಯಾಟಿಂಗ್‌ ವೈಫಲ್ಯಕ್ಕೆ ಭಾರಿ ಬೆಲೆ ತೆತ್ತ ಭಾರತ, ಆಸ್ಟ್ರೇಲಿಯಾಗೆ ಭರ್ಜರಿ ಜಯ!

IND vs AUS: Australia won by 184 runs against India in 4th Test at Melbourne Cricket Ground

ಮೆಲ್ಬರ್ನ್‌: ಬ್ಯಾಟಿಂಗ್‌ ವೈಫಲ್ಯಕ್ಕೆ ಭಾರಿ ಬೆಲೆ ತೆತ್ತ ಭಾರತ ತಂಡ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ (IND vs AUS) ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 184 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದ ಸೋಲಿನಿಂದ ಟೀಮ್‌ ಇಂಡಿಯಾದ ಮೂರನೇ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಾದಿ ಅತ್ಯಂತ ಕಠಿಣವಾಗಿದೆ. ಇನ್ನು ನಾಲ್ಕನೇ ಟೆಸ್ಟ್‌ ಗೆಲುವಿನ ಮೂಲಕ ಆಸ್ಟ್ರೇಲಿಯಾ ತಂಡ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ 2-1 ಮುನ್ನಡೆಯನ್ನು ಪಡೆದಿದೆ.

ಇಲ್ಲಿನ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಕಳೆದ ಐದು ದಿನಗಳಿಂದ ನಡೆದಿದ್ದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಗೆಲುವಿಗಾಗಿ ಭಾರಿ ಪೈಪೋಟಿ ನಡೆದಿತ್ತು. ಆದರೆ, ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರುವ ಮೂಲಕ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಅದರಲ್ಲಿಯೂ ವಿಶೇಷವಾಗಿ ಆಲ್‌ರೌಂಡರ್‌ ಪ್ರದರ್ಶನ ತೋರಿದ ಪ್ಯಾಟ್‌ ಕಮಿನ್ಸ್‌ ಎರಡೂ ಇನಿಂಗ್ಸ್‌ಗಳಿಂದ 90 ರನ್‌ ಹಾಗೂ 6 ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು

.IND vs AUS: ಸೇನಾ ರಾಷ್ಟ್ರಗಳಲ್ಲಿ ಹೆಚ್ಚು ಟೆಸ್ಟ್‌ ವಿಕೆಟ್‌ ಪಡೆದ ಟಾಪ್‌ 5 ಭಾರತೀಯ ಬೌಲರ್ಸ್‌!

ಭಾರತಕ್ಕೆ 340 ರನ್‌ ಗುರಿ ನೀಡಿದ್ದ ಆಸ್ಟ್ರೇಲಿಯಾ

ಪಂದ್ಯದ ಅಂತಿಮ ದಿನವಾದ ಸೋಮವಾರ 9 ವಿಕೆಟ್‌ ಕಳೆದುಕೊಂಡು ದ್ವಿತೀಯ ಇನಿಂಗ್ಸ್‌ ಮುಂದುವರಿಸಿದ್ದ ಆಸ್ಟ್ರೇಲಿಯಾ ತಂಡ 83.4 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 234 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿನ ಮುನ್ನಡೆಯ ಸಹಾಯದಿಂದ ಆಸ್ಟ್ರೇಲಿಯಾ ತಂಡ ಪ್ರವಾಸಿ ಭಾರತ ತಂಡಕ್ಕೆ 340 ರನ್‌ಗಳ ಗುರಿಯನ್ನು ನೀಡಿತ್ತು.

ಭಾರತಕ್ಕೆ 340 ರನ್‌ ಗುರಿ ನೀಡಿದ್ದ ಆಸ್ಟ್ರೇಲಿಯಾ

ಪಂದ್ಯದ ಅಂತಿಮ ದಿನವಾದ ಸೋಮವಾರ 9 ವಿಕೆಟ್‌ ಕಳೆದುಕೊಂಡು ದ್ವಿತೀಯ ಇನಿಂಗ್ಸ್‌ ಮುಂದುವರಿಸಿದ್ದ ಆಸ್ಟ್ರೇಲಿಯಾ ತಂಡ 83.4 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 234 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿನ ಮುನ್ನಡೆಯ ಸಹಾಯದಿಂದ ಆಸ್ಟ್ರೇಲಿಯಾ ತಂಡ ಪ್ರವಾಸಿ ಭಾರತ ತಂಡಕ್ಕೆ 340 ರನ್‌ಗಳ ಗುರಿಯನ್ನು ನೀಡಿತ್ತು.

ಬಳಿಕ ಗುರಿ ಹಿಂಬಾಲಿಸಿದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್‌ ವಿಕೆಟ್‌ ನಷ್ಟವಿಲ್ಲದೆ 16 ಓವರ್‌ಗಳನ್ನು ಪೂರ್ಣಗೊಳಿಸಿತ್ತು ಹಾಗೂ ಡ್ರಾ ಮಾಡಿಕೊಳ್ಳಲು ಪ್ರಯತ್ನ ನಡೆಸಿತ್ತು. ಆದರೆ, 17ನೇ ಓವರ್‌ನಲ್ಲಿ ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌, ರೋಹಿತ್‌ ಶರ್ಮಾ ಮತ್ತು ಕೆಎಲ್‌ ರಾಹುಲ್‌ ಅವರನ್ನು ಔಟ್‌ ಮಾಡುವ ಮೂಲಕ ಭಾರತಕ್ಕೆ ಆರಂಭಿಕ ಆಘಾತ ನೀಡಿತ್ತು. ನಂತರ ಆಫ್‌ ಸ್ಟಂಪ್ ಹೊರಗಡೆ ಚೆಂಡನ್ನು ಹಾಕಿ ವಿರಾಟ್‌ ಕೊಹ್ಲಿಯನ್ನು ಮಿಚೆಲ್‌ ಸ್ಟಾರ್ಕ್‌ ಔಟ್‌ ಮಾಡಿದರು.

ಜೈಸ್ವಾಲ್‌-ಪಂತ್‌ ಜುಗಲ್‌ಬಂದಿ

ಭಾರತ ತಂಡ 33 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ವೇಳೆ ಜೊತೆಯಾದ ಯಶಸ್ವಿ ಜೈಸ್ವಾಲ್‌ ಮತ್ತು ರಿಷಭ್‌ ಪಂತ್‌ ಜೋಡಿ ಎರಡನೇ ಸೆಷನ್‌ ಅನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿತು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 88 ರನ್‌ಗಳನ್ನು ಕಲೆ ಹಾಕಿ ಭಾರತದ ಕಮ್‌ಬ್ಯಾಕ್‌ಗೆ ನೆರವು ನೀಡಿತ್ತು. ಆದರೆ, ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದ ರಿಷಭ್‌ ಪಂತ್‌ 104 ಎಸೆತಗಳಲ್ಲಿ 30 ರನ್‌ ಗಳಿಸಿದ್ದರು. ಆದರೆ, ಟ್ರಾವಿಸ್‌ ಹೆಡ್‌ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಬೌಂಡರಿ ಲೈನ್‌ನಲ್ಲಿ ಪಂತ್‌ ಕ್ಯಾಚಿತ್ತರು.

IND vs AUS: ವಿರಾಟ್‌ ಕೊಹ್ಲಿ ಬೇಡ, ರೋಹಿತ್‌ ಶರ್ಮಾ ವಿದಾಯ ಹೇಳಬೇಕೆಂದ ರವಿ ಶಾಸ್ತ್ರಿ!

ವಿವಾದಾತ್ಮಕವಾಗಿ ವಿಕೆಟ್‌ ಒಪ್ಪಿಸಿದ ಜೈಸ್ವಾಲ್‌

ಇನ್ನು ಪ್ರಥಮ ಇನಿಂಗ್ಸ್‌ನಂತೆ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಯಶಸ್ವಿ ಜೈಸ್ವಾಲ್‌ ಅವರು ಏಕಾಂಗಿ ಹೋರಾಟ ನಡೆಸಿದರು. ಅವರು ಆಡಿದ 208 ಎಸೆತಗಳಲ್ಲಿ 84 ರನ್‌ ಗಳಿಸಿದರು. ಆ ಮೂಲಕ ಭಾರತಕ್ಕೆ ಭರವಸೆ ಮೂಡಿಸಿದ್ದರು. ಆದರೆ, ನಾಯಕ ಪ್ಯಾಟ್‌ ಕಮಿನ್ಸ್‌ ಎಸೆತದಲ್ಲಿ ಮೂರನೇ ಅಂಪೈರ್‌ನ ವಿವಾದಾತ್ಮಕ ತೀರ್ಪಿಗೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಭಾರತ ತಂಡದ ಡ್ರಾ ಮಾಡಿಕೊಳ್ಳುವ ಕನಸು ನುಚ್ಚು ನೂರಾಯಿತು.

ಪ್ರಥಮ ಇನಿಂಗ್ಸ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ನಿತೀಶ್‌ ರೆಡ್ಡಿ ಸೇರಿದಂತೆ ರವೀಂದ್ರ ಜಡೇಜಾ, ಆಕಾಶ್‌ ದೀಪ್‌ ಸೇರಿದಂತೆ ಕೆಳ ಕ್ರಮಾಂಕದ ಆಟಗಾರರು ಬಹುಬೇಗ ಪೆವಿಲಿಯನ್‌ಗೆ ಸೇರಿದರು. ಆದರೆ, ವಾಷಿಂಗ್ಟನ್‌ ಸುಂದರ್‌ ಕೊನೆಯವರೆಗೂ ಕ್ರೀಸ್‌ನಲ್ಲಿ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾ ಪರ ಪ್ಯಾಟ್‌ ಕಮಿನ್ಸ್‌ ಹಾಗೂ ಮಿಚೆಲ್‌ ಸ್ಟಾರ್ಕ್‌ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ನೇಥನ್‌ ಲಯಾನ್‌ ಎರಡು ವಿಕೆಟ್‌ ಪಡೆದರು.

ಸ್ಕೋರ್‌ ವಿವರ

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌ನಲ್ಲಿ 122.4 ಓವರ್‌ಗಳಲ್ಲಿ 474-10 (ಸ್ಟೀವನ್‌ ಸ್ಮಿತ್‌ 140, ಮಾರ್ನಸ್‌ ಲಾಬುಶೇನ್‌ 72, ಉಸ್ಮಾನ್‌ ಖವಾಜ 57, ಸ್ಯಾಮ್‌ ಕೋನ್‌ಸ್ಟಸ್‌ 60; ಜಸ್‌ಪ್ರೀತ್‌ ಬುಮ್ರಾ 99ಕ್ಕೆ 4, ರವೀಂದ್ರ ಜಡೇಜಾ 78ಕ್ಕೆ 3)

ಭಾರತ: ಪ್ರಥಮ ಇನಿಂಗ್ಸ್‌ನಲ್ಲಿ 119.3 ಓವರ್‌ಗಳಿಗೆ 369-10 (ನಿತೀಶ್‌ ರೆಡ್ಡಿ 114, ಯಶಸ್ವಿ ಜೈಸ್ವಾಲ್‌ 82, ವಾಷಿಂಗ್ಟನ್‌ ಸುಂದರ್‌ 50; ಪ್ಯಾಟ್‌ ಕಮಿನ್ಸ್‌ 89ಕ್ಕೆ 3, ಸ್ಕಾಟ್‌ ಬೋಲೆಂಡ್‌ 57ಕ್ಕೆ 3)

ಆಸ್ಟ್ರೇಲಿಯಾ: ದ್ವಿತೀಯ ಇನಿಂಗ್ಸ್‌ನಲ್ಲಿ 84.3 ಓವರ್‌ಗಳಿಗೆ 234-10 (ಮಾರ್ನಸ್‌ ಲಾಬುಶೇನ್‌ 70, ನೇಥನ್‌ ಲಯಾನ್‌ 41, ಪ್ಯಾಟ್‌ ಕಮಿನ್ಸ್‌ 41; ಜಸ್‌ಪ್ರೀತ್‌ ಬುಮ್ರಾ 57ಕ್ಕೆ 5, ಮೊಹಮ್ಮದ್‌ ಸಿರಾಜ್‌ 70ಕ್ಕೆ 3)

ಭಾರತ: ದ್ವಿತೀಯ ಇನಿಂಗ್ಸ್‌ನಲ್ಲಿ 79.1 ಓವರ್‌ಗಳಿಗೆ 155-10 (ಯಶಸ್ವಿ ಜೈಸ್ವಾಲ್‌ 84, ರಿಷಭ್‌ ಪಂತ್‌ 30; ಪ್ಯಾಟ್‌ ಕಮಿನ್ಸ್‌ 28ಕ್ಕೆ 3, ಸ್ಕಾಟ್‌ ಬೋಲೆಂಡ್‌ 39ಕ್ಕೆ 3)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಪ್ಯಾಟ್‌ ಕಮಿನ್ಸ್‌