ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯ (IND vs AUS) ಎಂದ ಮೇಲೆ ಆಟಗಾರರ ಸ್ಲೆಡ್ಜಿಂಗ್ ಇದ್ದೇ ಇರುತ್ತದೆ. ಅದರಂತೆ ಇಲ್ಲಿನ ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಗುರುವಾರ ಆರಂಭವಾದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಆರಂಭಿಕ ದಿನ ನಡೆದಿದೆ. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಡೆಬ್ಯೂಟಂಟ್ ಸ್ಯಾಮ್ ಕೋನ್‌ಸ್ಟಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕಾಪಟ್ಟೆ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ನಿರ್ಧರಿಸಿದರು. ಆಸ್ಟ್ರೇಲಿಯಾ ತಂಡದ ಆಡುವ ಹನ್ನೊಂದರಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಆರಂಭಿಕ ಬ್ಯಾಟ್ಸ್‌ಮನ್ ನೇಥನ್ ಮೆಕ್‌ಸ್ವೀನಿ ಬದಲಿಗೆ 19ರ ವಯಸ್ಸಿನ ಸ್ಯಾಮ್ ಕೋನ್‌ಸ್ಟಸ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಗಾಯಾಳು ಜಾಶ್ ಹೇಝಲ್‌ವುಡ್ ಬದಲಿಗೆ ಸ್ಕಾಟ್ ಬೋಲೆಂಡ್ ಪ್ಲೇಯಿಂಗ್ XIಗೆ ಸೇರ್ಪಡೆಯಾದರು.
ಕೊಹ್ಲಿ-ಕೋನ್‌ಸ್ಟಸ್ ನಡುವೆ ಮಾತಿನ ಚಕಮಕಿ
ಆಸ್ಟ್ರೇಲಿಯಾ ಇನಿಂಗ್ಸ್‌ನ 10ನೇ ಓವರ್‌ನ ನಂತರ ಎಂಸಿಜಿಯಲ್ಲಿನ ವಾತಾವರಣ ಸ್ವಲ್ಪ ಬಿಸಿಯಾಯಿತು. ಸ್ಯಾಮ್ ಕಾನ್‌ಸ್ಟಸ್ ಮತ್ತು ವಿರಾಟ್ ಕೊಹ್ಲಿ ನಡುವೆ ತೀವ್ರ ವಾಗ್ವಾದ ನಡೆಯಿತು. ಪಿಚ್‌ನ ಮಧ್ಯದಲ್ಲಿ ನಡೆದುಕೊಂಡು ಬರುತ್ತಿದ್ದ ಸ್ಯಾಮ್ ಕೋನ್‌ಸ್ಟಸ್ ಹಾಗೂ ಎದುರಿಗೆ ಬರುತ್ತಿದ್ದ ವಿರಾಟ್ ಕೊಹ್ಲಿ ಪರಸ್ಪರ ಡಿಕ್ಕಿ ಹೊಡೆದುಕೊಂಡರು. ಈ ವಿಡಿಯೊದಲ್ಲಿ ಗಮನಿಸಿದರೆ ವಿರಾಟ್ ಕೊಹ್ಲಿಯೇ ಉದ್ದೇಶ ಪೂರ್ವಕವಾಗಿ ಡಿಕ್ಕಿ ಹೊಡೆದ ರೀತಿ ಕಾಣುವಂತಿತ್ತು. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್‌ಕೋಸ್ಟಸ್ ನಡುವೆ ಮಾತಿನ ಚಕಮಕಿ ನಡೆಯಿತು. ಇದರ ನಡುವೆ ಮಧ್ಯ ಪ್ರವೇಶಿಸಿದ ಉಸ್ಮಾನ್ ಖವಾಜ ಪರಿಸ್ಥಿತಿಯನ್ನು ಸರಿದೂಗಿಸಿದರು ಹಾಗೂ ಅಂಪೈರ್ ಕೂಡ ಇಬ್ಬರೂ ಆಟಗಾರರನ್ನು ಶಾಂತಗೊಳಿಸಿದರು.
Virat Kohli's agression after a long time is very pleasure to see. look the fear of that young australian player. 🤯🤯#ViratKohli𓃵 || @imVkohli|| #BoxingDay pic.twitter.com/Ef0TpiQgHR
— Pragadees 🇮🇳 (@pragadees20O6) December 26, 2024
ಚೊಚ್ಚಲ ಅರ್ಧಶತಕ ಸಿಡಿಸಿದ ಸ್ಯಾಮ್ ಕೋನ್‌ಸ್ಟಸ್
ಈ ಪಂದ್ಯದಲ್ಲಿ ಸ್ಯಾಮ್ ಕೋನ್‌ಸ್ಟಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಎದುರಿಸಿದ ಆರಂಭಿಕ 18 ಎಸೆತಗಳಲ್ಲಿ ಅವರ ಬ್ಯಾಟ್‌ನಿಂದ ಕೇವಲ 2 ರನ್ ಮಾತ್ರ ಮೂಡಿಬಂದಿತ್ತು. ಅದರಲ್ಲಿಯೂ ವಿಶೇಷವಾಗಿ ಜಸ್‌ಪ್ರೀತ್ ಬುಮ್ರಾ ಅವರ ಎಸೆತಗಳನ್ನು ಡೆಬ್ಯೂಟಂಟ್ ಬ್ಯಾಟರ್ ಸಮರ್ಥವಾಗಿ ಎದುರಿಸಿದ್ದರು. ಬುಮ್ರಾ ಅವರ ನಾಲ್ಕನೇ ಓವರ್‌ನಲ್ಲಿ ಕೋನ್‌ಸ್ಟಸ್ ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 14 ರನ್‌ಗಳು ಬಂದವು. 11ನೇ ಓವರ್‌ನಲ್ಲಿ ಜಸ್‌ಪ್ರೀತ್ ಬುಮ್ರಾ 18 ರನ್‌ಗಳನ್ನು ಕೊಟ್ಟರು. ಇದರಲ್ಲಿ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿ ಸೇರಿದ್ದವು.
ಸ್ಯಾಮ್ ಕೋನ್‌ಸ್ಟಸ್ ಅವರು 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರ ಚೊಚ್ಚಲ ಇನಿಂಗ್ಸ್‌ನಲ್ಲಿ 5 ಮನಮೋಹಕ ಬೌಂಡರಿಗಳು ಹಾಗೂ ಎರಡು ಸಿಕ್ಸರ್‌ಗಳು ಒಳಗೊಂಡಿವೆ. ಆದರೆ, 60 ರನ್‌ಗಳ ಇನಿಂಗ್ಸ್ ಆಡಿದ ಬಳಿಕ ಅವರು ತಮ್ಮ ಚೊಚ್ಚಲ ಟೆಸ್ಟ್ ಇನಿಂಗ್ಸ್ ಅನ್ನು ಮುಗಿಸಿದರು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವರಿಗೆ ಆಸೀಸ್ ಬ್ಯಾಟರ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ವಿಕೆಟ್ ಒಪ್ಪಿಸಿದರೂ ಆಸ್ಟ್ರೇಲಿಯಾ ಪರ ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸಿದ ಎರಡನೇ ಕಿರಿಯ ಆಟಗಾರ ಎನಿಸಿಕೊಂಡರು. 1953 ರಲ್ಲಿ ಇಯಾನ್ ಕ್ರೇಗ್ 17 ವರ್ಷ ಮತ್ತು 240 ದಿನಗಳ ವಯಸ್ಸಿನಲ್ಲಿ ಫಿಫ್ಟಿ ಬಾರಿಸಿದ್ದರು.
ಉತ್ತಮ ಆರಂಭ ಪಡೆದಿರುವ ಆಸ್ಟ್ರೇಲಿಯಾ
ಇನ್ನು ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭವನ್ನು ಪಡೆದಿದೆ. ಸ್ಯಾಮ್ ಕೋನ್‌ಸ್ಟಸ್ (60 ರನ್) ಹಾಗೂ ಉಸ್ಮಾನ್ ಖವಾಜ (50) ಅರ್ಧಶತಕಗಳನ್ನು ಬಾರಿಸಿದರು. ಅಂದ ಹಾಗೆ 35 ಓವರ್‌ಗಳಿಗೆ ಆಸ್ಟ್ರೇಲಿಯಾ ಒಂದು ವಿಕೆಟ್ ನಷ್ಟಕ್ಕೆ 134 ರನ್‌ಗಳನ್ನು ಗಳಿಸಿದೆ. ಕ್ರೀಸ್‌ನಲ್ಲಿ ಉಸ್ಮಾನ್ ಖವಾಜ (50) ಹಾಗೂ ಮಾರ್ನಸ್ ಲಾಬುಶೇನ್ (21*) ಇದ್ದಾರೆ.
ಈ ಸುದ್ದಿಯನ್ನು ಓದಿ: ICC Test Rankings: ಅಗ್ರಸ್ಥಾನ ಕಳೆದುಕೊಂಡ ಜಸ್‌ಪ್ರೀತ್ ಬುಮ್ರಾ