ನವದೆಹಲಿ: ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ಆಡಿಲ್ಲವಾಗಿದ್ರೆ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ (IND vs AUS) ಸರಣಿಯಲ್ಲಿ 0-5 ಅಂತರದಲ್ಲಿ ಕ್ಲೀನ್ ಸ್ವೀಪ್ ಆಘಾತವನ್ನು ಅನುಭವಿಸಿರುತ್ತಿತ್ತು ಎಂದು ಭಾರತೀಯ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಎರಡೂ ತಂಡಗಳ ಪೈಕಿ ಜಸ್ಪ್ರೀತ್ ಬುಮ್ರಾ ಶ್ರೇಷ್ಠ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ ಬೌಲರ್ ಎನಿಸಿಕೊಂಡಿದ್ದರು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಪರ್ತ್ ಟೆಸ್ಟ್ನಲ್ಲಿ 8 ವಿಕೆಟ್ ಕಬಳಿಸುವ ಮೂಲಕ ಭಾರತ ತಂಡದ 295 ರನ್ಗಳ ಗೆಲುವಿಗೆ ನೆರವಾಗಿದ್ದ ಜಸ್ಪ್ರೀತ್ ಬುಮ್ರಾ, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ನಂತರ ಬ್ರಿಸ್ಬೇನ್ (9-94) ಮತ್ತು ಮೆಲ್ಬರ್ನ್ (9-156)ನಲ್ಲಿ ತಲಾ 9 ವಿಕೆಟ್ಗಳನ್ನು ಕಿತ್ತಿದ್ದರು. ಆ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಕಠಿಣ ಸವಾಲು ನೀಡಿದ್ದರು. ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಅವರು, ಬುಮ್ರಾ ಇಲ್ಲವಾದಲ್ಲಿ ಭಾರತ ತಂಡ ದೊಡ್ಡ ಅಂತರದಲ್ಲಿ ಟೆಸ್ಟ್ ಸರಣಿಯನ್ನು ಸೋತಿರುತ್ತಿತ್ತು ಎಂದಿದ್ದಾರೆ.
ಬುಮ್ರಾ ಇಲ್ಲವಾಗಿದ್ದಲ್ಲಿ ಭಾರತ 0-5 ಅಂತರದಲ್ಲಿ ಸೋತಿರುತ್ತಿತ್ತು: ಭಜ್ಜಿ
“ಆಸ್ಟ್ರೇಲಿಯಾ ಪ್ರವಾಸದಲ್ಲಿ ಜಸ್ಪ್ರೀತ್ ಬುಮ್ರಾ ಇಲ್ಲವಾಗಿದ್ದರೆ, ಈ ಸರಣಿಯಲ್ಲಿ ಭಾರತ ತಂಡ 0-5 ಅಂತರದಲ್ಲಿ ಸೋಲು ಅನುಭವಿಸುತ್ತಿತ್ತು. ಪರ್ತ್ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಬುಮ್ರಾ ಉಳಿಸಿದ್ದರು. ಅಡಲೇಡ್ ಪಂದ್ಯದ ಬಳಿಕ ಅವರು ಇನ್ನುಳಿದ ಪಂದ್ಯಗಳಲ್ಲಿ ಭಾರತವನ್ನು ಉಳಿಸಿದ್ದರು. ಅವರು ಈ ಸರಣಿಯಲ್ಲಿ ಆಡಿಲ್ಲವಾಗಿದ್ದರೆ, ಭಾರತ 0-5 ಅಂತದಲ್ಲಿ ಸೋಲು ಅನುಭವಿಸಿರುತ್ತಿತ್ತು” ಎಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹರ್ಭಜನ್ ಸಿಂಗಹ್ ತಿಳಿಸಿದ್ದಾರೆ.
ಈ ಟೆಸ್ಟ್ ಸರಣಿಯಲ್ಲಿ ಬುಮ್ರಾ ಬೌಲ್ ಮಾಡಿದ 9 ಇನಿಂಗ್ಸ್ಗಳಿಂದ 13.06ರ ಸರಾಸರಿಯಲ್ಲಿ 32 ವಿಕೆಟ್ಗಳನ್ನು ಕಬಳಿಸಿದ್ದರು. ಇದರಲ್ಲಿ ಅವರು ಮೂರು ಬಾರಿ 5 ವಿಕೆಟ್ ಸಾಧನೆ ಮಾಡಿದ್ದರು. ಆಸ್ಟ್ರೇಲಿಯಾದಲ್ಲಿನ ಏಕೈಕ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ ಭಾರತೀಯ ಬೌಲರ್ ಎಂಬ ದಾಖಲೆಯನ್ನು ಜಸ್ಪ್ರೀತ್ ಬುಮ್ರಾ ಬರೆದಿದ್ದರು. ಆ ಮೂಲಕ 1977-78ರ ಸಾಲಿನಲ್ಲಿ 31 ವಿಕೆಟ್ಗಳನ್ನು ಕಬಳಿಸಿದ್ದ ಬಿಷನ್ ಸಿಂಗ್ ಬೇಡಿ ಅವರನ್ನು ಬುಮ್ರಾ ಹಿಂದಿಕ್ಕಿದ್ದರು.
ಕಪಿಲ್ ದೇವ್ ದಾಖಲೆ ಮುರಿದಿದ್ದ ಬುಮ್ರಾ
ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ಗಳನ್ನು ಕಬಳಿಸಿದ ಬೌಲರ್ಗಳ ಸಾಲಿನಲ್ಲಿ ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಜಸ್ಪ್ರೀತ್ ಬುಮ್ರಾ ಹಿಂದಿಕ್ಕಿದ್ದರು. ಕಪಿಲ್ ದೇವ್ ತಮ್ಮ ವೃತ್ತಿ ಜೀವನದಲ್ಲಿ ಆಸ್ಟ್ರೇಲಿಯಾದಲ್ಲಿ 51 ಟೆಸ್ಟ್ ವಿಕೆಟ್ಗಳನ್ನು ಕಬಳಿಸಿದ್ದರು. ಆದರೆಮ ಜಸ್ಪ್ರೀತ್ ಬುಮ್ರಾ ಅವರು ಆಸ್ಟ್ರೇಲಿಯಾದಲ್ಲಿ ಇಲ್ಲಿಯವರೆಗೂ ಆಡಿದ 12 ಪಂದ್ಯಗಳಿಂದ 64 ಟೆಸ್ಟ್ ವಿಕೆಟ್ಗಳನ್ನು ಪಡದಿದ್ದಾರೆ. ಇದರಲ್ಲಿ ಅವರು ನಾಲ್ಕು ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ.
ಈ ಸುದ್ದಿಯನ್ನು ಓದಿ: Jasprit Bumrah: ಇಂಗ್ಲೆಂಡ್ ವಿರುದ್ಧದ ಸರಣಿ; ಬುಮ್ರಾಗೆ ವಿಶ್ರಾಂತಿ?