ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಸ್ಲೆಡ್ಜ್ ಮಾಡಿದ್ದ ಟೀಮ್ ಇಂಡಿಯಾ ಆರಂಭಿಕ ಯಶಸ್ವಿ ಜೈಸ್ವಾಲ್ ಅವರನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಲ್‌ಸ್ಟೈರ್ ಕುಕ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಈ ಪಂದ್ಯದಲ್ಲಿ (IND vs AUS) ಯಶಸ್ವಿ ಜೈಸ್ವಾಲ್ ಅವರು, ದ್ವಿತೀಯ ಇನಿಂಗ್ಸ್‌ನಲ್ಲಿ 161 ರನ್‌ಗಳನ್ನು ಕಲೆ ಹಾಕಿದ್ದರು ಹಾಗೂ ಈ ಪಂದ್ಯದಲ್ಲಿ ಭಾರತ ತಂಡ 295 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು.
ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರು, ಮಿಚೆಲ್ ಸ್ಟಾರ್ಕ್ ಅವರಿಗೆ ಸ್ಕೈರ್ ಲೆಗ್‌ನಲ್ಲಿ ಬೌಂಡರಿ ಬಾರಿಸಿದ್ದರು. ನಂತರ ಮುಂದಿನ ಎಸೆತವನ್ನು ಜೈಸ್ವಾಲ್ ಆಡುವಲ್ಲಿ ವಿಫಲರಾಗಿದ್ದರು. ನಂತರ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಬ್ಯಾಕ್ ಫುಟ್‌ನಲ್ಲಿ ಸೊಗಸಾಗಿ ಡಿಫೆನ್ಸ್ ಮಾಡಿದ್ದರು ಹಾಗೂ ಮಿಚೆಲ್ ಸ್ಟಾರ್ಕ್‌ಗೆ ʻಚೆಂಡು ನಿಧಾನವಾಗಿ ಬರುತ್ತಿದೆʼ ಎಂದು ಹೇಳುವ ಮೂಲಕ ಸ್ಲೆಡ್ಜ್ ಮಾಡಿದ್ದರು. ಇದನ್ನು ಗಮನಿಸಿದ ಸ್ಟಾರ್ಕ್ ಸ್ಲೈಲ್ ಕೊಟ್ಟು ಹಿಂತಿರುಗಿದರು.
ಟಿಎನ್‌ಟಿ ಸ್ಪೋರ್ಟ್ಸ್ ಜತೆ ಮಾತನಾಡಿದ ಆಲ್‌ಸ್ಟೈರ್ ಕುಕ್, “ಯಶಸ್ವಿ ಜೈಸ್ವಾಲ್ ಅವರು 100 ರನ್ ಕೂಡ ಗಳಿಸಿರಲಿಲ್ಲ ಅಥವಾ ದೊಡ್ಡ ಮೊತ್ತವನ್ನು ಕೂಡ ಗಳಿಸಿರಲಿಲ್ಲ. ಆದರೂ ಈ ವೇಳೆ ಅವರು ನಿಮ್ಮ ಎಸೆತ ತುಂಬಾ ನಿಧಾನವಾಗಿ ಬರುತ್ತಿದೆ ಎಂದು ಹೇಳುವ ಮೂಲಕ ಮಿಚೆಲ್ ಸ್ಟಾರ್ಕ್ ಅವರನ್ನು ಸ್ಲೆಡ್ಜ್ ಮಾಡಿದ್ದರು,” ಎಂದು ತಿಳಿಸಿದ್ದಾರೆ.
“ನಾನು ಕೂಡ ಮಿಚೆಲ್ ಸ್ಟಾರ್ಕ್ ಅವರನ್ನು ಎದುರಿಸಿದ್ದೇನೆ ಹಾಗೂ ಅವರ ಎಸೆತ ನಿಧಾನವಾಗಿ ಬರುವುದಿಲ್ಲ. ಒಂದು ವೇಳೆ ಅವರು ನಿಧಾನಗವಾಗಿ ಬೌಲ್ ಮಾಡುತ್ತಿದ್ದರೆ, ನಾವು ಏನೂ ಮಾತನಾಡದೆ ಬಾಯಿ ಮುಚ್ಚಿಕೊಂಡು ಇರುತ್ತೇವೆ. ಆದರೆ, ಯಶಸ್ವಿ ಜೈಸ್ವಾಲ್ ಅವರ ಧೈರ್ಯವನ್ನು ಮೆಚ್ಚಲೇಬೇಕು,” ಎಂದು ಇಂಗ್ಲೆಂಡ್ ಮಾಜಿ ಆರಂಭಿಕ ಶ್ಲಾಘಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಕ್ಲಾಸಿಕ್ ಬ್ಯಾಟ್ಸ್‌ಮನ್
ಇಂಗ್ಲೆಂಡ್ ವಿರುದ್ದ ಈ ವರ್ಷದ ಆರಂಭದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಅವರು ಎರಡು ಶತಕಗಳು ಹಾಗೂ ಮೂರು ಅರ್ಧಶತಕದ ಮೂಲಕ 712 ರನ್‌ಗಳನ್ನು ಕಲೆ ಹಾಕಿದರು. ಇದೀಗ ಪರ್ತ್ ಟೆಸ್ಟ್‌ನಲ್ಲಿಯೂ ಯಶಸ್ವಿ ಜೈಸ್ವಾಲ್ ಅವರು ಸೆಂಚುರಿ ಬಾರಿಸಿದ್ದರು. ಯಶಸ್ವಿ ಜೈಸ್ವಾಲ್ ಅವರನ್ನು ಆಲ್‌ಸ್ಟೈರ್ ಕುಕ್ ಕ್ಲಾಸಿಕ್ ಬ್ಯಾಟ್ಸ್‌ಮನ್ ಎಂದು ಬಣ್ಣಿಸಿದ್ದಾರೆ.
“ಇಂಗ್ಲೆಂಡ್ ತಂಡಕ್ಕಿಂತ ಆಸ್ಟ್ರೇಲಿಯಾ ತಂಡದ ವಿರುದ್ಧ ಯಶಸ್ವಿ ಜೈಸ್ವಾಲ್ ತಮ್ಮ ಬ್ಯಾಟಿಂಗ್ ಅನ್ನು ಆನಂದಿಸುತ್ತಿದ್ದಾರೆ ಹಾಗೂ ಅವರು ಅಷ್ಟೊಂದು ಸಂಭ್ರಮಿಸುತ್ತಿಲ್ಲ. ಕಳೆದ 15 ಟೆಸ್ಟ್ ಪಂದ್ಯಗಳಿಂದ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ. ಅವರು ಈ ರೀತಿಯ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಾರೆಂದು ಯಾರೂ ನಂಬಿರಲಿಲ್ಲ. ಆಸ್ಟ್ರೇಲಿಯಾ ಬ್ಯಾಟಿಂಗ್‌ಗೆ ಅತ್ಯಂತ ಕಠಿಣ ಸ್ಥಳವಾಗಿದೆ. ಈ ಕಾರಣದಿಂದಲೇ ಯಶಸ್ವಿ ಜೈಸ್ವಾಲ್ ಕ್ಲಾಸ್ ಆಟಗಾರ,” ಎಂದು ಇಂಗ್ಲೆಂಡ್ ಮಾಜಿ ನಾಯಕ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ದ್ವಿತೀಯ ಟೆಸ್ಟ್‌ಗೆ ಭಾರತ ಆಡುವ ಬಳಗದ ಆಯ್ಕೆಯೇ ಜಟಿಲ