Tuesday, 7th January 2025

IND vs AUS: ʻಅದೇ ರಾಗ ಅದೇ ತಾಳʼ-ವಿರಾಟ್‌ ಕೊಹ್ಲಿ ವೈಫಲ್ಯದ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಕಿಡಿ!

IND vs AUS: 'He has an unfortunate weakness outside off'-Sanjay Manjrekar on Virat Kohli's dismissal

ಅಡಿಲೇಡ್‌: ಆಸ್ಟ್ರೇಲಿಯಾ ವಿರುದ್ದ ಇಲ್ಲಿನ ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಿಂಕ್‌ ಬಾಲ್‌ ಟೆಸ್ಟ್‌ ತಂಡದಲ್ಲಿ (IND vs AUS) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ನಿರೂಪಕ ಸಂಜಯ್‌ ಮಾಂಜ್ರೇಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಆರಂಭವಾದ ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ವಿರಾಟ್‌ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಅವರು ಮಿಚೆಲ್‌ ಸ್ಟಾರ್ಕ್‌ ಅವರ ಎಸೆತದಲ್ಲಿ ಸ್ಟೀವನ್‌ ಸ್ಮಿತ್‌ಗೆ ಕ್ಯಾಚ್‌ ಕೊಟ್ಟು ವಿಕೆಟ್‌ ಒಪ್ಪಿಸಿದರು. ಅಂದಹಾಗೆ ಆಫ್‌ ಸ್ಟಂಪ್‌ ಹೊರಗಡೆ ಬಂದ ಎಸೆತವನ್ನು ಅನಗತ್ಯವಾಗಿ ಆಡಲು ಮುಂದಾಗಿ ವಿರಾಟ್‌ ಕೊಹ್ಲಿ ಕೈ ಸುಟ್ಟುಕೊಂಡರು.

ಯಶಸ್ವಿ ಜೈಸ್ವಾಲ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ ಹೊರತಾಗಿಯೂ ಕೆಎಲ್‌ ರಾಹುಲ್‌(37 ರನ್‌) ಹಾಗೂ ಶುಭಮನ್‌ ಗಿಲ್‌ (31 ರನ್‌) ಅವರ ಬ್ಯಾಟಿಂಗ್‌ ಬಲದಿಂದ ಭಾರತ ತಂಡ ಉತ್ತಮ ಆರಂಭ ಪಡೆದಿತ್ತು. ಆದರೆ, ರಾಹುಲ್‌ ವಿಕೆಟ್‌ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದ ವಿರಾಟ್‌ ಕೊಹ್ಲಿ 8 ಎಸೆತಗಳಲ್ಲಿ 7 ರನ್‌ ಗಳಿಸಿದ್ದರು. ಆದರೆ, 21 ಓವರ್‌ನ ಮೊದಲನೇ ಎಸೆತದಲ್ಲಿ ಮಿಚೆಲ್‌ ಸ್ಟಾರ್ಕ್‌ ಎಸೆತ ಔಟ್‌ ಸೈಡ್‌ ಆಫ್‌ ದಿ ಸ್ಟಂಪ್‌ ಎಸೆತವನ್ನು ಸುಮ್ಮನೆ ಕೆಣಿಕಿದ ವಿರಾಟ್‌ ಕೊಹ್ಲಿ, ಸ್ಲಿಪ್‌ನಲ್ಲಿದ್ದ ಸ್ಟೀವನ್‌ ಸ್ಮಿತ್‌ಗೆ ಕ್ಯಾಚ್‌ ಕೊಟ್ಟರು.

ವಿರಾಟ್‌ ಕೊಹ್ಲಿ ಅವರು ಈ ರೀತಿ ಔಟ್‌ ಆಗಿರುವುದು ಇದೇ ಮೊದಲೇನಲ್ಲ. ಅವರು ಪರ್ತ್‌ ಟೆಸ್ಟ್‌ ಪ್ರಥಮ ಇನಿಂಗ್ಸ್‌ನಲ್ಲಿಯೂ ಇದೇ ರೀತಿ ಕ್ಯಾಚ್‌ ಕೊಟ್ಟಿದ್ದರು. ಅಂದ ಹಾಗೆ ವಿರಾಟ್‌ ಕೊಹ್ಲಿಗೆ ಔಟ್‌ ಸೈಡ್‌ ಆಫ್‌ ದಿ ಸ್ಟಂಪ್‌ ಮೇಲೆ ವೀಕ್ನೆಸ್‌ ಇದೆ. ಈ ಹಿಂದೆ ಸಾಕಷ್ಟು ಬಾರಿ ಅವರು ಆಫ್‌ ಸ್ಟಂಪ್‌ ಹೊರಗಡೆ ಎಸೆತಗಳನ್ನು ಆಡಲು ಪ್ರಯತ್ನಿಸಿ ವಿಕೆಟ್‌ ಕೈಚೆಲ್ಲಿದ್ದಾರೆ.

ವಿರಾಟ್‌ ಕೊಹ್ಲಿ ಔಟ್‌ ಆದ ಹಾದಿಯ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಬೇಸರ

ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ನಿರೂಪಕ ಸಂಜಯ್‌ ಮಾಂಜ್ರೇಕರ್‌ ಅವರು ವಿರಾಟ್‌ ಕೊಹ್ಲಿ ಅವರ ದೌರ್ಬಲ್ಯದ ಬಗ್ಗೆ ಮಾತನಾಡಿದ್ದಾರೆ ಹಾಗೂ ವಿರಾಟ್‌ ಕೊಹ್ಲಿ ಪದೇ-ಪದೆ ಇದೇ ರೀತಿ ವಿಕೆಟ್‌ ಒಪ್ಪಿಸುತ್ತಿದ್ದಾರೆಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

“ವಿರಾಟ್‌ ಕೊಹ್ಲಿ ಅವರ ಸರಾಸರಿ 48ಕ್ಕೆ ಇಳಿಯುತ್ತಿರುವುದಕ್ಕೆ ಪ್ರಮುಖ ಕಾರಣವೇನೆಂದರೆ ಅವರ ಅನಿರೀಕ್ಷಿತ ವೀಕ್ನೆಸ್‌ ಔಟ್‌ ಸೈಡ್‌ ಆಫ್‌. ಆದರೆ, ಹೆಚ್ಚು ನಿರ್ಣಾಯಕವಾಗಿರುವುದನ್ನು ನಿರ್ವಹಿಸಲು ಅವರು ಬೇರೆ ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ,” ಎಂದು ಸಂಜಯ್‌ ಮಾಂಜ್ರೇಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತ ತಂಡ 180ಕ್ಕೆ ಆಲ್‌ಔಟ್‌

ಮೊದಲನೇ ದಿನ ಮಿಚೆಲ್‌ ಸ್ಟಾರ್ಕ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 44.1 ಓವರ್‌ಗಳಿಗೆ 180 ರನ್‌ಗಳಿಗೆ ಆಲ್‌ಔಟ್‌ ಆಯಿತು. ಭಾರತ ತಂಡದ ಪರ 42 ರನ್‌ ಗಳಿಸದ ನಿತೀಶ್‌ ರೆಡ್ಡಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದಾರೆ. ಇವರ ಜೊತೆಗೆ ಕೆಎಲ್‌ ರಾಹುಲ್‌ 37 ರನ್‌ ಹಾಗೂ ಶುಭಮನ್‌ ಗಿಲ್‌ 31 ರನ್‌ ಗಳಿಸಿದರು.

ಈ ಸುದ್ದಿಯನ್ನು ಓದಿ: IND vs AUS: ವಿರಾಟ್‌ ಕೊಹ್ಲಿ ಅಲ್ಲ, ಭಾರತಕ್ಕೆ ಯಶಸ್ವಿ ಜೈಸ್ವಾಲ್‌ ಎಕ್ಸ್‌ ಫ್ಯಾಕ್ಟರ್‌ ಎಂದ ರವಿಶಾಸ್ತ್ರಿ!