Saturday, 4th January 2025

IND vs AUS: ಸಿಡ್ನಿ ಟೆಸ್ಟ್‌ನಲ್ಲಿ ನಿತೀಶ್‌ ರೆಡ್ಡಿಗೆ ಹೊಸ ಬ್ಯಾಟಿಂಗ್‌ ಕ್ರಮಾಂಕ ನೀಡಿದ ಮೈಕಲ್‌ ಕ್ಲಾರ್ಕ್‌!

IND vs AUS: Michael Clarke wants 'genius' Nitish Kumar Reddy to bat at number 6 in Sydney Test

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ (IND vs AUS) ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿರುವ ಭಾರತದ ಯುವ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ಆಸೀಸ್‌ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ ಐದನೇ ಅಥವಾ ಸರಣಿಯ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಯುವ ಆಟಗಾರನಿಗೆ ನೂತನ ಬ್ಯಾಟಿಂಗ್‌ ಕ್ರಮಾಂಕವನ್ನು ಅವರು ನೀಡಿದ್ದಾರೆ.

ಪರ್ತ್‌ನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ನಿತೀಶ್‌ ಕುಮಾರ್‌ ರೆಡ್ಡಿ ತಮ್ಮ ಸೊಗಸಾದ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅವರು ಈ ಸರಣಿಯಲ್ಲಿ ಆಡಿದ ನಾಲ್ಕು ಪಂದ್ಯಗಳ ಏಳು ಇನಿಂಗ್ಸ್‌ಗಳಿಂದ 49ರ ಸರಾಸರಿಯಲ್ಲಿ 294 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಮೆಲ್ಬರ್ನ್‌ ಟೆಸ್ಟ್‌ ಪಂದ್ಯದಲ್ಲಿ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದ್ದರು.

ನಾಲ್ಕನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ನಿತೀಶ್‌ ರೆಡ್ಡಿ ಅವರು ಆಡಿದ್ದ 189 ಎಸೆತಗಳಲ್ಲಿ 11 ಮನಮೋಹಕ ಬೌಂಡರಿಗಳು ಹಾಗೂ ಒಂದು ಸಿಕ್ಸರ್‌ ಸಹಿಯ 114 ರನ್‌ಗಳನ್ನು ದಾಖಲಿಸಿದ್ದರು. ಇದನ್ನು ಗಮನಿಸಿದ ಮೈಕಲ್‌ ಕ್ಲಾರ್ಕ್‌, ನಿತೀಶ್‌ ರೆಡ್ಡಿ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕೆಂದು ಸಲಹೆ ನೀಡಿದ್ದಾರೆ.

IND vs AUS: ಸಿಡ್ನಿ ಟೆಸ್ಟ್‌ಗೂ ಮುನ್ನ ಆಸ್ಟ್ರೇಲಿಯಾದ ಪ್ರಧಾನಿಯನ್ನು ಭೇಟಿಯಾದ ಉಭಯ ತಂಡಗಳು!

ಮೈಕಲ್‌ ಕ್ಲಾರ್ಕ್‌ ಹೇಳಿದ್ದೇನು?

ಕ್ರಿಕೆಟ್‌ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಮೈಕಲ್‌ ಕ್ಲಾರ್ಕ್‌,”ರೆಡ್ಡಿ, ಎಂಟನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಈ ಚಿಕ್ಕ ಮಗು ಒಬ್ಬ ಅಪ್ಪಟ ಪ್ರತಿಭೆ. ಆರನೇ ಕ್ರಮಾಂಕದಲ್ಲಿ ಆಡಲು ಅವಕಾಶ ಸಿಗಲಿಲ್ಲವಾದರೂ ಅವರು ಕನಿಷ್ಠ ಏಳನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಅವರು ಭಾರತ ತಂಡದ ಪರ ಲೀಡಿಂಗ್‌ ರನ್‌ ಸ್ಕೋರರ್‌ ಆಗಿದ್ದಾರೆ. ಕೇವಲ 21ನೇ ವಯಸ್ಸಿನಲ್ಲಿ ಈ ಸಾಧನೆ ನಂಬಲು ಅಸಾಧ್ಯವಾಗಿದೆ. ಇಡೀ ಸರಣಿಯಲ್ಲಿ ಅವರನ್ನು ಕಡಿಮೆ ಮೌಲ್ಯ ಮಾಪನವನ್ನು ಮಾಡಲಾಗಿದೆ. ಅವರು ಆರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಅವರನ್ನು ಆರನೇ ಕ್ರಮಾಂಕದಲ್ಲಿ ಆಡಿಸಲು ಭಾರತಕ್ಕೆ ಅದ್ಭುತ ಆಯ್ಕೆ ಸಿಗಲಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಸೀಸ್‌ ಬೌಲರ್‌ಗಳಿಗೆ ಭಯ ಪಟ್ಟಿಲ್ಲ: ಕ್ಲಾರ್ಕ್‌

“ಅವರು ಪ್ರತಿಯೊಬ್ಬರ ಗಮನವನ್ನು ಸೆಳೆದಿದ್ದಾರೆ. ಆಸ್ಟ್ರೇಲಿಯಾದ ಯಾವುದೇ ಬೌಲರ್‌ಗೂ ಅವರು ಭಯಪಟ್ಟಿಲ್ಲ. ತಾಳ್ಮೆಯಿಂದ ಆಡಬೇಕಾದ ಸನ್ನಿವೇಶದಲ್ಲಿ ಅವರು ತಾಳ್ಮೆಯನ್ನು ತೋರಿಸಿದ್ದಾರೆ. ಕೆಳ ಕ್ರಮಾಂಕದಲ್ಲಿ ಅವರು ನಿಜಕ್ಕೂ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಅವರು ತಮ್ಮ ಉದ್ದೇಶವನ್ನು ತೋರಿಸಿದ್ದಾರೆ. ಅವರು ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಮೂರರಲ್ಲಿಯೂ ಉತ್ತಮವಾಗಿ ಕಂಡಿದ್ದಾರೆ,” ಎಂದು ಆಸೀಸ್‌ ಮಾಜಿ ನಾಯಕ ತಿಳಿಸಿದ್ದಾರೆ.