ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಐದನೇ ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾದ ಯುವ ಆರಂಭಿಕ ಸ್ಯಾಮ್ ಕೊನ್‌ಸ್ಟಸ್‌ಗೆ ಭಾರತೀಯ ಆಟಗಾರರಿಂದ ಬೆದರಿಕೆ ಇದೆ ಎಂದು ಆತಿಥೇಯರ ತಂಡದ ಹೆಡ್ ಕೋಚ್ ಆಂಡ್ರೆ ಮೆಕ್‌ಡೊನಾಲ್ಡ್ ಗಂಭೀರ ಆರೋಪ ಮಾಡಿದ್ದಾರೆ.
ಮೊದಲನೇ ದಿನದಾಟದ ಅಂತ್ಯದಲ್ಲಿ ಆಸ್ಟ್ರೇಲಿಯಾದ ಪ್ರಥಮ ಇನಿಂಗ್ಸ್‌ನ ಮೂರನೇ ಓವರ್‌ನ ಕೊನೆಯ ಎಸೆತದ ವೇಳೆ ಭಾರತದ ನಾಯಕ ಜಸ್‌ಪ್ರೀತ್ ಬುಮ್ರಾ ಹಾಗೂ ಸ್ಯಾಮ್ ಕೊನ್‌ಸ್ಟಸ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಫೀಲ್ಡ್ ಅಂಪೈರ್‌ಗಳು ಈ ಇಬ್ಬರನ್ನು ಸಮಾಧಾನ ಮಾಡಿದ್ದರು. ನಂತರ ಕೊನೆಯ ಎಸೆತದಲ್ಲಿ ಉಸ್ಮಾನ್ ಖವಾಜ ಅವರನ್ನು ಬುಮ್ರಾ ಔಟ್ ಮಾಡಿದ್ದರು.
ನಂತರ ಜಸ್‌ಪ್ರೀತ್ ಬುಮ್ರಾ ನಾನ್‌ಸ್ಟ್ರೈಕ್‌ನಲ್ಲಿ ನಿಂತಿದ್ದ ಸ್ಯಾಮ್ ಕೊನ್‌ಸ್ಟಸ್ ಅವರನ್ನು ಗುರಿಯಾಗಿಸಿಕೊಂಡು ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಬುಮ್ರಾ ಜತೆಗೆ ಟೀಮ್ ಇಂಡಿಯಾ ಆಟಗಾರರು ಕೂಡ ಕೊನ್‌ಸ್ಟಸ್ ಅವರ ಸಮೀಪ ಬಂದು ಸಿಕ್ಕಾಪಟ್ಟೆ ಸಂಭ್ರಮಿಸಿದ್ದರು. ಈ ವೇಳೆ ಆಸೀಸ್ ಆಟಗಾರ ತುಟಿಕ್ ಪಿಟಿಕ್ ಎನ್ನದೆ ಡ್ರೆಸ್ಸಿಂಗ್ ಕೊಠಡಿಗೆ ಮರಳಿದ್ದರು. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಭಾರತೀಯ ಆಟಗಾರರಿಂದ ಕೊನ್‌ಸ್ಟಸ್‌ಗೆ ಬೆದರಿಕೆ
ಈ ಘಟನೆ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾ ಹೆಡ್ ಕೋಚ್ ಆಂಡ್ರೆ ಮೆಕ್‌ಡೊನಾಲ್ಡ್, “ಅವರು ಸರಿಯಾಗಿ ಇದ್ದಾರೆಯೇ ಎಂಬುದಷ್ಟೇ ಸ್ಯಾಮ್ ಕೊನ್‌ಸ್ಟಸ್ ಮತ್ತು ನಮ್ಮ ನಡುವಣ ಸಂಭಾಷಣೆಯಾಗಿತ್ತು. ಆದರೆ, ಭಾರತೀಯ ಆಟಗಾರರು ಸಂಭ್ರಮಿಸಿದ ರೀತಿ ಸ್ವಲ್ಪ ಬೆದರಿಕೆ ಹಾಕುವಂತಿತ್ತು. ಇದು ಖಂಡಿತವಾಗಿಯೂ ಆಟದ ನೀತಿ ಹಾಗೂ ನಿಯಮಗಳ ಅಡಿಯಲ್ಲಿದೆ. ಈ ಕಾರಣದಿಂದಲೇ ನಾವು ಯಾವುದೇ ಆರೋಪವನ್ನು ಮಾಡಿಲ್ಲ,” ಎಂದು ಹೇಳಿದ್ದಾರೆ.
Konstas taught a life lesson by Bumrah & Kohli there. Never mess with your seniors 🇮🇳🥶 #AUSvIND pic.twitter.com/qLxCdDawNc
— Farid Khan (@_FaridKhan) January 3, 2025
ಯುವ ಆಟಗಾರನ ಮಾನಸಿಕ ಸ್ಥಿತಿ ತಿಳಿದುಕೊಳ್ಳುವುದು ನಮ್ಮ ಕರ್ತವ್ಯ
ಭಾರತದ ನಡುವಳಿಕೆ ಆಟದ ಮಿತಿಯಲ್ಲಿತ್ತು. ಆದರೆ, ಯುವ ಆಟಗಾರನ ಮಾನಸಿಕ ಯೋಗಕ್ಷೇಮದ ಬಗ್ಗೆ ಮೆಕ್‌ಡೊನಾಲ್ಡ್ ಕಳವಳ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಡೆಬ್ಯೂಟಂಟ್ ಆಟಗಾರನ ಸಮೀಪದಲ್ಲಿ ಭಾರತ ಆಟಗಾರರು, ಉಸ್ಮಾನ್ ಖವಾಜ ಅವರ ವಿಕೆಟ್ ಅನ್ನು ಸಂಭ್ರಮಿಸಿದ ನಂತರ ಈ ಘಟನೆ ಸಂಭವಿಸಿತ್ತು. ಆದರೆ, ಆಸೀಸ್ ಕೋಚ್‌ಗೆ ಯುವ ಆಟಗಾರನ ಮಾನಸಿಕ ಅಂಶಗಳ ಮೇಲೆ ಹೆಚ್ಚಿನ ಕಾಳಜಿ ಇದೆ.
“ಎದುರಾಳಿ ತಂಡದ ಆಟಗಾರರು, ನಾನ್‌ಸ್ಟ್ರೈಕರ್ ಸುತ್ತು ಸೇರಿಕೊಂಡು ಆ ರೀತಿ ಸಂಭ್ರಮಿಸಿದ ಬಳಿಕ ಯುವ ಆಟಗಾರನ ಮಾನಸಿಕ ಸ್ಥಿತಿ ಯಾವ ರೀತಿ ಇದೆ ಹಾಗೂ ಮುಂದಿನ ದಿನ ಅವರ ಪ್ರದರ್ಶನದ ಮೇಲೆ ಇದು ಏನಾದರೂ ಪರಿಣಾಮ ಬೀರಲಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ,” ಎಂದು ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
ಭಾರತ ತಂಡಕ್ಕೆ 145 ರನ್ ಮುನ್ನಡೆ
ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 181 ರನ್‌ಗಳಿಗೆ ಆಲ್‌ಔಟ್ ಆದ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 141 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ 145 ರನ್ ಮುನ್ನಡೆ ಪಡೆದಿದೆ. ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಕ್ರೀಸ್‌ನಲ್ಲಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ʻಜಸ್‌ಪ್ರೀತ್ ಬುಮ್ರಾ ಇಲ್ಲದೆ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆʼ-ಸುನೀಲ್ ಗವಾಸ್ಕರ್!