Sunday, 5th January 2025

IND vs AUS: ಸ್ಯಾಮ್‌ ಕೊನ್‌ಸ್ಟಸ್‌ ವಿರುದ್ಧ ರೊಚ್ಚಿಗೆದ್ದ ಜಸ್‌ಪ್ರೀತ್‌ ಬುಮ್ರಾ! ವಿಡಿಯೊ

IND vs AUS: Jasprit Bumrah Engages In Massive Heated Argument With Sam Konstas At SCG | Watch

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಶುಕ್ರವಾರ ಆರಂಭವಾದ ಐದನೇ ಹಾಗೂ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೂರ್ನಿಯ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸುತ್ತಿವೆ. ಮೊದಲನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ ಮುನ್ನಡೆ ಸಾಧಿಸಿದೆ. ಇದರ ಜೊತೆಗ ಮೊದಲನೇ ದಿನದಾಟದ ಅಂತ್ಯದಲ್ಲಿ ಭಾರತ ತಂಡದ ನಾಯಕ ಜಸ್‌ಪ್ರೀತ್‌ ಬುಮ್ರಾ ಹಾಗೂ ಸ್ಯಾಮ್‌ ಕೊನ್‌ಸ್ಟಸ್‌ ಅವರ ನಡುವೆ ಮಾತಿನ ಚಕಮಕಿ ನಡೆಯಿತು.

ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆಸ್ಟ್ರೇಲಿಯಾದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಸ್ಯಾಮ್‌ ಕೊನ್‌ಸ್ಟಸ್‌, ತಮ್ಮ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಆದರೆ, ಅವರು ಮೆಲ್ಬರ್ನ್‌ ಟೆಸ್ಟ್‌ನಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳನ್ನು ಸ್ಲೆಡ್ಜ್‌ ಮಾಡುವ ಮೂಲಕ ಪ್ರವಾಸಿ ಆಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದರಲ್ಲಿಯೂ ವಿಶೇಷವಾಗಿ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಜೊತೆಗೆ ಕೊನ್‌ಸ್ಟಸ್‌ ಮಾತಿನ ಚಕಮಕಿ ನಡೆಸಿದ್ದರು. ಅಲ್ಲದೆ, ಯಶಸ್ವಿ ಜೈಸ್ವಾಲ್‌ ಬ್ಯಾಟ್‌ ಮಾಡುವ ವೇಳೆಯೂ ಆಸೀಸ್‌ ಬ್ಯಾಟರ್‌ ಸ್ಲೆಡ್ಜ್‌ ಮಾಡಿದ್ದರು.

IND vs AUS: 50ಕ್ಕೂ ಹೆಚ್ಚು ಎಸೆತಗಳನ್ನು ಆಡಿ ಇದೇ ಮೊದಲ ಬಾರಿ ಬೌಂಡರಿ ಗಳಿಸದ ವಿರಾಟ್‌ ಕೊಹ್ಲಿ!

ಜಸ್‌ಪ್ರೀತ್‌ ಬುಮ್ರಾ-ಕೊನ್‌ಸ್ಟಸ್‌ ನಡುವಿನ ಘಟನೆ ಏನು?

ಐದನೇ ಟೆಸ್ಟ್‌ ಪಂದ್ಯದ ಮೊದಲನೇ ದಿನವೂ ಸ್ಯಾಮ್‌ ಕೊನ್‌ಸ್ಟಸ್‌ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಅದೂ ಭಾರತ ತಂಡದ ನಾಯಕ ಜಸ್‌ಪ್ರೀತ್‌ ಬುಮ್ರಾ ಅವರ ಜೊತೆ. ಆಸ್ಟ್ರೇಲಿಯಾ ತಂಡದ ಪ್ರಥಮ ಇನಿಂಗ್ಸ್‌ನ ಮೂರನೇ ಓವರ್‌ನ ಕೊನೆಯ ಎಸೆತವನ್ನು ಹಾಕುವುದಕ್ಕೂ ಮುನ್ನ ಜಸ್‌ಪ್ರೀತ್‌ ಬುಮ್ರಾ ರನ್‌ ಅಪ್‌ ಪಡೆಯಲು ಆರಂಭಿಸಿದರು. ಆದರೆ, ಸ್ಟ್ರೈಕ್‌ನಲ್ಲಿದ್ದ ಉಸ್ಮಾನ್‌ ಖವಾಜ ಸಿದ್ದರಾಗಿರಲಿಲ್ಲ. ಇದನ್ನು ಗಮನಿಸಿದ ಬುಮ್ರಾ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಈ ವೇಳೆ ನಾನ್‌ಸ್ಟ್ರೈಕ್‌ನಲ್ಲಿ ನಿಂತಿದ್ದ ಸ್ಯಾಮ್‌ ಕೋನ್‌ಸ್ಟಸ್‌ ಅವರು ಕೂಡ ಬುಮ್ರಾ ಅವರನ್ನು ನೋಡಿ ಏನೋ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಜಸ್‌ಪ್ರೀತ್‌ ಬುಮ್ರಾ ಯುವ ಬ್ಯಾಟರ್‌ಗೆ ಮಾತಿನ ತಿರುಗೇಟು ನೀಡಿದರು. ಈ ವೇಳೇ ಇಬ್ಬರ ನಡುವೆ ಮಾತನಕ ಚಕಮಕಿ ನಡೆಯಿತು. ತಕ್ಷಣ ಅಂಪೈರ್‌ಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಸರಿದೂಗಿಸಿದರು.

ಈ ಘಟನೆಯ ಮುಂದಿನ ಎಸೆತ ಅಂದರೆ, ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಉಸ್ಮಾನ್‌ ಖವಾಜ ಅವರನ್ನು ಜಸ್‌ಪ್ರೀತ್‌ ಬುಮ್ರಾ ಔಟ್‌ ಮಾಡಿದರು. ಬುಮ್ರಾ ಎಸೆದಿದ್ದ ಆಫ್‌ ಸ್ಟಂಪ್‌ ಮೇಲಿನ ಎಸೆತವನ್ನು ಆಡಲು ಖವಾಜ ಪ್ರಯತ್ನಿಸಿದರು. ಆದರೆ, ಚೆಂಡು ಬ್ಯಾಟ್‌ನ ತುದಿಗೆ ತಾಗಿ ಸ್ಲಿಪ್‌ನಲ್ಲಿದ್ದ ಕೆಎಲ್‌ ರಾಹುಲ್‌ ಅವರ ಕೈ ಸೇರಿತ್ತು. ಈ ವೇಳೆ ಜಸ್‌ಪ್ರೀತ್‌ ಬುಮ್ರಾ ಆಸೀಸ್‌ ಆರಂಭಿಕ ಕೊನ್‌ಸ್ಟಸ್‌ ಅವರ ಕಡೆ ಮುಖ ಮಾಡಿ ಸಂಭ್ರಮಿಸಿದರು ಹಾಗೂ ಅವರಿಗೆ ತಿರುಗೇಟು ನೀಡಿದರು. ಇದಾದ ಬಳಿಕ ಮೊದಲನೇ ದಿನದಾಟ ಅಂತ್ಯವಾಯಿತು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಆಸ್ಟ್ರೇಲಿಯಾಗೆ ಆರಂಭಿಕ ಆಘಾತ

ಸ್ಯಾಮ್‌ ಕೊನ್‌ಸ್ಟಸ್‌ ಅವರು ಎರಡನೇ ದಿನವಾದ ಶನಿವಾರ ಕ್ರೀಸ್‌ಗೆ ಬರಲಿದ್ದಾರೆ. ಆ ಮೂಲಕ ಸ್ಯಾಮ್‌ ಕೊನ್‌ಸ್ಟಸ್‌ ಹಾಗೂ ಜಸ್‌ಪ್ರೀತ್‌ ಬುಮ್ರಾ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಮೊದಲನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ ಮೂರು ಓವರ್‌ಗಳ ಅಂತ್ಯಕ್ಕೆ ಒಂದು ವಿಕೆಟ್‌ ನಷ್ಟಕ್ಕೆ 9 ರನ್‌ ಗಳಿಸಿದೆ.

ಈ ಸುದ್ದಿಯನ್ನು ಓದಿ: IND vs AUS: ಸ್ಕಾಟ್‌ ಬೋಲೆಂಡ್‌ ಮಾರಕ ದಾಳಿ, ಭಾರತ 185ಕ್ಕೆ ಆಲ್‌ಔಟ್‌!