Friday, 3rd January 2025

IND vs AUS: ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಾರ್ದಿಕ್‌ ಪಾಂಡ್ಯಗಿಂತ ನಿತೀಶ್‌ ರೆಡ್ಡಿ ಉತ್ತಮ ಎಂದ ಗವಾಸ್ಕರ್‌!

IND vs AUS: 'Nitish Reddy definitely better than Hardik Pandya in Test cricket',says Sunil Gavaskar

ನವದೆಹಲಿ: ಆಸ್ಟ್ರೇಲಿಯಾ ವಿರುದ್ದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ (IND vs AUS)ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಭಾರತ ತಂಡದ ಆಲ್‌ರೌಂಡರ್‌ ನಿತೀಶ್‌ ರೆಡ್ಡಿ ಅವರನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಹಾರ್ದಿಕ್‌ ಪಾಂಡ್ಯ ಅವರ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನದ ಆರಂಭಿಕ ದಿನಗಳಿಗೆ ಹೋಲಿಕೆ ಮಾಡಿದ ನಿತೀಶ್‌ ರೆಡ್ಡಿಯ ಬ್ಯಾಟಿಂಗ್‌ ಪ್ರದರ್ಶನ ಅತ್ಯುತ್ತಮವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

21ನೇ ವಯಸ್ಸಿನ ನಿತೀಶ್‌ ರೆಡ್ಡಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಆಸ್ಟ್ರೇಲಿಯಾ ದಂತಹ ಕಠಿಣ ಬ್ಯಾಟಿಂಗ್‌ ಕಂಡೀಷನ್ಸ್‌ನಲ್ಲಿಯೂ ನಿತೀಶ್‌ ರೆಡ್ಡಿ ಗಮನಾರ್ಹ ಪ್ರದರ್ಶನವನ್ನು ತೋರಿದ್ದಾರೆ. ಪಂದ್ಯದ ಒತ್ತಡದ ಸನ್ನಿವೇಶದಲ್ಲಿಯೂ ಅವರು ರನ್‌ ಗಳಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಅವರು ಮೆಲ್ಬರ್ನ್‌ನಲ್ಲಿ ನಡೆದಿದ್ದ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಚೊಚ್ಚಲ ಶತಕವನ್ನು ಬಾರಿಸಿದ್ದರು. ಇದರ ಹೊರತಾಗಿಯೂ ಟೀಮ್‌ ಇಂಡಿಯಾ 184 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿತ್ತು.

Nitish Kumar Reddy: ಚೊಚ್ಚಲ ಶತಕ ಬಾರಿಸಿ ದಾಖಲೆ ಬರೆದ ನಿತೀಶ್​ ​ರೆಡ್ಡಿ

ಸ್ಪೋರ್ಟ್ಸ್‌ ಅಂಕಣದಲ್ಲಿ ಸುನೀಲ್‌ ಗವಾಸ್ಕರ್‌, “ಮೆಲ್ಬೋರ್ನ್ ಟೆಸ್ಟ್ ಭಾರತೀಯ ಕ್ರಿಕೆಟ್‌ನ ಪ್ರಕಾಶಮಾನವಾದ ಯುವ ತಾರೆಗಳಲ್ಲಿ ಒಬ್ಬರಾದ ನಿತೀಶ್ ಕುಮಾರ್ ರೆಡ್ಡಿಯನ್ನು ಮುನ್ನೆಲೆಗೆ ತಂದಿತು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಹೈದರಾಬಾದ್‌ ಫ್ರಾಂಚೈಸಿ ಪರ ಆಡುವಾಗ ಅವರು ಎಲ್ಲರ ಗಮನವನ್ನು ಸೆಳೆದಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿಯೂ ಅವರಿಗೆ ಹೆಚ್ಚಿನ ಅನುಭವ ಇಲ್ಲ, ಆದರೂ ಅವರನ್ನು ಟೆಸ್ಟ್‌ ಕ್ರಿಕೆಟ್‌ಗೆ ತಂದ ಅಜಿತ್‌ ಅಗರ್ಕರ್‌ ಸಾರಥ್ಯದ ಆಯ್ಕೆ ಸಮಿತಿಗೆ ಇದರ ಶ್ರೇಯ ಸಲ್ಲಬೇಕು,” ಎಂದು ಹೇಳಿದ್ದಾರೆ.

ಪರ್ತ್‌ ಹಾಗೂ ಅಡಿಲೇಡ್‌ ಟೆಸ್ಟ್‌ ಪಂದ್ಯಗಳಲ್ಲಿ ಅವರು 40 ರನ್‌ಗಳ ಕೊಡುಗೆಯನ್ನು ನೀಡಿದ್ದರು ಹಾಗೂ ಮೆಲ್ಬರ್ನ್‌ ಟೆಸ್ಟ್‌ ಪಂದ್ಯದಲ್ಲಿ ಅವರು ಶತಕವನ್ನು ಸಿಡಿಸಿದ್ದರು. ಈ ಪಂದ್ಯದಲ್ಲಿ ಅವರು ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌, ಸ್ಕಾಟ್‌ ಬೋಲೆಂಡ್‌ ಹಾಗೂ ನೇಥನ್‌ ಲಯಾನ್‌ ಅವರನ್ನು ಸಮರ್ಥವಾಗಿ ಎದುರಿಸಿದ್ದರು. ಆ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಆದರೆ, ಅವರು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವುದು ಇನ್ನೂ ಬಾಕಿ ಇದೆ. ಇವರು ಬೌಲಿಂಗ್‌ನಲ್ಲಿಯೂ ಮಿಂಚಿದರೆ ಭಾರತ ತಂಡಕ್ಕೆ ಕೀ ಆಲ್‌ರೌಂಡರ್‌ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

“ಪಂದ್ಯದ ಸನ್ನಿವೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಆಡುವ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆಂಬುದಕ್ಕೆ ಪರ್ತ್‌ ಟೆಸ್ಟ್‌ ಪಂದ್ಯವೇ ಸಾಕ್ಷಿ. ಪಂದ್ಯದಿಂದ ಪಂದ್ಯಕ್ಕೆ ಅವರ ಕ್ರಿಕೆಟಿಂಗ್‌ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿದೆ,” ಎಂದು ಹೇಳಿದ್ದಾರೆ ಸುನೀಲ್‌ ಗವಾಸ್ಕರ್‌. ನಿತೀಶ್‌ ಕುಮಾರ್‌ ರೆಡ್ಡಿ ಅವರು ಆಡಿದ ನಾಲ್ಕು ಟೆಸ್ಟ್‌ ಪಂದ್ಯಗಳಿಂದ 294 ರನ್‌ಗಳನ್ನು ಸಿಡಿಸಿದ್ದಾರೆ ಹಾಗೂ ಬೌಲಿಂಗ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಹಾರ್ದಿಕ್‌ ಪಾಂಡ್ಯಗಿಂತ ನಿತೀಶ್‌ ರೆಡ್ಡಿ ಬೆಸ್ಟ್‌ ಎಂದ ಗವಾಸ್ಕರ್‌

“ಮೆಲ್ಬರ್ನ್‌ನಲ್ಲಿ ಭಾರತ ತಂಡ ಬಹುತೇಕ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ಬಂದ ನಿತೀಶ್‌ ಕುಮಾರ್‌ ರೆಡ್ಡಿ ತಮ್ಮ ಮನಮೋಹಕ ಬ್ಯಾಟಿಂಗ್‌ನಿಂದ ಚೊಚ್ಚಲ ಶತಕವನ್ನು ಸಿಡಿಸಿದ್ದರು. ಆ ಮೂಲಕ ದೀರ್ಘಾವಧಿಗೆ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಹಾರ್ದಿಕ್‌ ಪಾಂಡ್ಯ ಟೆಸ್ಟ್‌ಗೆ ಅಲಭ್ಯರಾದ ಬಳಿಕ ಭಾರತ ತಂಡದಲ್ಲಿ ಮಧ್ಯಮ ವೇಗಿ ಹಾಗೂ ಬ್ಯಾಟ್ಸ್‌ಮನ್‌ಗಾಗಿ ಟೀಮ್‌ ಮ್ಯಾನೇಜ್‌ಮೆಂಟ್‌ ಹುಡುಕುತ್ತಿದೆ. ಬೌಲಿಂಗ್‌ ಪ್ರಕ್ರಿಯೆಯಲ್ಲಿ ರೆಡ್ಡಿ ಇನ್ನೂ ಸಾಗುತ್ತಿದ್ದಾರೆ ಆದರೆ, ಬ್ಯಾಟಿಂಗ್‌ನಲ್ಲಿ ಹಾರ್ದಿಕ್‌ ಪಾಂಡ್ಯಗಿಂತ ಉತ್ತಮವಾಗಿದ್ದಾರೆ,” ಎಂದು ಸುನೀಲ್‌ ಗವಾಸ್ಕರ್‌ ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ʻಅಪ್ಪನ ಕಣ್ಣೀರು ನೋಡಿದ್ದೇನೆʼ- ತಂದೆಯ ತ್ಯಾಗವನ್ನು ನೆನೆದ ನಿತೀಶ್‌ ರೆಡ್ಡಿ!