ನವದೆಹಲಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡಲು ಭಾರತ ತಂಡ ಈಗಾಗಲೇ ಆಸ್ಟ್ರೇಲಿಯಾಗೆ (IND vs AUS) ತಲುಪಿದೆ. ಆದರೆ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವೈಯಕ್ತಿಕ ಕಾರಣಗಳಿಂದಾಗಿ ಪರ್ತ್ ಟೆಸ್ಟ್ಗೆ ಅಲಭ್ಯರಾಗಲಿದ್ದಾರೆಂದು ವರೆದಿಯಾಗಿತ್ತು. ರೋಹಿತ್ ಶರ್ಮಾ ಹಾಗೂ ರಿತಿಕಾ ಸಾಜ್ದೇ ದಂಪತಿಗೆ ಶುಕ್ರವಾರ ಗಂಡು ಮಗು ಜನಿಸಿದೆ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಅವರು ಮೊದಲನೇ ಟೆಸ್ಟ್ಗೂ ಮುನ್ನ ಆಸ್ಟ್ರೇಲಿಯಾಗೆ ತೆರಳಲಿದ್ದಾರೆಂದು ವರದಿಯಾಗಿದೆ. ರೋಹಿತ್ ಶರ್ಮಾ ಜತೆ ಹಿರಿಯ ವೇಗಿ ಮೊಹಮ್ಮದ್ ಶಮಿ ಕೂಡ ಪ್ರಯಾಣ ಬೆಳೆಸಲಿದ್ದಾರೆಂದು ಹೇಳಲಾಗುತ್ತಿದೆ.
ಪರ್ತ್ನಲ್ಲಿ ನವೆಂಬರ್ 22ರಂದು ಆರಂಭವಾಗುವ ಮೊದಲನೇ ಟೆಸ್ಟ್ಗೂ ಮುನ್ನ ನಾಯಕ ರೋಹಿತ್ ಶರ್ಮಾ ಅವರ ಜೊತೆ ಹಿರಿಯ ವೇಗಿ ಮೊಹಮ್ಮದ್ ಶಮಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲು ಸಜ್ಜಾಗುತ್ತಿದ್ದಾರೆಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಆದರೆ, ಪರ್ತ್ ಟೆಸ್ಟ್ಗೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಈ ಇಬ್ಬರೂ ಆಟಗಾರರು ಆಡಲಿದ್ದಾರೆಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ. ಈ ಹಿಂದೆ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಿದ್ದ ವೇಳೆ ಮೊಹಮ್ಮದ್ ಶಮಿ ಹೆಸರನ್ನು ಸೇರಿಸಿರಲಿಲ್ಲ. ಏಕೆಂದರೆ ಆ ವೇಳೆ ಅವರು ಸಂಪೂರ್ಣ ಫಿಟ್ ಇರಲಿಲ್ಲ.
IND vs AUS: ಪರ್ತ್ ಟೆಸ್ಟ್ ಪಂದ್ಯಕ್ಕೆ ರೋಹಿತ್ ಲಭ್ಯ!
ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ್ದ ಮೊಹಮ್ಮದ್ ಶಮಿ ಸ್ನೇಹಿತ ಮೊಹಮ್ಮದ್ ಬದ್ರುದ್ದಿನ್, ತನ್ನ ಗೆಳೆಯ ಮೊಹಮ್ಮದ್ ಶಮಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ ಹಾಗೂ ಅಡಿಲೇಡ್ನಲ್ಲಿ ಎರಡನೇ ಟೆಸ್ಟ್ ಮುಗಿದ ಬಳಿಕ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆಂದು ಮಾಹಿತಿ ನೀಡಿದ್ದರು.
“ಅಡಿಲೇಡ್ ಟೆಸ್ಟ್ ಬಳಿಕ ಅವರು ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಶಮಿ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ, ವಿಕೆಟ್ಗಳನ್ನು ಪಡೆಯುತ್ತಿದ್ದಾರೆ ಹಾಗೂ ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಿದ್ದಾರೆ. ಹಾಗಾಗಿ ಆಸ್ಟ್ರೇಲಿಯಾ ಪ್ರವಾಸದ ಎರಡನೇ ಅವಧಿಯ ಭಾರತ ತಂಡಕ್ಕೆ ಅವರು ಅತ್ಯಂತ ನಿರ್ಣಾಯಕವಾಗಿದ್ದಾರೆ,” ಎಂದು ಬದ್ರುದ್ದಿನ್ ತಿಳಿಸಿದ್ದಾರೆ.
Mohammed Shami: ಕಮ್ಬ್ಯಾಕ್ ಪಂದ್ಯದಲ್ಲಿ 4 ವಿಕೆಟ್ ಕಿತ್ತು ಮಿಂಚಿದ ಶಮಿ
ರಣಜಿ ಪಂದ್ಯದಲ್ಲಿ ಮಿಂಚಿದ್ದ ಶಮಿ
ಬರೋಬ್ಬರಿ ಒಂದು ವರ್ಷದ ಬಳಿಕ ಮೊಹ್ಮಮದ್ ಶಮಿ ಅವರು ಇತ್ತೀಚೆಗೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದರು. ಮಧ್ಯ ಪ್ರದೇಶ ವಿರುದ್ದ ಪಶ್ಚಿಮ ಬಂಗಾಳದ ಪರ ಆಡಿದ ಮೊಹಮ್ಮದ್ ಶಮಿ, ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದರು. ಬೌಲ್ ಮಾಡಿ ಒಂದು ವರ್ಷ ಕಳೆದರೂ ತಮ್ಮ ಲೈನ್-ಲೆನ್ತ್ ಅದ್ಭುತವಾಗಿತ್ತು. ಅದರಲ್ಲಿಯೂ ಅವರ ಸ್ವಿಂಗ್ ಹಾಗೂ ಸೀಮ್ ಪ್ರೆಸೆಂಟೇಷನ್ ಎಲ್ಲರ ಗಮನ ಸೆಳೆಯಿತು. ಇವರು ಈ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಬೌಲ್ ಮಾಡಿದ್ದ 19 ಓವರ್ಗಳಲ್ಲಿ 54 ರನ್ಗಳನ್ನು ನೀಡುವ ಮೂಲಕ 4 ವಿಕೆಟ್ಗಳನ್ನು ಕಬಳಿಸಿದರು.
ಅಲ್ಲದೆ ದ್ವಿತೀಯ ಇನಿಂಗ್ಸ್ನಲ್ಲಿಯೂ ತಮ್ಮ ಬೌಲಿಂಗ್ ಪ್ರದರ್ಶನವನ್ನು ಮುಂದುವರಿಸಿದ ಅವರು ಮೂರು ವಿಕೆಟ್ಗಳನ್ನು ಕಬಳಿಸಿದರು. ಇನ್ನು ಅವರು ಬ್ಯಾಟಿಂಗ್ನಲ್ಲಿಯೂ ಬಂಗಾಳ ತಂಡಕ್ಕೆ ಕೊಡುಗೆಯನ್ನು ನೀಡಿದರು. 36 ಎಸೆತಗಳನ್ನು ಎದುರಿಸಿದ ಶಮಿ 37 ರನ್ಗಳನ್ನು ಗಳಿಸಿದರು. ಇದರಲ್ಲಿ ಅವರು ಎರಡು ಬೌಂಡರಿಗಳು ಹಾಗೂ ಎರಡು ಸಿಕ್ಸರ್ಗಳನ್ನು ಸಿಡಿಸಿದರು.