Saturday, 23rd November 2024

IND vs AUS: ಜಸ್‌ಪ್ರೀತ್‌ ಬುಮ್ರಾ, ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ಗೆ ಆಡುವುದು ಕಷ್ಟ ಎಂದ ಜೇಸನ್‌ ಗಿಲೆಸ್ಪಿ!

IND vs AUS: Pakistan coach Jason Gillespie hails Jasprit Bumrah and Pat Cummins as 'unplayable' bowlers

ನವದೆಹಲಿ: ಭಾರತ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ ಹಾಗೂ ಆಸ್ಟ್ರೇಲಿಯಾ ವೇಗಿ ಪ್ಯಾಟ್‌ ಕಮಿನ್ಸ್‌ ಅವರನ್ನು ಪಾಕಿಸ್ತಾನ ತಂಡದ ಹಂಗಾಮಿ ಕೋಚ್‌ ಜೇಸನ್‌ ಗಿಲೆಸ್ಪಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಈ ಇಬ್ಬರೂ ಬೌಲರ್‌ಗಳಿಗೆ ಬ್ಯಾಟ್‌ ಮಾಡುವುದು ಕಷ್ಟಕರವಾಗಿದೆ ಎಂದು ಆಸೀಸ್‌ ಮಾಜಿ ವೇಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನವೆಂಬರ್‌ 22ರಂದು ಆರಂಭವಾಗಲಿರುವ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ (IND vs AUS) ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಕಾದಾಟ ನಡೆಸಲಿವೆ. ಈ ಸರಣಿಯಲ್ಲಿ ಬುಮ್ರಾ ಮತ್ತು ಕಮಿನ್ಸ್‌ ಮುಖಾಮುಖಿಯಾಗಲಿದ್ದಾರೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ಸಂದರ್ಶನದಲ್ಲಿ ಮಾತನಾಡಿದ್ದ ಜೇಸನ್‌ ಗಿಲೆಸ್ಪಿ ಅವರು, ಜಸ್‌ಪ್ರೀತ್‌ ಬುಮ್ರಾ ಮತ್ತು ಪ್ಯಾಟ್‌ ಕಮಿನ್ಸ್‌ ಅವರ ಬೌಲಿಂಗ್‌ ಅಸಾಧಾರಣ ಕೌಶಲವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೆ ಇವರ ಸ್ಥಿರತೆ, ನಿಯಂತ್ರಣ, ಸಾಮರ್ಥ್ಯ, ಸ್ಟ್ರೈಕ್‌, ಸ್ಪರ್ಧಾತ್ಮಕ ಮನೋಭಾವವನ್ನು ಕೊಂಡಾಡಿದ್ದಾರೆ. ಮುಂಬರುವ ಟೆಸ್ಟ್‌ ಸರಣಿಯಲ್ಲಿ ಉಭಯ ತಂಡಗಳಿಗೆ ಈ ಇಬ್ಬರೂ ಅತ್ಯಂತ ನಿರ್ಣಾಯಕವಾಗಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಬ್ಯಾಟ್ಸ್‌ಮನ್‌ಗಳ ಮೇಲೆ ಬೌಲಿಂಗ್‌ ದಾಳಿ ನಡೆಸುವ ವಿಷಯದಲ್ಲಿ ಈ ಇಬ್ಬರೂ ಬೌಲರ್‌ಗಳು ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಇಬ್ಬರಲ್ಲಿ ಅತ್ಯುತ್ತಮ ವೇಗವಿದ್ದು, ಚಾಲೆಜಿಂಗ್‌ ಲೈನ್‌ ಅಂಡ್‌ ಲೆನ್ತ್‌ ಹಾಕಬಲ್ಲರು. ಇವರು ಯಾವಾಗಲೂ ಬ್ಯಾಟ್ಸ್‌ಮನ್‌ಗಳ ತಂತ್ರವನ್ನು ತಮ್ಮ ಬೌಲಿಂಗ್‌ ಮೂಲಕ ಪ್ರಶ್ನೆಯನ್ನು ಮಾಡುತ್ತಾರೆ. ಬುಮ್ರಾ ಮತ್ತು ಕಮಿನ್ಸ್‌ ಎದುರು ಬ್ಯಾಟ್ಸ್‌ಮನ್‌ಗಳು ಸ್ವಲ್ಪ ಎಡವಿದರೂ ವಿಕೆಟ್‌ ಒಪ್ಪಿಸಲಿದ್ದಾರೆ,” ಎಂದು ಪಾಕ್‌ ಕೋಚ್‌ ತಿಳಿಸಿದ್ದಾರೆ.

“ತಮ್ಮ ಆಕ್ರಮಣತೆ ಮತ್ತು ಶಿಸ್ತಿನ ಮೂಲಕ ಈ ಇಬ್ಬರೂ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳು ಆಡಲಾಗದ ಎಸೆತಗಳನ್ನು ಹಾಕಬಲ್ಲರು. ತಡವಾಗಿ ಸ್ವಿಂಗ್‌ ಮಾಡಬಲ್ಲರು ಅಥವಾ ಹೆಚ್ಚುವರಿ ವೇಗವಾಗಿ ಹಾಕಬಲ್ಲ ಅಥವಾ ಯಾವುದೇ ಪಿಚ್‌ನಲ್ಲಿಯಾದರೂ ಬೌಲ್‌ ಮಾಡಬಲ್ಲ ಸಾಮರ್ಥ್ಯವನ್ನು ಇವರಿಬ್ಬರೂ ಹೊಂದಿದ್ದಾರೆ. ಈ ಸಾಮರ್ಥ್ಯ ಯಾವುದೇ ಬೌಲರ್‌ಗಳಿಗೆ ಇರುವುದಿಲ್ಲ,” ಎಂದು ಜೇಸನ್‌ ಗಿಲೆಸ್ಪಿ ಹೇಳಿದ್ದಾರೆ.

ಭಾರತ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ಕೀ ವೇಗಿ

ಆಸ್ಟ್ರೇಲಿಯಾದಲ್ಲಿ ಜಸ್‌ಪ್ರೀತ್‌ ಬುಮ್ರಾ ಅವರು 7 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ ಹಾಗೂ ೩೨ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ 21.25ರ ಸರಾಸರಿ ಮತ್ತು ಕೇವಲ 2.47ರ ಎಕಾನಮಿ ರೇಟ್‌ನಲ್ಲಿ ರನ್‌ಗಳನ್ನು ನೀಡಿದ್ದಾರೆ. ಇದೀಗ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿಯೂ ಭಾರತ ತಂಡಕ್ಕೆ ಉಪನಾಯಕನಾಗಿರುವ ಅವರು, ವೇಗದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ. ಹಾಗಾಗಿ ಭಾರತ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ನಿರ್ಣಾಯಕವಾಗಿದ್ದಾರೆ.

ಆಸ್ಟ್ರೇಲಿಯಾಗೆ ಕಮಿನ್ಸ್‌ ಪ್ರಮುಖ ವೇಗಿ

ಇನ್ನು ಆಸ್ಟ್ರೇಲಿಯಾ ತಂಡಕ್ಕೂ ಕೂಡ ಪ್ಯಾಟ್‌ ಕಿಮಿನ್ಸ್‌ ಕೀ ಬೌಲರ್‌ ಆಗಿದ್ದಾರೆ. ಇವರ ಜೊತೆಗೆ ಮಿಚೆಲ್‌ ಸ್ಟಾರ್ಕ್‌ ಮತ್ತು ಜಾಶ್‌ ಹೇಝಲ್‌ವುಡ್‌ ಒಳಗೊಂಡ ಆಸೀಸ್‌ ವೇಗದ ಬೌಲಿಂಗ್‌ ಕೂಡ ಅಪಾಯಕಾರಿಯಿಂದ ಕೂಡಿದ್ದು, ಭಾರತ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲು ಎದುರಾಗಲಿದೆ.
ಇದರ ಜೊತೆಗೆ ನೇಥನ್‌ ಲಯಾನ್‌ ಅವರು ಸ್ಪಿನ್‌ ಮೂಲಕ ಬೌಲಿಂಗ್‌ ವಿಭಾಗಕ್ಕೆ ವೈವಿಧ್ಯತೆಯನ್ನು ತಂದುಕೊಡಲಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಕೊಹ್ಲಿ-ರೋಹಿತ್‌ ಅಲ್ಲ, ಟೆಸ್ಟ್‌ ಸರಣಿಯಲ್ಲಿ ಗರಿಷ್ಠ ರನ್‌ ಗಳಿಸಬಲ್ಲ ಬ್ಯಾಟರ್ಸ್‌ ಆರಿಸಿದ ರಿಕಿ ಪಾಂಟಿಂಗ್‌!